ಕನ್ನಡ ವಾರ್ತೆಗಳು

ಅನ್ನ ಆಹಾರವಿಲ್ಲದೇ ತಂದೆ ತಾಯಿ ಹಾಗೂ 2 ಮಕ್ಕಳ ನರಕಯಾತನೆ : ಚೈಲ್ಡ್‌ಲೈನ್ ಕಾರ್ಯಕರ್ತರಿಂದ ಮನೆಗೆ ಭೇಟಿ.

Pinterest LinkedIn Tumblr

Child_line_saved_1

ಮಂಗಳೂರು,ಮೇ.20 : ಮೂರು ದಿನಗಳಿಂದ ಅನ್ನ ಆಹಾರವಿಲ್ಲದೇ ಮಲಗಿದಲ್ಲೇ ಇದ್ದ ತಂದೆ ತಾಯಿ ಹಾಗೂ ಅವರ 2 ಮಕ್ಕಳು ನರಕಯಾತನ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಕರುಣಾಜನಕ ಘಟನೆಯೊಂದು ನಗರದ ಶಕ್ತಿನಗರದ ಬಳಿಯ ಕಲ್ಪನೆ ಕಕ್ಕೆಬೆಟ್ಟು ಎಂಬಲ್ಲಿ ನಡೆದಿದೆ.  ಸ್ಥಳೀಯ ಮನೆವೊಂದರಲ್ಲಿ ವಾಸವಾಗಿದ್ದ ಶ್ರೀನಿವಾಸ್ (38 )ರವರು ಪಾರ್ಶ್ವವಾಯು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪತ್ನಿ ಮಲ್ಲಿಕಾ (32) ಕೂಡ ಕೆಲವು ಸಮಯದಿಂದ ಕಾಯಿಲೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ನೊಂದಿದ್ದು, ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಇವರು, ಸಹಾಯಯಾಚಿಸಿ ಸಂಬಂಧಿಕರಿಗೆ ಕರೆ ಮಾಡಿದರೂ, ಯಾರು ಸಹಾಯವನ್ನು ಮಾಡದೇ, ನಿಸ್ಕರುಣೆಯಿಂದ ವರ್ತಿಸಿರುತ್ತಾರೆ, ಅವರ ಆರೈಕೆಗೆ ಯಾರೂ ಇರಲಿಲ್ಲ. ಈ ದಂಪತಿಗಳಿಗೆ, ಸಣ್ಣ ಪ್ರಾಯದ 2 ಗಂಡು ಮಕ್ಕಳು ಇದ್ದು, ಅವರೇ ತಂದೆ ತಾಯಿಯ ಆರೈಕೆಯನ್ನು ಮಾಡುತ್ತಿದ್ದರು. ಮಕ್ಕಳು ಅನ್ನ ಆಹಾರ ತಿನ್ನದೇ ಮೂರು ದಿನಗಳಿಂದ ಬಳಲುತ್ತಿದ್ದು, ಅಂಗನವಾಡಿಯಿಂದ ನೀಡಿರುವ ಪೌಷ್ಟಿಕ ಆಹಾರ ಪುಡಿಯನ್ನು ನೀರಲ್ಲಿ ಕಲಸಿ ತಿನ್ನುತ್ತಿದ್ದರು.

Child_line_saved_2 Child_line_saved_3 Child_line_saved_4 Child_line_saved_5

ಈ ಕುಟುಂಬದ ದಯನೀಯ ಸ್ಥಿತಿಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಂಗಳೂರು ಚೈಲ್ಡ್‌ಲೈನ್ಗೆ-1098 ಸ್ಥಳೀಯರು ಮಾಹಿತಿಯನ್ನು ನೀಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಶ್ರೀಮತಿ ಗುಲಾಬಿ, ಮೇಲ್ವೀಚಾರಕರಾದ ಶ್ರೀಮತಿ ಸುಧಾ, ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಮಾಲತಿ, ಶ್ರೀಮತಿ ರೂಫಿನಾ, ಮಂಗಳೂರು ಚೈಲ್ಡ್‌ಲೈನ್-1098 ನ ಕೇಂದ್ರ ಸಂಯೋಜನಾಧಿಕಾರಿ ಶ್ರೀ ಸಂಪತ್ತ್ ಕಟ್ಟಿರವರ ಮಾರ್ಗದರ್ಶನದಂತೆ ಶ್ರೀಮತಿ ರೇವತಿ, ಶ್ರೀನಾಗರಾಜ್ ಪಣಕಜೆ ಹಾಗೂ ಸ್ಥಳೀಯರು ರಕ್ಷಣೆಗಾಗಿ ಅವರ ಮನೆಗೆ ಭೇಟಿಯನ್ನು ನೀಡಿದ್ದಾಗ, ಎಳೆಯ ಮಕ್ಕಳು ಅಮ್ಮನು ಮಲಗಿರುವ, ಹಾಸಿಗೆಯ ಮೇಲೆ ಕುಳಿತು, ತಮ್ಮ ಮನೆಯ ತೆಂಗಿನ ಮರದಿಂದ ತಾವೇ ಕಿತ್ತು ತಂದ ಎಳನೀರನ್ನು ಕುಡಿಸುತ್ತಿದ್ದರು.

Child_line_saved_6 Child_line_saved_7 Child_line_saved_8 Child_line_saved_9 Child_line_saved_10

ಹಾಸಿಗೆಯಿಂದ ನೆಲಕ್ಕೆ ಬಿದ್ದಿರುವ ತಂದೆ ಮೇಲೇಳಲು ಸಾಧ್ಯವಾಗದೇ, ನೆಲದಲ್ಲೇ ಕವಚಿ ಬಿದ್ದಿದ್ದರು. ವಯೋವೃದ್ಧ ಅತ್ತೆ ಅಸಹಾಯಕರಾಗಿ ಅಳುತ್ತಿದ್ದರು. ಕೂಡಲೇ 108 ಅಂಬ್ಯಲೆನ್ಸ್‌ಗೆ ಕರೆಯನ್ನು ಮಾಡಿ, ಹಾಸಿಗೆ ಹಿಡಿದಿರುವ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಗಂಡ ಹೆಂಡತಿ ಇಬ್ಬರನ್ನು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಹಾಗೂ ಅವರ ಎರಡು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯವರ ಆದೇಶದಂತೆ ಪುನರ್ವಸತಿಯನ್ನು ಕಲ್ಪಿಸಿಕೊಡಲಾಗಿದೆ.
ಸ್ಥಳೀಯ ಸಮಾಜ ಸೇವಕರಾದ ಶ್ರೀಸುಧಾಕರ ಜೋಗಿ, ಶ್ರೀಮತಿ ಬಬಿತಾ, ನಾಗರಿಕ ಹಿತರಕ್ಷಣಾ ವೇದಿಕೆಯ ಶ್ರೀ ನಾಗರಾಜ್ ಶಕ್ತಿನಗರ, ಶ್ರೀ ಮಹೇಶ್, ಶ್ರೀಹೆನ್ರಿ ರೋಡ್ರಿಗಸ್, ಸ್ಪಂದನಾ ಸ್ತ್ರೀಶಕ್ತಿ ಸಂಘದ ಶ್ಯಾಮಲಾ, ಶಶಿಕಲಾ, ಈ ಕುಟುಂಬದ ಮಕ್ಕಳ ರಕ್ಷಣಾ ಕಾರ್ಯದಲ್ಲಿ ಸಹಕಾರವನ್ನು ನೀಡಿದ್ದರು.

Write A Comment