ಕನ್ನಡ ವಾರ್ತೆಗಳು

ಕುಮಾರಸ್ವಾಮಿಯವರಿಂದ ಶೀಘ್ರದಲ್ಲೇ ಸಚಿವ ಯು.ಟಿ ಖಾದರ್ ಹಗರಣ ಬಯಲು : ಮೊಹಮ್ಮದ್‌ ಕುಂಞಿ

Pinterest LinkedIn Tumblr

Jds_press_meet_1

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಗ್ರಾ.ಪಂ. ಚುನಾವಣೆಯಲ್ಲಿ ಕನಿಷ್ಠ 350 ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಜೆಡಿಎಸ್‌ ಬಹುಮತ ಪಡೆಯಲಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಕುಂಞಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ದ.ಕ. ಜಿಲ್ಲಾ ಜೆಡಿಎಸ್ ಘಟಕ ಕನಿಷ್ಠ 350 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿದೆ.ಚುನಾವಣೆಯಲ್ಲಿ ಕೆಲವು ಸ್ಥಾನಗಳಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಪಕ್ಷೇತರ ಬೆಂಬಲಿತರೊಂದಿಗೆ ಮೈತ್ರಿಯಲ್ಲಿ ಕಣಕ್ಕಿಳಿಯಲಿದೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಜನಾದೇಶದ ಒಲವಿದ್ದು ಈ ಬಾರಿಯ ವಾತಾವರಣ ಪಕ್ಷಕ್ಕೆ ಪರವಾಗಿದೆ ಎಂದರು.

ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಪಕ್ಷ ಸ್ವಲ್ಪ ದುರ್ಬಲವಾಗಿದ್ದರೂ ಗ್ರಾ.ಪಂ. ಚುನಾವಣೆಯಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸಭೆ ಸೇರಿ ಚುನಾವಣೆ ಎದುರಿಸುವ ಕುರಿತು ಈಗಾಗಲೇ ಯೋಜನೆ ಹಾಕಿಕೊಂಡಿದ್ದಾರೆ ಎಂದರು.

Jds_press_meet_3Jds_press_meet_4

ಕಾಂಗ್ರೆಸ್‍ನ 2 ವರ್ಷಗಳ ಸಾಧನೆ ಶೂನ್ಯವಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿ ತಪ್ಪಿನಿಂದ ಜನರು ಕಾಂಗ್ರೆಸ್‌ ಬೆಂಬಲಿಸಿದ್ದರೂ ಸಿದ್ದರಾಮಯ್ಯನವರ ಸರಕಾರದ ಕಾರ್ಯ ವೈಖರಿಯಿಂದ ಭ್ರಮನಿರಸನಗೊಂಡಿದ್ದಾರೆ. ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾ. ಪಂ.ಗೆ ಅಗತ್ಯ ಅನುದಾನ ದೊರೆಯತ್ತಿಲ್ಲ. ಮರಳು ಮಾಫಿಯಾ, ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ದ.ಕ. ಜಿಲ್ಲೆಯಲ್ಲಿ ಮರಳು ವ್ಯವಹಾರ ದಂಧೆಯಲ್ಲಿ ಕೆಲವು ಅಧಿಕಾರಿಗಳು, ಪೊಲೀಸರು ಶಾಮೀಲಾಗಿದ್ದಾರೆ. ಆದರೆ ಜಿಲ್ಲೆಯ ಸಚಿವರು ಹಾಗೂ ನಾಲ್ವರು ಶಾಸಕರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.

ಶೀಘ್ರದಲ್ಲೇ ಸಚಿವ ಯು.ಟಿ ಖಾದರ್ ಹಗರಣ ಬಯಲು..

ಮಂಗಳೂರು: ಕಳೆದ ಎರಡು ವರ್ಷದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಜಾರಿಗೆ ತಂದ ಯೋಜನೆಗಳಲ್ಲಿ ಉಂಟಾದ ಹಗರಣಗಳ ಮಾಹಿತಿಯನ್ನು ಶೀಘ್ರದಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಉಳ್ಳಾಲದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞ ಹೇಳಿದರು.

ಮದನ್‌ ಗೋಪಾಲ್‌ ಅವರಂತಹ ದಕ್ಷ ಅಧಿಕಾರಿಯನ್ನು ವರ್ಗಾಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್‌ ಹಲವು ಹಗರಣಗಳಲ್ಲಿ ಮುಳುಗಿದ್ದು, ಈ ಕುರಿತು ದಾಖಲೆ ಸಮೇತ ಸ್ವತಃ ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರ ಸ್ವಾಮಿ ಮಂಗಳೂರು ಅಥವಾ ಉಳ್ಳಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಎಸ್‌.ಪಿ. ಚೆಂಗಪ್ಪ, ಪ್ರದಾನ ಕಾರ್ಯದರ್ಶಿ ಶ್ರೀನಿವಾಸ ಆಳ್ವ, ಪಾಲಿಕೆ ಸದಸ್ಯ ಅಝೀಝ್ ಕುದ್ರೋಳಿ, ಪ್ರಮುಖರಾದ ನಾಸೀರ್‌, ರಾಮ್‌ಗಣೇಶ್‌, ಪ್ರವೀಣ್‌ಚಂದ್ರ ಬೆಳ್ತಂಗಡಿ, ಅಕ್ಷಿತ್‌ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

Write A Comment