ಕನ್ನಡ ವಾರ್ತೆಗಳು

ಸಮುದ್ರ ದಡದಲ್ಲಿ ಬೋಟ್ ಪತ್ತೆ; ತಪ್ಪಿದ ಬಾರೀ ದುರಂತ

Pinterest LinkedIn Tumblr

ಕುಂದಾಪುರ : ಗಂಗೊಳ್ಳಿಯ ಸಮುದ್ರ ತೀರದಲ್ಲಿ ಮೀನುಗಾರಿಕಾ ಬೋಟೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Gangolli_Boat_Problm

ಮಲ್ಪೆಯಿಂದ ಗಂಗೊಳ್ಳಿಗೆ ಕಚೇರಿ ಕಟ್ಟಲು (ರಿಪೇರಿಗೆ) ಬರುತ್ತಿತ್ತು ಎನ್ನಲಾದ ಶರತ್ ಸ್ಟಾರ್ II ಎಂಬ ಹೆಸರಿನ ಬೋಟು ಗಂಗೊಳ್ಳಿಯ ಬೇಲಿಕೇರಿ ಸಮೀಪದ ಸಮುದ್ರ ದಡದಲ್ಲಿ ಶನಿವಾರ ಬೆಳಗಿನ ಜಾವ ಪತ್ತೆಯಾಗಿದೆ. ದಡದಲ್ಲಿ ತಂದು ನಿಲ್ಲಿಸಿದ ಸ್ಥಿತಿಯಲ್ಲಿ ಕಂಡು ಬಂದಿರುವ ಈ ಬೋಟನ್ನು ನೋಡಿದ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಬೋಟಿನಲ್ಲಿ ಮೂವರು ಪ್ರಯಾಣಿಸುತ್ತಿದ್ದ ಇವರ ಪೈಕಿ ಭಟ್ಕಳ ಮೂಲದ ಕೇಶವ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದ್ದು, ಇನ್ನೋರ್ವ ಆಂಧ್ರಪ್ರದೇಶ ಮೂಲದ ರಾಮಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೋಟಿನಲ್ಲಿ ಪ್ರಯಾಣಿಸುತ್ತಿದ್ದ ಬೋಟಿನ ಮಾಲಕ ಸಂಜೀವ ಯಾವುದೇ ಪ್ರಾಣಾಪಾಯಗಳಿಲ್ಲದೆ ಪಾರಾಗಿದ್ದಾರೆ.

ದಡಕ್ಕೆ ಬಂದು ಅಪ್ಪಳಿಸುವಾಗ ಬೋಟು ಮಗುಚಿ ಬೀಳಬೇಕಿತ್ತು ಇಲ್ಲವಾದಲ್ಲಿ ಬೋಟು ಒಡೆದು ಹೋಗಿ ಹಾನಿಗೊಳಗಾಬೇಕಿತ್ತು. ಆದರೆ ಇದ್ಯಾವುದು ಆಗಿಲ್ಲ. ಇದರ ಹಿಂದೆ ಏನೋ ರಹಸ್ಯ ಅಡಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಮಲ್ಪೆಯಿಂದ ಹೊರಟಿದೆ ಎನ್ನಲಾದ ಈ ಬೋಟಿನ ಇಂಜಿನ ಹಾಳಾಗಿದ್ದು ಎಷ್ಟೇ ಪ್ರಯತ್ನ ಪಟ್ಟರೂ ಸರಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗಾಳಿಯ ರಭಸಕ್ಕೆ ಬೋಟು ಸಮುದ್ರ ತೀರದಲ್ಲಿ ಬಂದು ನಿಂತಿದೆ ಎಂದು ಬೋಟಿನ ಮಾಲಕ ಸಂಜೀವ ಹೇಳಿದ್ದಾರೆ.

ಬೋಟಿನಲ್ಲಿದ್ದ ವೈಯರ್‌ಲೆಸ್, ಜಿಪಿ‌ಎಸ್ ಮೊದಲಾದ ಉಪಕರಣಗಳನ್ನು ಮಲ್ಪೆಯಲ್ಲಿಯೇ ಬಿಟ್ಟು ಬಂದಿರುವುದಾಗಿ ಹೇಳುತ್ತಿರುವ ಸಂಜೀವ, ಅಪಾಯಕಾರಿ ಸ್ಥಿತಿಯಲ್ಲಿದ್ದ ಸಂದರ್ಭ ಬೇರೆ ಬೋಟಿನವರ ಸಹಾಯ ಯಾಕೆ ಕೇಳಿಲ್ಲ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಬೋಟು ಪವಾಡ ಸದೃಶ ರೀತಿಯಲ್ಲಿ ದಡದ ಮೇಲೆ ಬಂದು ನಿಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Write A Comment