ಕನ್ನಡ ವಾರ್ತೆಗಳು

ಎಸೆಸೆಲ್ಸಿ ಫಲಿತಾಂಶ: ಉಡುಪಿಗೆ ಮತ್ತೆ ಅಗ್ರಸ್ಥಾನ, ದ.ಕ.8ನೇ ಸ್ಥಾನಕ್ಕೆ ತೃಪ್ತಿ – ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ

Pinterest LinkedIn Tumblr

SSLC_EXAM_TOPER_1

ಮಂಗಳವಾರ ಪ್ರಕಟಗೊಂಡ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.93.37 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನವನ್ನು ಅಲಂಕರಿಸಿದೆ. ಶೇ.89.35 ಫಲಿತಾಂಶ ದಾಖಲಿಸಿರುವ ದ.ಕ. ಜಿಲ್ಲೆ 8ನೆ ಸ್ಥಾನ ಗಳಿಸುವ ಮೂಲಕ ಚೇತರಿಕೆಯ ಫಲಿತಾಂಶ ದಾಖಲಿಸಿದೆ.

ಮಂಗಳೂರು, ಮೇ 13: ಇತ್ತೀಚೆಗೆ ನಡೆದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.89.35 ಫಲಿತಾಂಶದೊಂದಿಗೆ ರಾಜ್ಯದಲ್ಲಿ 8ನೆ ಸ್ಥಾನ ಗಳಿಸಿದೆ. ಜಿಲ್ಲೆಯಿಂದ ಪರೀಕ್ಷೆಗೆ ಹಾಜರಾದ 33,070 ವಿದ್ಯಾರ್ಥಿಗಳ ಪೈಕಿ 29,548 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ.89.35 ಫಲಿತಾಂಶ ದಾಖಲಿಸಿದ್ದಾರೆ. ಹಾಜರಾದ 16,552 ಬಾಲಕರ ಪೈಕಿ 14,089 ಮಂದಿ ತೇರ್ಗಡೆ ಹೊಂದಿದ್ದಾರೆ. 16,516 ಬಾಲಕಿಯರ ಪೈಕಿ 15,459 ಮಂದಿ ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಬರೆದವರಲ್ಲಿ ಬಾಲಕಿಯರ ಸಂಖ್ಯೆ ಕಡಿಮೆಯಿದ್ದರೂ ಫಲಿತಾಂಶದಲ್ಲಿ ಮಾತ್ರ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಪುತ್ತೂರಿಗೆ ಉತ್ತಮ ಫಲಿತಾಂಶ ಲಭಿಸಿದ್ದು, ಪ್ರಥಮ ಬಾರಿಗೆ ಕೆಲವು ಸರಕಾರಿ ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಸ್ವಾತಿ 622(99.52ಶೇ.) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಪುತ್ತೂರು ಸುದಾನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಮೃತಾ 621(99.36 ಶೇ.) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಸುದಾನ ಆಂಗ್ಲ ಮಾಧ್ಯಮ ಶಾಲೆಯ ಹರಿತಾ ಎಂ.ಬಿ. 619(99.04), ಮಂಗಳೂರಿನ ಲೇಡಿಹಿಲ್‌ನ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲ್‌ನ ಸಿಂಧಿ ರೋಡ್ರಿಗಸ್ 618(ಶೇ.98.88) ಅಂಕ ಮತ್ತು ತನಿಶಾ ಶೆಟ್ಟಿ 617(98.72) ಅಂಕಗಳನ್ನು ಗಳಿಸಿದ್ದಾರೆ.

