ಕನ್ನಡ ವಾರ್ತೆಗಳು

ಕಾಂಗ್ರೆಸ್‌ನದ್ದು ಅಹಿಂದ ಸರಕಾರ, ಕೇವಲ ಭಾಗ್ಯಗಳ ಹೆಸರು ಹೇಳಿಕೊಂಡು ಜನರನ್ನು ಮರಳು ಮಾಡುತ್ತಿದೆ : ಸುದ್ದಿಗೋಷ್ಠಿಯಲ್ಲಿ ತಿಂಗಳೆ

Pinterest LinkedIn Tumblr

ಜಿಲ್ಲೆಯಲ್ಲಿ 120 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧಿಕಾರ ಸ್ಥಾಪನೆ ನಮ್ಮ ಗುರಿ
ಮೇ.18ರಂದು ಶೋಭಾ, 20 ರಂದು ಯಡಿಯೂರಪ್ಪ, 21ರಂದು ಅನಂತಕುಮಾರ್ ಭೇಟಿ

ಕುಂದಾಪುರ: ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳಲ್ಲಿ 2398 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರವನ್ನು ಈಗಾಗಲೇ ಸಲ್ಲಿಸಿದ್ದು, ಎಲ್ಲಾ ಸ್ಥಾನಗಳಿಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ನಡೆಸಲಿದ್ದಾರೆ. ಹಿಂದಿನ ಬಾರಿ ಜಿಲ್ಲೆಯಲ್ಲಿ 146 ಗ್ರಾಮ ಪಂಚಾಯಿತಿಗಳಿದ್ದು 86 ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಸರ್ಕಾರವಿತ್ತು. ಈ ಬಾರಿ 155 ಗ್ರಾಮ ಪಂಚಾಯಿತಿಗಳಿದ್ದು, 120 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧಿಕಾರ ಸ್ಥಾಪನೆ ನಮ್ಮ ಗುರಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ.

BJP_Press meet_Kndpr (1) BJP_Press meet_Kndpr

ಕುಂದಾಪುರದ ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಉಸ್ತುವಾರಿ ನೇಮಿಸಲಾಗಿದೆ. ಈಲ್ಲೆಯ ಇಪ್ಪತ್ತೈದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೂ ಉಸ್ತುವಾರಿ ನೇಮಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ಶೇ. 85ರಷ್ಟು ಕಾರ್ಯಕರ್ತರು ನಾಮಪತ್ರ ಸಲ್ಲಿಸಿದ್ದು, ಕಾರ್ಯಕರ್ತರ ಉತ್ಸಾಹ, ಸ್ಪರ್ಧಾಕಾಂಕ್ಷೆ, ಪ್ರೋತ್ಸಾಹ ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದರು.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನೂ ಈ ಬಾರಿ ಮನೆಮನೆಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಕೇವಲ ಭಾಗ್ಯಗಳನ್ನು ಹೇಳಿಕೊಳ್ಳುವ ಸಿದ್ಧರಾಮಯ್ಯ ಸರ್ಕಾರ, ಸಾಮಾಜಿಕ ಅಭಿವೃದ್ಧಿಯಲ್ಲಿ ವಿಫಲವಾಗಿದೆ. ಸರ್ಕಾರದ ಚೆಕ್‌ಗಳೇ ಬೌನ್ಸ್ ಆಗುತ್ತಿರುವುದು ರಾಜ್ಯ ಸರ್ಕಾರದ ಆರ್ಥಿಕ ದುರ್ಗತಿಯನ್ನು ಸಾರುತ್ತಿದ್ದು, ಜಿಲ್ಲೆಗೆ ಅನುದಾನದ ಕೊರತೆ, ಗ್ರಾಮೀಣ ರಸ್ತೆಗಳ ದುರವಸ್ಥೆಗಳಿಂದ ಜಿಲ್ಲೆಯ ಜನ ಬೇಸತ್ತಿದ್ದಾರೆ. 2 ವರ್ಷದ ಸಾಧನ ಸಮಾವೇಶ ಮಾಡುವ ಕಾಂಗ್ರೆಸ್ ಏನು ಸಾಧನೆ ಮಾಡಿದೆಯೆನ್ನುವುದನ್ನು ಮೊದಲು ಅರಿತುಕೊಳ್ಳಲಿ, ಇದು ಕೇವಲ ಅಹಿಂದ ಸರಕಾರ. ಇದೆಲ್ಲದರ ಪರಿಣಾಮ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ವರವಾಗಲಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದುಕೊಂಡಿವೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಎಂಭತ್ತು ಶೇಕಡಾ ಮುಗಿದಿದೆ. ಚುನಾವಣೆ ವೇಳೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಮುನ್ನಡೆಯನ್ನು ಸಾಧಿಸಿದೆ. ಚೀನಾದ ಜೊತೆಗೆ ನಡೆದ ಮಾತುಕತೆ ಸಂದರ್ಭ ಚೀನಾವೂ ಮುಕ್ತ ಸ್ವಾಗತ ನೀಡಿರುವುದು ಭಾರತದ ಗೌರವ ಹೆಚ್ಚಿಸಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ನೀಡಲಾದ ಆಹ್ವಾನವನ್ನು ಅವರು ಕಡೆಗಣಿಸುವ ಮೂಲಕ ರಾಜ್ಯಕ್ಕೆ ಸಿಗಬಹುದಾದ ಬಂಡವಾಳ ಹೂಡಿಕೆಗೆ ತೊಡಕುಂಟಾಗಿದ್ದು, ಅಭಿವೃದ್ಧಿಯ ವೈಫಲ್ಯಕ್ಕೆ ಸಿದ್ಧರಾಮಯ್ಯ ನೇರ ಹೊಣೆ ಎಂದರು.

