ಮಂಗಳೂರು, ಮೇ 28: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಾಂಜಾರು ಮಲೆಗೆ ಕಳೆದ ವರ್ಷ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಭೇಟಿ ನೀಡಿ (32 ವರ್ಷಗಳ ಬಳಿಕ ಜಿಲ್ಲಾಧಿಕಾರಿಯೊಬ್ಬರ ಭೇಟಿ) ಅಲ್ಲಿನ ಮಲೆಕುಡಿಯ ನಿವಾಸಿಗಳಲ್ಲಿ ಅಭಿವೃದ್ಧಿಯ ಆಶಾಭಾವ ಮೂಡಿಸಿದ್ದರೆ, ಈ ವರ್ಷ ಬಾಂಜಾರು ಮಲೆಯಲ್ಲಿ ಮತಗಟ್ಟೆ ಸ್ಥಾಪಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೊಂದು ಹೊಸ ಮುನ್ನುಡಿ ಬರೆದಿದ್ದಾರೆ.
ಬಾಂಜಾರುಮಲೆಯಲ್ಲಿ ಪ್ರಸ್ತುತ 106 ಮತದಾರರಿದ್ದು, ಈ ಹಿಂದೆಯೆಲ್ಲ ಚುನಾ ವಣೆಯ ಸಂದರ್ಭಗಳಲ್ಲಿ ಇವರು ಸುಮಾರು 30 ಕಿ.ಮೀ. ದೂರದ ಗಂಡಿಬಾಗಿಲಿಗೆ ತೆರಳಿ ಹಕ್ಕು ಚಲಾಯಿಸಬೇಕಿತ್ತು. ಆದರೆ ಮೇ 29ರಂದು ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ಬಾಂಜಾರುಮಲೆಯ ಮತದರಾರು ಇಲ್ಲಿನ ಸಮುದಾಯ ಭವನದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.
ಸ್ಥಳೀಯರಾದ 80ರ ಹರೆಯದ ಬೈರು ಮಲೆಕುಡಿಯ ಅವರು ಸಮುದಾಯದ ಭವನದ ಹೊರಬಾಗಿಲಿನ ಗೋಡೆಗೆ ಮತಗಟ್ಟೆ ಸಂಖ್ಯೆ(102 ಎ) ಎಂಬ ಚೀಟಿಯನ್ನು ಅಂಟಿಸುವ ಮೂಲಕ ಮತಗಟ್ಟೆಗೆ ಚಾಲನೆ ನೀಡಿದರು. ‘‘ನಮ್ಮ ಮನೆಯ ಬಳಿಗೇ ಮತ ಗಟ್ಟೆ ಬಂದಿರುವುದು ತುಂಬಾ ಖುಷಿಯಾಗಿದೆ. ನಾನು ಈವರೆಗಿನ ಚುನಾವಣೆಗಳಲ್ಲಿ ಸುಮಾರು 30 ಕಿ.ಮೀ. ದೂರದ ಗಂಡಿಬಾಗಿಲಿಗೆ ತೆರಳಿ ಮತ ಚಲಾಯಿಸುತ್ತಿದ್ದೆ’’ ಎಂದು ಬೈರು ಮಲೆಕುಡಿಯ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಮತಗಟ್ಟೆ ಆರಂಭಿಸಿರುವ ಬಗ್ಗೆ ಸ್ಥಳೀಯರಿಂದ ಜಿಲ್ಲಾಧಿಕಾರಿಗೆ ಅಭಿನಂದನೆ ವ್ಯಕ್ತವಾಯಿತು. ಬಳಿಕ ಜಿಲ್ಲಾಧಿಕಾರಿಯವರು ಸಮು ದಾಯ ಭವನದೊಳಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸ್ಥಳೀಯರ ಅಹವಾಲುಗಳನ್ನು ಆಲಿಸಿದರು. ಅಲ್ಲದೆ ಬಾಂಜಾರುಮಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಕಾಮಗಾರಿಗಳು, ಕೈಗೊಂಡ ಯೋಜನೆಗಳನ್ನು ಪರಿಶೀಲನೆ ನಡೆಸಿದರು.
