ಮಂಗಳೂರು, ಮೇ 15: ನಗರದ ಲಿಕ್ವಿಡ್ ಲಾಂಜ್ ಹೋಟೆಲ್ ಬಳಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮಾನಹಾನಿಗೆ ಸಂಬಂಧಿಸಿದ ಪ್ರಕರಣವನ್ನು ನಿಭಾಯಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಬಂದರು ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಘಟನೆಯ ಬಗ್ಗೆ ಪ್ರಾಥಮಿಕ ವಿಚಾರಣಾ ವರದಿ ಆಧಾರದಲ್ಲಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಠಾಣೆಯ ಸಿಬ್ಬಂದಿ ಪರಮೇಶ್, ಮಹಾಂತೇಶ್ ಹಾಗೂ ಹನುಮ ರೆಡ್ಡಿ ಎಂಬವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಎಸ್ಸೈ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಮಹಿಳಾ ಪೊಲೀಸ್ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದ್ದು, ಹರ್ಷಿಲ್ ಶೆಟ್ಟಿ ಪೊಲೀಸ್ ಕರ್ತವ್ಯಕ್ಕೆ ಅಡಿಯನ್ನುಂಟು ಮಾಡಿದ್ದಾರೆನ್ನುವ ಪ್ರಕರಣದ ತನಿಖೆಯನ್ನು ಬಂದರು ಪೊಲೀಸ್ ಠಾಣೆಗೆ ನೂತನವಾಗಿ ನೇಮಕವಾಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ನಡೆಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮೇ 2ರಂದು ರಾತ್ರಿ ಜ್ಯೋತಿ ವೃತ್ತದ ಬಳಿ ತನ್ನ ಸ್ನೇಹಿತೆಯ ಮಾನಹಾನಿಗೆ ಯತ್ನಿಸಿ ಬಾವುಟಗುಡ್ಡೆ ಅಂಗಡಿಯೊಂದರಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆನ್ನಟ್ಟಿದ್ದ ಹರ್ಷಿಲ್ ಶೆಟ್ಟಿ ಆತನನ್ನು ಹಿಡಿಯಲು ಮುಂದಾದಾಗ ಅಂಗಡಿ ಮಾಲಕನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲೇ ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವರು ಸ್ಥಳಕ್ಕೆ ಧಾವಿಸಿದಾಗ ಹರ್ಷಿಲ್ ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಅನಂತರ ಪೊಲೀಸರು ಹರ್ಷಿಲ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಹರ್ಷಿಲ್ ಶೆಟ್ಟಿ ಹಾಗೂ ಅವರ ಸಂಬಂಧಿಕರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.