ಕನ್ನಡ ವಾರ್ತೆಗಳು

ತುಂಬೆ ಅಣೆಕಟ್ಟಿನಿಂದ ಹರಿದ ಹೆಚ್ಚುವರಿ ನೀರು : ಸುಮಾರು 1 ಕೋಟಿ ರೂ.ಗೂ ಅಧಿಕ ಮೌಲ್ಯದ ನಿರ್ಮಾಣ ಸಾಮಾಗ್ರಿ ನೀರಿಗಾಹುತಿ

Pinterest LinkedIn Tumblr

tumbe_dam_blast

ಬಂಟ್ವಾಳ, ಮೇ 17: ತುಂಬೆಯಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ ನೂತನ ಡ್ಯಾಂನ ಸಾಮಾಗ್ರಿ ಸಲಕರಣೆಗಳು ಸಂಪೂರ್ಣ ಕೊಚ್ಚಿ ಹೋದ ಘಟನೆ  ನಡೆದಿದ್ದು, ಘಟನೆಯಲ್ಲಿ ಸುಮಾರು 1 ಕೋಟಿ ರೂ.ಗೂ ಅಧಿಕ ನಷ್ಟ ಅಂದಾಜಿಸಲಾಗಿದೆ. ಶಂಭೂರು ಎಎಂಆರ್ ಡ್ಯಾಂನಲ್ಲಿ ಹೆಚ್ಚುವರಿ ನೀರನ್ನು ಯಾವುದೇ ಮಾಹಿತಿ ನೀಡದೆ ಕೆಳಗೆ ಹರಿಯಬಿಟ್ಟಿದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಶಂಭೂರುನಲ್ಲಿರುವ ಎಎಂಆರ್ ಡ್ಯಾಂನಲ್ಲಿ 18.9 ಅಡಿಗಳಷ್ಟು ನೀರು ಶೇಖರಿಸಬಹುದಾಗಿದ್ದು, ಶುಕ್ರವಾರ ರಾತ್ರಿ 19.4 ಮೀಟರ್ ಮೀರಿ ನೀರು ಹರಿದದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.

ನೀರು ಕೇವಲ ಎರಡು ಗಂಟೆಯಲ್ಲಿ ಹರಿದು ಬಂದು ತುಂಬೆ ಡ್ಯಾಂನಲ್ಲಿ ತುಂಬಿ ಉಕ್ಕಿ ಹರಿದ ಪರಿಣಾಮ ಕೆಳಗೆ ನೂತನ ಡ್ಯಾಂ ಕಾಮಗಾರಿ ನಿರ್ವಹಣಾ ಸಾಮಾಗ್ರಿಗಳು ಕೊಚ್ಚಿ ಹೋಗಿವೆೆ. ಕಬ್ಬಿಣದ ಸಾಮಾಗ್ರಿಗಳು, ಸ್ಟೀಲ್ ರಾಡ್‌ಗಳು, ಕಾರ್ಮಿಕರ ಶೆಡ್, ಕಬ್ಬಿಣದ ತೊಲೆಗಳು, ಪಂಪ್, ಪ್ಲಾಸ್ಟಿಕ್ ಪೈಪ್‌ಗಳು, ಡೀಸೆಲ್ ಪಂಪ್‌ಸೆಟ್‌ಗಳು ನದಿಯ ಉದ್ದಕ್ಕೆ ಅಲ್ಲಲ್ಲಿ ಮಣ್ಣಿನ ಅಡಿ, ನೀರಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಡ್ಯಾಂ ನಿರ್ಮಾಣಕ್ಕಾಗಿ ಮಾಡಿದ ಕಚ್ಚಾ ರಸ್ತೆಯ ಎರಡು ಕಡೆಯಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು, ನದಿಯ ಇನ್ನೊಂದು ತೀರಕ್ಕೆ ಸಂಪರ್ಕ ಕಡಿದು ಹೋಗಿದೆ. ಈ ರಸ್ತೆಯ ಪುನರ್ ನಿರ್ಮಾಣಕ್ಕೆ ಇನ್ನು ಕನಿಷ್ಠ ಒಂದು ವಾರದ ಸಮಯ ಬೇಕಾಗಿದ್ದು, ಪಂಪ್ ಮತ್ತು ಇತರ ಸಾಮಾಗ್ರಿಗಳನ್ನು ಒಟ್ಟು ಸೇರಿಸಲು ಹದಿನೈದು ದಿನಗಳ ಕಾಲ ಬೇಕಾಗಬಹುದು ಎಂದು ಡ್ಯಾಂ ಕಾಮಗಾರಿಯ ಸೆಕ್ಷನ್ ಆಫೀಸರ್ ಶೇಖರ್ ಹೇಳಿದ್ದಾರೆ.