ಕಳೆದ ಒಂದು ವರ್ಷದಲ್ಲಿ ಬಾಂಜಾರು ಮಲೆಯ ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಚಾರ್ಮಾಡಿ ಘಾಟಿಯ 9ನೆ ತಿರುವಿನಿಂದ 6 ಕಿ.ಮೀ. ಕಡಿದಾದ ಕಚ್ಚಾ ರಸ್ತೆಯಲ್ಲಿ ಬಾಂಜಾರು ಮಲೆಗೆ ಸಾಗಬೇಕು. ಅದೂ ಖಾಸಗಿ ಸಂಸ್ಥೆ ಯೊಂದರ ಜಮೀನನ್ನು ಹಾದು ಬರಬೇಕಾಗಿತ್ತು. ಇದು ರಸ್ತೆ ಅಭಿವೃದ್ಧಿ ಅಧಿಕಾರಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿತ್ತು. ಆದರೆ ಕಳೆದ ಜೂನ್ 5ರಂದು ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಗೆ ಭರ ವಸೆ ನೀಡಿದ್ದರು. ಅದರಂತೆ ಇದೀಗ ಬಾಂಜಾರು ಮಲೆಯಿಂದ ಕಕ್ಕಿಂಜೆಗೆ ಹೋಗುವ ರಸ್ತೆಯ 500 ಮೀಟರ್ ಉದ್ದಕ್ಕೆ 30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ಹಾಕಲಾಗಿದೆ.
ಉಳಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಕಡಿ ದಾದ ಕಡೆಗಳಲ್ಲಿ ಅಗಲಗೊಳಿಸಿ ಸಮ ತಟ್ಟುಗೊಳಿಸುವ ಹಾಗೂ ಕೆಲವು ಕಡೆಗಳಲ್ಲಿ ಮೋರಿಗಳ ನಿರ್ಮಾಣ ಕಾರ್ಯ ನಡೆದಿದೆ. ಹಾಗಿದ್ದರೂ ಜೀಪ್‌ನಂತಹ ವಾಹನ ಗಳನ್ನು ಹೊರತುಪಡಿಸಿ ಈ ರಸ್ತೆಯಲ್ಲಿ ವಾಹನ ಸಂಚಾರ ದುರ್ಗಮ. ಪ್ರಸ್ತುತ ಬಾಂಜಾರುಮಲೆಯಲ್ಲಿ 38 ಕುಟುಂಬಗಳ ಸುಮಾರು 180 ನಿವಾಸಿಗಳಿದ್ದಾರೆ. ಇವರೆಲ್ಲಾ ನಗರಕ್ಕೆ ಸಂಪರ್ಕ ಪಡೆಯಬೇಕಾದರೆ ಇಲ್ಲಿ ಸರ್ವೀಸ್ ನಡೆಸುತ್ತಿರುವ ನಾಲ್ಕು ಜೀಪ್‌ಗಳ ಮೂಲಕವೇ ಬೆಟ್ಟಗುಡ್ಡಗಳ ನಡುವಿನ ಕಲ್ಲುಗುಂಡಿ ಎತ್ತರ ತಗ್ಗುಗಳ ನಡುವಿನ ಸುಮಾರು 9 ಕಿ.ಮೀ. ರಸ್ತೆಯನ್ನು ಕ್ರಮಿಸಬೇಕು.
ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 2014-15ನೆ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆಯ ಪರಿಶಿಷ್ಟ ವರ್ಗದ ಮಲೆಗುಡಿಯ ಜನಾಂಗದ ಒಟ್ಟು 38 ಕುಟುಂಬಗಳಿಗೆ ಆರು ತಿಂಗಳ ಪೌಷ್ಟಿಕ ಆಹಾರವನ್ನು ಅಂಗನವಾಡಿ ಮೂಲಕ ವಿತರಿಸಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಪೌಷ್ಟಿಕ ಆಹಾರ ಇನ್ನೂ ಬಂದಿಲ್ಲ. ಅಕ್ಕಿ ಚೆನ್ನಾಗಿಲ್ಲ. ಪ್ರಸ್ತುತ ಪಡಿತರ ತರಲು ಕಕ್ಕಿಂಜೆಗೆ ಹೋಗಬೇಕು. ಅದಕ್ಕಾಗಿ ಸುಮಾರು 600 ರೂ. ಖರ್ಚು ಮಾಡಿಕೊಂಡು ಜೀಪ್‌ನಲ್ಲಿ ಹೋಗಬೇಕಾದ್ದರಿಂದ, ಅದನ್ನು ಇಲ್ಲಿಯೇ ವಿತರಿಸುವ ವ್ಯವಸ್ಥೆ ಮಾಡಿ ಎಂಬ ಸ್ಥಳೀ ಯರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ಪ್ರಸಕ್ತ ಸಾಲಿಗೆ ಟೆಂಡರ್ ಕರೆಯಲಾಗಿದ್ದು, ಪೌಷ್ಟಿಕ ಆಹಾರ ದೊರೆಯಲಿದೆ ಎಂದರು. ಗುಣಮಟ್ಟದ ಅಕ್ಕಿಯನ್ನು ನೀಡುವಂತೆ ಹಾಗೂ ಸಾಧ್ಯವಾದಷ್ಟು ನಿವಾಸಿಗಳಿಗೆ ಅನು ಕೂಲಕರ ಆಗುವವರೆಗೆ ಸಂಚಾರಿ ಪಡಿತರ ವ್ಯವಸ್ಥೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಇಲಾ ಖೆಯ ಮೂಲಕ ಟೈಲರಿಂಗ್ ತರಬೇತಿ ಪಡೆದ 18 ಮಂದಿ ಮಲೆಕುಡಿಯ ಅಭ್ಯರ್ಥಿಗಳಿಗೆ ತಲಾ 2,000 ರೂ.ನಂತೆ 3 ತಿಂಗಳಿಗೆ 6,000 ರೂ. ಸ್ಟೈಫಂಡ್ ಹಾಗೂ ಹೊಲಿಗೆ ಯಂತ್ರಗಳ ಒಟ್ಟು 2.83 ಲಕ್ಷ ರೂ. ವೆಚ್ಚದಲ್ಲಿ ಒದಗಿಸಲಾಗಿದೆ. 15 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ಒದಗಿಸಲಾಗಿದೆ. ಇಬ್ಬರು ಮಕ್ಕಳಿಗೆ ವಿಕಲಚೇತನ ಮಾಶಾಸನ ಮಂಜೂರು ಮಾಡಲಾಗಿದೆ ಎಂದು ಬೆಳ್ತಂಗಡಿ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ನಿರಂತರ ಭೇಟಿಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ
ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್‌ರನ್ನು ಹೊರತುಪಡಿಸಿ ಸ್ಥಳೀಯ ಅಧಿಕಾರಿಗಳಾರೂ ಇಲ್ಲಿ ನಿರಂತರವಾಗಿ ಭೇಟಿ ನೀಡುತ್ತಿಲ್ಲ ಎಂಬ ಸ್ಥಳೀಯರ ಹೇಳಿಕೆಗೆ, ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಂದಾಯ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕನಿಷ್ಠ 15 ದಿನಗಳಿಗೊಮ್ಮೆ ಅಥವಾ ಒಂದು ತಿಂಗಳಿಗೊಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು. ಸಂಧ್ಯಾ ಸುರಕ್ಷಾ ಯೋಜನೆ, ಮನೆ ದುರಸ್ತಿ, ಪಡಿತರ ಚೀಟಿ ಮೊದಲಾದ ಅರ್ಜಿಗಳ ಸ್ವೀಕಾರಕ್ಕೆ ಸಂಬಂಧಿಸಿ ಸಂಬಂಧಪಟ್ಟ ಅಧಿ ಕಾರಿಗಳು ಜೂನ್ 9 ಅಥವಾ ಜೂನ್ 16ರಂದು ಭೇಟಿ ನೀಡುವಂತೆಯೂ ಈ ಸಂದರ್ಭ ತಿಳಿಸಿದರು.
ಉಚಿತ ಕಾನೂನು ನೆರವಿನ ಭರವಸೆ
ಮಲೆಕುಡಿಯ ಜನರ ಜಮೀನಿನ ನ್ಯಾಯಾಲಯ ಪ್ರಕರಣಗಳಲ್ಲಿ ವ್ಯವಹರಿಸಲು ಪ್ರಸ್ತುತ ಸ್ಥಳೀಯ ನಿವಾಸಿಗಳು ಲಕ್ಷಾಂತರ ರೂ. ವ್ಯಯಿಸಿ ಖಾಸಗಿ ವಕೀಲರನ್ನು ನೇಮಕ ಮಾಡಿಕೊಂಡು ಕಷ್ಟಪಡುತ್ತಿರುವುದನ್ನು ಆಲಿ ಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸರಕಾರದ ನೆರವಿನಿಂದ ಉಚಿತ ಕಾನೂನು ನೆರವನ್ನು ಪಡೆಯುವಂತೆ ಸಲಹೆ ನೀಡಿದರು.