ರಾಜ್ಯ ನಾಯಕರ ಭೇಟಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ರಾಜ್ಯ ಮಟ್ಟದ ನಾಯಕರು ಜಿಲ್ಲೆಗೆ ಆಗಮಿಸಲಿದ್ದು, ಮೇ18 ರಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ, ಮಾಜೀ ಸಚಿವೆ ಶೋಭಾ ಕರಂದ್ಲಾಜೆ ಬೈಂದೂರಿಗೆ ಆಗಮಿಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮೇ. 20 ರಂದು ಮಾಜೀ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದಾರೆ. ಮೇ.21 ರಂದು ಅನಂತಕುಮಾರ್ ಆಗಮಿಸಲಿದ್ದು, ಕಾರ್ಕಳ, ಕಾಪು ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ, ಗೆಲುವಿಗೆ ರೂಪುರೇಷೆ ನೀಡಲಿದ್ದಾರೆ ಎಂದವರು ಹೇಳಿದರು.

ಭಿನ್ನಮತ ಇಲ್ಲ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದು ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಿಂಗಳೆ, ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಾಲಾಡಿ ಜೊತೆಗೆ ಗುರುತಿಸಿಕೊಂಡ ಎಲ್ಲಾ ಕಾರ್ಯಕರ್ತರೂ ಬಿಜೆಪಿಯೊಂದಿಗಿದ್ದಾರೆ. ಹಾಲಾಡಿ ಮನಸ್ಸೂ ಬಿಜೆಪಿಯೊಂದಿಗಿದೆ. ಅವರ ದೇಹ ಮಾತ್ರ ಬಿಜೆಪಿ ಜೊತೆ ಸೇರಿಕೊಳ್ಳಬೇಕಿದೆ ಎಂದರು. ಬೈಂದೂರಿನಲ್ಲಿಯೂ ಭಿನ್ನಾಭಿಪ್ರಾಯ ಇಲ್ಲವೆಂದ ತಿಂಗಳೆ, ಸಣ್ಣ ಪುಟ್ಟ ವೈಮನಸ್ಸುಗಳನ್ನು ಕ್ಷೇತ್ರಾಧ್ಯಕ್ಷರು ಪರಿಹರಿಸುತ್ತಾರೆ ಎಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರ ಪ್ರಕೋಷ್ಟದ ಸಂಚಾಲಕ ಬಿ. ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Write A Comment