ಬೆಳ್ತಂಗಡಿ: ಜನಪರ ಹೋರಾಟ ಸಂಘಟನೆಗಳಲ್ಲಿ ಗುರುತಿಸಿಕೊಂಡು ಪೊಲೀಸ್ ಇಲಾಖೆಯಿಂದ ನಕ್ಸಲ್ ಹಣೆಪಟ್ಟಿ ಹೊತ್ತಿದ್ದ ವಿಠಲ ಮಲೆಕುಡಿಯ ನಾರಾವಿ ಗ್ರಾಪಂನ ಕುತ್ಲೂರು ವಾರ್ಡ್ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಮೇ 16ರಂದು ನಾರಾವಿ ಗ್ರಾಪಂ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಎಂಸಿಜೆ ವಿದ್ಯಾರ್ಥಿಯಾಗಿದ್ದ ಅವರು 2012ರ ಮಾ. 3ರಂದು ನಕ್ಸಲ್ ನಿಗ್ರಹದಳದ ಪೊಲೀಸರಿಂದ ಬಂಧನಕ್ಕೊಳಗಾಗಿ ದೇಶಾದ್ಯಂತ ಸುದ್ದಿಯಾಗಿದ್ದರು. ಈ ಪ್ರಕರಣವನ್ನು ಸಿಪಿಐಎಂ ಪಕ್ಷ ಸವಾಲಾಗಿ ಸ್ವೀಕರಿಸಿ ಹೋರಾಟ ನಡೆಸಿತ್ತು.
ವಿಠಲ 4 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕಲಿಕೆ ಜತೆ ಜನಪರ ಹೋರಾಟಗಳ ನೇತೃತ್ವ ವಹಿಸಿದ್ದರು. ಕಳೆದ ಜನವರಿ ಕೊನೆಯಲ್ಲಿ ವಿಠಲ ಮಲೆಕುಡಿಯ ವಿರುದ್ಧ ರಾಜ್ಯ ಸರಕಾರದ ನಿರ್ದೇಶನದಂತೆ ಬಂಟ್ವಾಳ ಎಎಸ್ಪಿಯವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದು ಮತ್ತೊಂದು ಹಂತದ ಹೋರಾಟಕ್ಕೆ ಕಾರಣವಾಗಿದೆ.