ಕಳೆದ ವರ್ಷ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭ ನೀಡಿದ್ದ ಹಲವಾರು ಬೇಡಿಕೆಗಳಲ್ಲಿ ಕೆಲವೊಂದು ನೆರವೇರಿದ್ದು, ಪ್ರಮುಖವಾದ ಅಣಿಯೂರು ಹೊಳೆಗೆ ಕಾಲುಸುಂಕ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂ. ಅಂದಾಜಿಸಲಾಗಿದೆ. ಈ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಕೈಗೆತ್ತಿ ಕೊಳ್ಳುವುದಾಗಿ ಭರವಸೆ ನೀಡಿದರು. ವಿಕೇಂದ್ರೀಕೃತ ವಿದ್ಯುತ್ ವಿತರಣೆ ಯೋಜನೆಯಡಿ ಸೋಲಾರ್ ವಿದ್ಯುತ್ ಬಳಸಿ ವಿದ್ಯುದ್ದೀಕರಣ ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದರು.
ಶಿಕ್ಷಕಿ ಮೀನಾಕ್ಷಿ ಅವಿರೋಧ ಆಯ್ಕೆ
ಗ್ರಾಪಂ ಚುನಾವಣೆಯ ಸಿದ್ಧತೆಯೂ ಬಾಂಜಾರು ಮಲೆಯಲ್ಲಿ ನಡೆದಿದ್ದು, ಇಲ್ಲಿನ ಮೀನಾಕ್ಷಿ ಎಂಬವರು ನೆರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಮೀನಾಕ್ಷಿ ಬಾಂಜಾರು ಮಲೆಯ ಅಂಗನವಾಡಿ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇಂತಹ ಅಧಿಕಾರಿಗಳ ಅಗತ್ಯ ನಮಗಿದೆ
ನಾವು ಸುಮಾರು 30 ವರ್ಷಗಳಿಗೂ ಹಿಂದಿನಿಂದ ಇಲ್ಲಿ ಡಿಸಿ ಕಟ್ಟೆಯೊಂದನ್ನು ನಿರ್ಮಿಸಿ ಜಿಲ್ಲಾಧಿಕಾರಿ ಬರುವಿಕೆಗಾಗಿ ಕಾಯುತ್ತಾ ಜೀವನ ಸಾಗಿಸಿದ್ದೆವು. ಆದರೆ ಜಿಲ್ಲೆಗೆ ಅದೆಷ್ಟು ಜಿಲ್ಲಾಧಿಕಾರಿಗಳು ಬಂದು ಹೋಗಿದ್ದರೂ ಇತ್ತ ಸುಳಿ ದಿರಲಿಲ್ಲ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಕಳೆದ ವರ್ಷ ಇಲ್ಲಿಗೆ ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಆಲಿಸಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದಾರೆ. ಬಡವರ ಕಣ್ಣೀರು ಒರೆಸುವ ಇಂತಹ ಅಧಿಕಾರಿಗಳ ಅಗತ್ಯ ನಮಗೆ ಇದೆ ಎಂದು ಸ್ಥಳೀಯರಾದ ಎ.ಬಿ.ಅಣ್ಣಪ್ಪ ಮೆಚ್ಚುಗೆಯ ನುಡಿ ಗಳನ್ನಾಡಿದರು.
ಸ್ಥಳೀಯರ ಜತೆ ಆತ್ಮೀಯ ಸ್ಪಂದನೆ
ತಾನೊಬ್ಬ ಜಿಲ್ಲಾಧಿಕಾರಿಯೆಂಬ ಯಾವುದೇ ಅಹಂ ಇಲ್ಲದೆ ಸ್ಥಳೀಯರ ಜತೆ ಆತ್ಮೀಯತೆಯಿಂದ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಥಳೀಯರ ಬೇಡಿಕೆಗಳನ್ನು ಅತ್ಯಂತ ವಿನಯದಿಂದ ಆಲಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.
ವರದಿ ಕೃಪೆ : ವಾಭಾ