ಫಲಿತಾಂಶದಲ್ಲಿ ಚೇತರಿಕೆ: ಕೆಲವು ವರ್ಷಗಳ ಹಿಂದೆ ಪ್ರಥಮ ಸ್ಥಾನ ಕಾಯ್ದುಕೊಳ್ಳುತ್ತಿದ್ದ ದ.ಕ. ಜಿಲ್ಲೆ ಆ ಬಳಿಕ ಇಳಿಮುಖದ ಹಾದಿ ಹಿಡಿದಿತ್ತು. 2010ರಲ್ಲಿ 8ನೆ ಸ್ಥಾನ, 2011ರಲ್ಲಿ 21ನೆ ಸ್ಥಾನ, 2012ರಲ್ಲಿ 7ನೆ ಸ್ಥಾನ, 2013ರಲ್ಲಿ 5ನೆ ಸ್ಥಾನ ಕಂಡಿದ್ದ ದ.ಕ.ಜಿಲ್ಲೆ 2014ರಲ್ಲಿ 29ನೆ ಸ್ಥಾನದೊಂದಿಗೆ ಪಾತಾಳಕ್ಕೆ ಕುಸಿದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಜತೆ ಸಮಾಲೋಚನೆ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನ ನಡೆಸಿದ್ದರು. ಅದಕ್ಕೆ ತಕ್ಕಮಟ್ಟಿನ ಯಶಸ್ಸು ಪ್ರಾಪ್ತವಾಗಿದ್ದು, ಈ ಬಾರಿ 8ನೆ ಸ್ಥಾನಕ್ಕೇರಿದೆ

617 ಅಂಕಗಳನ್ನು ಗಳಿಸಿದ ಸಮೀಹಾ ಶಾದ್

ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆಯ ಹಿರಾ ಗರ್ಲ್ಸ್ ಹೈಸ್ಕೂಲ್‌ನ ವಿದ್ಯಾರ್ಥಿನಿ ಸಮೀಹಾ ಶಾದ್ ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 124, ಹಿಂದಿಯಲ್ಲಿ 100, ಗಣಿತದಲ್ಲಿ 98, ವಿಜ್ಞಾನದಲ್ಲಿ 99 ಹಾಗೂ ಸಮಾಜ ವಿಜ್ಞಾನದಲ್ಲಿ 96 ಸೇರಿದಂತೆ ಒಟ್ಟು 617 ಅಂಕಗಳೊಂದಿಗೆ ಶೇ.98.7 ಸಾಧನೆಗೈದಿದ್ದಾರೆ. ಈಕೆ ಬಜಾಲ್ ಪಕ್ಕಲಡ್ಕದ ಮುಹಮ್ಮದ್ ಶಮೀರ್ ಮತ್ತು ಸಬೀಹಾ ಫಾತಿಮಾರ ಪುತ್ರಿ.

ನಿರೀಕ್ಷಿತ ಫಲಿತಾಂಶ:

ಮೊತ್ತ ಮೊದಲಾಗಿ ನಾನು ಅಲ್ಲಾಹನನ್ನು ಸ್ಮರಿಸುತ್ತೇನೆ. ನನ್ನನ್ನು ಈ ಸಾಧನೆಗೈಯಲು ಪ್ರೋತ್ಸಾಹಿಸಿದ ತಂದೆ-ತಾಯಿ ಮತ್ತು ಶಾಲೆಯ ಶಿಕ್ಷಕ- ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಂದಂದಿನ ಪಠ್ಯವನ್ನು ಅಂದೇ ಓದಿದ್ದಲ್ಲದೆ, ಪರೀಕ್ಷೆ ಸಂದರ್ಭ ಗಮನವಿಟ್ಟು ಓದಿದ ಕಾರಣ ಇದು ಸಾಧ್ಯವಾಯಿತು. ಈ ಫಲಿತಾಂಶ ವನ್ನು ನಿರೀಕ್ಷಿಸಿದ್ದೆ. ಇದರಿಂದ ತುಂಬಾ ಖುಶಿಯಾಗಿದೆ. ಭವಿಷ್ಯದಲ್ಲಿ ವೈದ್ಯೆಯಾಗುವ ಕನಸಿದೆ ಎನ್ನುತ್ತಾರೆ ಸಮೀಹಾ ಶಾದ್. ನನ್ನ ತಂದೆ ದಿ.ಇಬ್ರಾಹೀಂ ಸಈದ್(ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕ) ಶೈಕ್ಷಣಿಕವಾಗಿ ಮುಸ್ಲಿಮ್ ಹೆಣ್ಮಕ್ಕಳು ಮುಂದೆ ಬರಬೇಕೆಂದು ಆಶಿಸುತ್ತಿದ್ದರು. ನಮ್ಮ ಮಕ್ಕಳಿಗೂ ಅವರೇ ಸ್ಫೂರ್ತಿ ಎನ್ನುತ್ತಾರೆ ಸಮೀಹಾರ ತಾಯಿ ಸಬೀಹಾ ಫಾತಿಮಾ.