ಲೆಕ್ಕಾಧಿಕಾರಿ ರವಿಚಂದ್ರ ಸ್ಥಳದಲ್ಲಿದ್ದು, ಅವರ ಮಾಹಿತಿಯಂತೆ ತುಂಬೆ ನೂತನ ಡ್ಯಾಂ ಸಿವಿಲ್ ಕೆಲಸಗಳು ಶೇ.90ರಷ್ಟು ಪೂರ್ಣಗೊಂಡಿತ್ತು. ತಾಂತ್ರಿಕ ಕೆಲಸಗಳು ಶೇ.50ರಷ್ಟು ಬಾಕಿ ಇದ್ದು ಮುಂದಿನ ಹದಿನೈದು ದಿನಗಳಲ್ಲಿ ಅದನ್ನು ಪೂರೈಸಲು ಹೆಚ್ಚುವರಿ ಕಾರ್ಮಿಕರನ್ನು, ಯಂತ್ರೋಪಕರಣಗಳನ್ನು ಸ್ಥಳಕ್ಕೆ ತಂದಿಡಲಾಗಿತ್ತು.ಅವುಗಳಲ್ಲಿ ಬಹುತೇಕ ನೀರಲ್ಲಿ ಕೊಚ್ಚಿ ಹೋಗಿವೆ. ಏಕಾಏಕಿ ನುಗ್ಗಿದ್ದ ನೀರಿನ ತೀವ್ರತೆಗೆ ಪಿಲ್ಲರ್ ನಿರ್ಮಾಣಕ್ಕೆ ತಂದು ಹಾಕಿದ್ದ ಸುಮಾರು 50 ಲಕ್ಷ ರೂ. ವೌಲ್ಯದ ಸ್ಟೀಲ್ ರಾಡ್‌ಗಳು ಕೊಚ್ಚಿ ಹೋಗಿದ್ದಲ್ಲದೆ ಮಣ್ಣಿನಲ್ಲಿ ಹುದುಗಿ ಹೋಗಿದೆ. ಕೇವಲ ಐದು ನಿಮಿಷಗಳ ಅವಧಿಯಲ್ಲಿ ಕಾರ್ಮಿಕರ ಶೆಡ್‌ಗಳು, ಸ್ಟೀಲ್ ರಾಡ್‌ಗಳು, ಹಲವು ಪಂಪ್‌ಸೆಟ್‌ಗಳು, ಡೀಸೆಲ್ ಜನರೇಟರ್‌ಗಳು, ಹೇಳಹೆಸರಿಲ್ಲದಂತೆ ಮಣ್ಣಿನ ಅಡಿಗೆ ಬಿದ್ದು ಕಣ್ಮರೆಯಾಗಿದೆ. ನೂರು ಅಶ್ವ ಶಕ್ತಿಯ ಸುಮಾರು 10 ಲಕ್ಷ ರೂ. ವೌಲ್ಯದ ಪಂಪ್‌ಗಳು ನೀರಲ್ಲಿ ಮುಳುಗಿ ಕಾಣೆಯಾಗಿವೆ. 30 ಎಚ್.ಪಿಯ 3 ಪಂಪ್‌ಗಳು ನೀರಲ್ಲಿ ಮುಳುಗಿವೆ. 12 ಲಕ್ಷ ರೂ. ವೌಲ್ಯದ ಒಂದು ಜನರೇಟರ್ ಮಣ್ಣಿನ ಅಡಿಯಲ್ಲಿ ಹೂತು ಹೋಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ನಡುವೆ 5 ಕೋಟಿ ರೂ. ವೌಲ್ಯದ ಟೆಲಿಬೆಲ್ಟ್ ರೊಟೆಕ್ಟ್ ಕಾಂಕ್ರಿಟ್ ಪೋರಿಂಗ್ ಮೆಷಿನ್ ಒಂದನ್ನು ರಕ್ಷಿಸಲು ಸಾಧ್ಯವಾಗಿದೆ. ಇದು ಸಿಮೆಂಟ್, ಜಲ್ಲಿ ಮರಳು ಮಿಶ್ರಣ ಮಾಡುವ ಯಂತ್ರವಾಗಿದ್ದು, ಇದ್ದಲ್ಲಿಂದಲೇ ತನ್ನ ಸುತ್ತ ಎಲ್ಲಿಗೆ ಬೇಕಾದರೂ ಮಿಶ್ರಣವನ್ನು ಮಣ್ಣಿನ ಒಳಗೆ, ಎತ್ತರದ ಪಿಲ್ಲರ್‌ಗಳಿಗೆ ಸ್ವತ: ತುಂಬಿಸುವ ಸಾಮರ್ಥ್ಯ ಇರುವ ಯಂತ್ರವಾಗಿದ್ದು, ಕೇವಲ ಮೂರು ನಿಮಿಷದ ಅವಧಿಯಲ್ಲಿ ಸ್ಥಳಾಂತರಿಸುವ ಮೂಲಕ ರಕ್ಷಣೆ ಮಾಡಿದ್ದು, ಅದು ಹೊರತು ಎಲ್ಲಾ ಮೆಷಿನರಿಗಳು ಕೊಚ್ಚಿ ಹೋಗಿವೆ. ಅಧಿಕ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದನ್ನು ಗಮನಿಸಿ ಸ್ಥಳದಲ್ಲಿದ್ದ ಕಾರ್ಮಿಕರು ಜೀವರಕ್ಷಣೆಗೆ ಎದ್ದುಬಿದ್ದು ಮೇಲಕ್ಕೆ ಓಡಿ ಬಂದಿದ್ದಾರೆ.

