ಕನ್ನಡ ವಾರ್ತೆಗಳು

ಹಣ ಕೊಡೊಲ್ಲ, ಹೆಂಡ ಹಂಚೊಲ್ಲ.! ಕಾಳಾವರದ ಐವರು ಅಭ್ಯರ್ಥಿಗಳ ಚುನಾವಣಾ ವೆಚ್ಚ ಕೇವಲ 5000..!

Pinterest LinkedIn Tumblr

ಕುಂದಾಪುರ: ಚುನಾವಣೆ ಬಂದ್ರೆ ಸಾಕು, ಪ್ರಚಾರದ ಅಬ್ಬರ ಶುರುವಾಗುತ್ತೆ. ಅಭ್ಯರ್ಥಿಗಳು ಪ್ರಚಾರ ಕ್ಯಾನ್ವಾಸ್ ಮುಂತಾದವುಗಳಿಗೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸುವುದು ಎಗ್ಗಿಲ್ಲದೇ ನಡೆಯುತ್ತೆ. ರಾತ್ರಿ ಮೇಲೆ ಹೆಣ, ಹೆಂಡ, ಬಾಡೂಟ ಸಫ್ಲೈ ಜೋರಾಗಿಯೇ ಇರುತ್ತೆ. ಆದ್ರೇ ಜನಪರ ಕೆಲಸ ಮಾಡುವವರಿಗೆ ಚುನಾವಣೆಗಾಗಿ ಹಣದ ಅವಶ್ಯಕತೆಯೇ ಇಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಚುನಾವಣೆಗೆ ಸ್ವರ್ಧಿಸಬಹುದುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ತಾಲೂಕಿನ ಕಾಳಾವಾರ ಗ್ರಾಮಪಂಚಾಯತ್‌ನ ಎರಡು ವಾರ್ಡುಗಳ ಸಿಪಿ‌ಎಂ ಬೆಂಬಲಿತ ಎಸ್. ರಾಮಚಂದ್ರ ನಾವಡ ಹಾಗೂ ಅವರದೇ ಬಣದ ಇನ್ನಿತರ ನಾಲ್ವರು ಅಭ್ಯರ್ಥಿಗಳು. ಈ ಬಗ್ಗೆ ಒಂದು ವರದಿಯಿಲ್ಲಿದೆ ನೋಡಿ.

Ramachandra_Kalavara_Election (2) Ramachandra_Kalavara_Election Ramachandra_Kalavara_Election (3) Ramachandra_Kalavara_Election (4) Ramachandra_Kalavara_Election (1)

ಲೋಕಸಭಾ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆಯ ತನಕ ಪಕ್ಷ ಹಾಗೂ ಪ್ರತಿ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾನೆ ಮತ್ತು ಖರ್ಚುಮಾಡಿದ ಹಣವನ್ನು ವಾಪಾಸು ಪಡೆಯಲು ಗೆದ್ದನಂತರ ಮತ್ತೆ ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕಿಳಿಯುತ್ತಾನೆಂಬುದು ಸಾಮಾನ್ಯ ಸಂಗತಿ. ಆದರೇ ಕಾಳಾವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡಿನಿಂದ ಸ್ವರ್ಧಿಸುತ್ತಿರುವ ರಾಮಚಂದ್ರ ನಾವಡರ ಜನಪರ ಕಾಳಜಿ ಮೆಚ್ಚುವಂತದ್ದು. ನಾವಡರು ಭ್ರಷ್ಟ ವ್ಯವಸ್ಥೆಯ ವಿರುದ್ಧ 20 ವರ್ಷಗಳಿಂದ ಹೋರಾಡುತ್ತಲೇ ಬಂದವರು. ಕಳೆದ ಸಾಲಿನ ಗ್ರಾ.ಪಂ. ಚುನಾವಣೆಯಲ್ಲಿಯೂ ಸ್ವರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದು ಬಡ ಜನರ ಪರವಾಗಿ ನಿಂತವರು. ಈ ಭಾರಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಆದರೆ ಚುನಾವಣೆಗಾಗಿ ಎಲ್ಲಿಯೂ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿಲ್ಲ.

ಕಳೆದ ಅವಧಿಯ ಚುನಾವಣೆಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಸ್ವರ್ಧಿಸಿದ್ದಾಗ ಇವರು ವ್ಯಯಿಸಿದ್ದು ಕೇವಲ 3,250 ರೂಪಾಯಿ. ಅದು ಕೂಡ ಸಾರ್ವಜನಿಕರು ಸಂಗ್ರಹಿಸಿದ ನಿಧಿಯಾಗಿತ್ತು. ಅತ್ಯಂತ ಕಡಿಮೆ ಖರ್ಚಿನಲ್ಲಿ ಅಭ್ಯರ್ಥಿಯಾಗಿ ನಿಂತರೂ ಕೂಡ 630 ಓಟುಗಳಲ್ಲಿ 484 ಓಟುಗಳನ್ನು ತನ್ನದಾಗಿಸಿಕೊಂಡಿದ್ದರು. ಇದು ಕಾಳವಾರ ಕ್ಷೇತ್ರದ 24 ಅಭ್ಯರ್ಥಿಗಳಿಗಿಂತ ಪಡೆದ ಅತ್ಯಧಿಕ ಮತವಾಗಿತ್ತು.

ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಮೇಲೆ ಪ್ರತಿ ಗ್ರಾಮ ಸಭೆ, ಸಾಮಾನ್ಯ ಹಾಗೂ ವಿಶೇಷ ಸಭೆಗಳಲ್ಲಿ ಭಾಗವಹಿಸಿದ ಏಕೈಕ ಸದಸ್ಯ ಎಂಬುದು ಕೂಡ ಗಮನಾರ್ಹ. ಜನಪರ ಕಾಳಜಿ ಹೊಂದಿದ್ದ ನಾವಡರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಸಮರ್ಪಕ ಅನುಷ್ಠಾನ, ಕುಡಿಯುವ ನೀರು, ರಸ್ತೆ, ನೀರಿನ ತೋಡು, ಬೀದಿದೀಪ ಮುಂತಾದ ಮೂಲಭೂತ ಸೌಕರ್ಯಗಳನ್ನು ಗ್ರಾಮದ ಜನತೆಗೆ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಭಾರಿಯೂ ಚುನಾವಣೆಯಲ್ಲಿ ಮತ್ತೆ ಸ್ವರ್ಧಿಸಿರುವ ರಾಮಚಂದ್ರ ನಾವಡರು ಖರ್ಚಿನ ಬಗ್ಗೆ ಸಾಕಷ್ಟು ಎಚ್ಚರ ವಹಿಸಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಲಾಗಿರುವ 5000 ರೂಪಾಯಿ ನಿಧಿಯಲ್ಲಿ 4,700(1800 ಕರಪತ್ರ ಮುದ್ರಣದ ಖರ್ಚು, 700- ಐದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಖರ್ಚು, 2000-ಕ್ಯಾನ್ವಾಸ್ ಖರ್ಚು,200-ಜೆರಾಕ್ಸ್ ಖರ್ಚು) ರೂಪಾಯಿಗಳನ್ನಷ್ಟೇ ವ್ಯಯಿಸಿ ಉಡುಪಿ ಜಿಲ್ಲೆಯಲ್ಲಿಯೇ ಚುನಾವಣೆಗಾಗಿ ಅತೀ ಕಡಿಮೆ ಹಣ ವ್ಯಯಿಸಿದ ಮಾದರಿ ಅಭ್ಯರ್ಥಿಯೆನಿಸಿಕೊಂಡಿದ್ದಾಯಿವರೊಂದಿಗೆ ಇವರದ್ದೇ ಆದ ಕೆಲವರು ಹಿತೈಷಿಗಳು, ಸ್ನೇಹಿತರು ಒಡಗೂಡಿ ಪ್ರಚಾರ ಕಾರ್ಯದಲ್ಲಿ ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಇವರಿಗೆ ಮನೆಯಲ್ಲಿಯೇ ಊಟ-ಉಪಹಾರದ ವ್ಯವಸ್ಥೆಯನ್ನೂ ಮಾಡುವ ಮೂಲಕ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ.

ಈ ಹಿಂದೆ ಕಾಳಾವರ ಪಂಚಾಯತ್‌ಗೆ ಒಳಪಟ್ಟಿದ್ದ ಕೋರ್ಗಿ ಹಾಗೂ ಹೆಸ್ಕೂತ್ತೂರು ಗ್ರಾಮ ಪಂಚಾಯತ್ ಪ್ರತ್ಯೇಕವಾಗಿರುವುದರಿಂದ ಕಾಳಾವಾರ, ವಕ್ವಾಡಿ ಹಾಗೂ ಆಸೋಡು ಗ್ರಾಮಗಳು ಮಾತ್ರ ಕಾಳಾವಾರ ಪಂಚಾಯತ್ ವ್ಯಾಪ್ತಿಗೆ ಸೇರುತ್ತಿದೆ. ಈ ಭಾರಿ ರಾಮಚಂದ್ರ ನಾವಡರು ತಮ್ಮೊಂದಿಗೆ ೧ ಮತ್ತು ೨ನೇ ವಾರ್ಡುಗಳಲ್ಲಿ ನಾರಾಯಣ ಪೂಜಾರಿ, ಗಿರಿಜಾ, ವಿನಯ ಶೆಟ್ಟಿ, ಪ್ರೇಮಾ ಆಚಾರ್ಯ ಅವರನ್ನೂ ಚುನಾವಣಾ ಕಣಕ್ಕೆ ಇಳಿಸಿದ್ದು ಪಾರದರ್ಶಕ ಹಾಗೂ ಭಷ್ಟಚಾರ ರಹಿತವಾದ ಆಡಳಿತ ನೀಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆಯಲ್ಲಿ ಸ್ವರ್ಧಿಸಲು ಹಣ ಬೇಕು. ಮತದಾರರಿಗೆ ಹಣ, ಹೆಂಡ, ಬಾಡೂಟದ ಆಮಿಷ ನೀಡಲೇಕು ಎನ್ನುವ ಅಲಿಖಿತ ನಿಯಮವನ್ನು ನಾವುಡರು ಸುಳ್ಳು ಮಾಡಿದ್ದಾರೆ. ಹಣ-ಹೆಂಡದ ಹಂಗಿಲ್ಲದೇ ಅತ್ಯಂತ ಕಡಿಮೆ ಖರ್ಚಿನಲ್ಲಿಯೂ ಚುನಾವಣೆಯಲ್ಲಿ ಸ್ವರ್ಧಿಸಬಹುದು ಎಂದು ತೋರಿಸಿಕೊಟ್ಟು ಮಾದರಿ ಅಭ್ಯರ್ಥಿಗಳೆನಿಸಿಕೊಂಡಿದ್ದಾರೆ ರಾಮಚಂದ್ರ ನಾವಡ ಹಾಗೂ ಅವರ ಬೆಂಗಲಿರು ಅಭ್ಯರ್ಥಿಗಳು. ಈ ಸರಳ ಚುನಾವಣೆ ವೆಚ್ಚ ಇತರರಿಗೂ ಮಾದರಿಯಾಗಲಿ.

ವರದಿ- ಯೋಗೀಶ್ ಕುಂಭಾಸಿ

Write A Comment