ಭಾವಿಶ್ ಕೆ. (ಶೇ.98.7)

ಮಂಗಳೂರಿನ ಉರ್ವ ಸಂತ ಅಲೋಶಿ ಯಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭಾವಿಶ್ ಕೆ. ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 123, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 98 ಸಹಿತ ಒಟ್ಟು 617 ಅಂಕಗಳೊಂದಿಗೆ ಶೇ.98.7 ಸಾಧನೆಗೈದಿದ್ದಾರೆ. ಈತ ಪಣಂಬೂರು ಕೆಐಒಸಿಎಲ್ ಉದ್ಯೋಗಿ ಬಾಲಕೃಷ್ಣ ಹಾಗೂ ಶಶಿಕಲಾ ದಂಪತಿಯ ಪುತ್ರ.

ಫಲಿತಾಂಶ ಖುಷಿ ತಂದಿದೆ:

ಮನೆಯಲ್ಲಿ ಕಲಿಕೆಗೆ ಪೂರಕ ವಾತಾ ವರಣ ಮತ್ತು ಪ್ರೋತ್ಸಾಹವಿದ್ದ ಕಾರಣ ನಾನು ಅಂದಂದಿನ ಪಠ್ಯವನ್ನು ಅಂದೇ ಗಮನವಿಟ್ಟು ಓದುತ್ತಿದ್ದೆ. ಮುಂದೆ ಕಂಪ್ಯೂಟರ್ ಸೈನ್ಸ್ ಮಾಡುವ ಉದ್ದೇಶವಿದೆ ಎನ್ನುತ್ತಾರೆ ಭಾವಿಶ್ ಕೆ.

ಎಚ್.ಕೇದಾರನಾಥ್ (ಶೇ.98.7)

ಮಂಗಳೂರು ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ ಕನ್ನಡ ಮಾಧ್ಯಮ ವಿದ್ಯಾರ್ಥಿ ಎಚ್.ಕೇದಾರನಾಥ್ ವಿ.ಕಾಮತ್ ಕನ್ನಡದಲ್ಲಿ 124, ಇಂಗ್ಲಿಷ್‌ನಲ್ಲಿ 96, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 98, ಸಮಾಜ ವಿಜ್ಞಾನದಲ್ಲಿ 100 ಸಹಿತ 617 ಅಂಕ ಗಳೊಂದಿಗೆ ಶೇ.98.7 ಸಾಧನೆಗೈದಿದ್ದಾರೆ. ಈತ ಡೊಂಗರಕೇರಿಯ ಎಚ್.ವೆಂಕಟೇಶ ಕಾಮತ್ ಮತ್ತು ಎಚ್. ಪದ್ಮಾವತಿ ವಿ. ಕಾಮತ್ ದಂಪತಿಯ ಪುತ್ರ.

ಐಎಎಸ್ ಮಾಡುವೆ:

ಪ್ರತೀ ದಿನ 7-8 ಗಂಟೆಗಳ ಕಾಲ ಓದಿದ್ದೆ. ಹಾಗೇ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದಿದ್ದೆ. ಇದೀಗ ನಿರೀಕ್ಷಿತ ಫಲಿತಾಂಶ ಬಂದಿದೆ. ಮುಂದೆ ಐಎಎಸ್ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಕೇದಾರನಾಥ್.

Write A Comment