ತಪ್ಪಿದ ಭಾರೀ ಅನಾಹುತ

ಭರದಿಂದ ಸಾಗುತ್ತಿದ್ದ ಡ್ಯಾಂನ ಕಾಮಗಾರಿೆ ಹೆಚ್ಚುವರಿ ಕಾರ್ಮಿಕರನ್ನು ಕರೆಸಲಾಗಿದ್ದು, ಸುಮಾರು 200 ಗುತ್ತಿಗೆ ಕಾರ್ಮಿಕರು ಊಟ ಮುಗಿಸಿ ಕಾಮಗಾರಿ ಸ್ಥಳದಲ್ಲೇ ಮಲಗಲು ಸಿದ್ಧ್ದತೆ ನಡೆಸುತ್ತಿದ್ದ ವೇಳೆ ಈ ಅವಡ ನಡೆದಿದೆ. ಇದಕ್ಕೂ ಮೊದಲು ಅವರು ನಿದ್ರಿಸಿದ್ದರೆ ಭಾರೀ ಅನಾಹುತವೇ ನಡೆಯುವ
ಸಾಧ್ಯತೆ ಇತ್ತು ಎನ್ನುತ್ತಾರೆ ಸೈಟ್ ಇನ್‌ಚಾರ್ಜ್ ಶೇಸು.

ಮೊಳಗಲಿಲ್ಲ ಸೈರನ್..!

ಶಂಭೂರು ಎಎಂಆರ್ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹರಿಯಬಿಡುವುದಿದ್ದರೆ ಶಂಭೂರು ಸೈಟ್‌ನಲ್ಲಿ, ಬಂಟ್ವಾಳದ ಬಡ್ಡಕಟ್ಟೆ ಮತ್ತು ನಂದಾವರದಲ್ಲಿ ಇರುವಂತೆ ಸೈರನ್ ಮೊಳಗಿಸಿ 3 ಗಂಟೆಗಳ ನಂತರ ನೀರು ಹರಿಯಬಿಡಬೇಕು ಎಂಬ ನಿಯಮವಿದೆ. ಆದರೆ ಮೇ 15ರ ರಾತ್ರಿ ವೇಳೆ ಡ್ಯಾಂ ನಿಂದ ನೀರು ಹರಿಯಬಿಡುವ ವೇಳೆ ಸೈರನ್ ಮೊಳಗಿಸದೇ ಇದ್ದುದು ಈ ಅವಘಡಕ್ಕೆ ಕಾರಣವೆನ್ನಲಾಗಿದೆ. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೂ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಡ್ಯಾಂ ಕಾಮಗಾರಿಗೆ ಮತ್ತೆ ಅಡ್ಡಿ..!

ನೂತನ ತುಂಬೆ ಡ್ಯಾಂ ಆರಂಭಗೊಂಡು ಅನೇಕ ವರ್ಷಗಳೇ ಕಳೆದುಹೋಗಿವೆ. ಆರಂಭಗೊಂಡ ಬಳಿಕದಿಂದ ಸಂತ್ರಸ್ತರ ವಿರೋಧ, ಅಸಮರ್ಪಕ ಸರ್ವೇ, ಅನುದಾನ ವಿಳಂಬ, ಕಾರ್ಮಿಕರ ಕೊರತೆ, ಗುತ್ತಿಗೆದಾರರ ನಿರ್ಲಕ್ಷ, ನೆರೆ ಹಾವಳಿ.. ಹೀಗೆ ಹಲವು ಅಡ್ಡಿ ಆತಂಕದೊಂದಿಗೆ ಸಾಗಿದ್ದ ತುಂಬೆಯ ನೂತನ ಡ್ಯಾಂನ ಕಾಮಗಾರಿ ಕಳೆದ 4 ತಿಂಗಳಿನಿಂದ ಭರದಿಂದಲೇ ಸಾಗಿತ್ತು. ಆದರೆ ಕಳೆದ ರಾತ್ರಿ ನಡೆದ ಅವಘಡದಿಂದ ಕಾಮಗಾರಿಗೆ ಮತ್ತೆ ಅಡ್ಡಿ ಉಂಟಾಗಿದೆ. ಸದ್ಯ ಡ್ಯಾಂ ಮೇಲ್ಗಡೆಯಿಂದ ಹೆಚ್ಚುವರಿ ನೀರು ಹರಿಯುತ್ತಿದೆ. ಡ್ಯಾಂ ಸೈಟ್ ರಸ್ತೆ ಕೊಚ್ಚಿ ಹೋಗಿದ್ದು ಸಂಪರ್ಕ ನಿಲುಗಡೆಯಾಗಿದೆ. ಪ್ರಸ್ತುತ ಉಂಟಾಗಿರುವ ಹಾನಿಯಿಂದ ಇನ್ನು ಮೊದಲಿನಂತೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಮೇಲ್ವಿಚಾರಕ ವಿಷ್ಣುಮೂರ್ತಿ ತಿಳಿಸಿದ್ದಾರೆ.

Write A Comment