ಕನ್ನಡ ವಾರ್ತೆಗಳು

ಕರಾವಳಿಯಾದ್ಯಂತ ಗುಡುಗು ಗಾಳಿ ಸಹಿತ ಮಳೆ : ಪಾಣೆಮಂಗಳೂರಿನಲ್ಲಿ ಸಿಡಿಲಿಗೆ ಬಾಲಕ ಬಲಿ

Pinterest LinkedIn Tumblr

Rain_siddik_dead_1

ಮಂಗಳೂರು, ಮೇ .12: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸೋಮವಾರ ಗುಡುಗು ಗಾಳಿ ಸಹಿತ ಮಳೆಯಾಗಿದೆ. ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಗಾಳಿ ಸಹಿತ ಮಳೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಒಂದು ಜೀವಹಾನಿ ಸೇರಿದಂತೆ ಕೆಲವೆಡೆ ಹಾನಿ ಉಂಟಾಗಿರುವುದು ವರದಿಯಾಗಿದೆ.

ಸುರತ್ಕಲ್, ಮುಲ್ಕಿ, ಕೂಳೂರು, ಕಾವೂರು, ಬಜ್ಪೆ, ಕುಲಶೇಖರ, ತೊಕ್ಕೊಟ್ಟು ಮೊದಲಾದ ವ್ಯಾಪ್ತಿಗಳಲ್ಲಿ ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ. ಮಂಗಳೂರು ನಗರಲ್ಲಿ ಇಂದು ಸಂಜೆಯ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಸುಮಾರು 6 ಗಂಟೆಯ ಸುಮಾರಿಗೆ ಗಾಳಿ ಸಹಿತ ಮಳೆಯ ಸಿಂಚನವಾಗಿದೆ.

Rain_siddik_dead_3

ಪಾಣೆಮಂಗಳೂರಿನಲ್ಲಿ ಸಿಡಿಲಿಗೆ ಬಾಲಕ ಬಲಿ :

ಬಂಟ್ವಾಳ ತಾಲೂಕಿನಾದ್ಯಂತ ಸೋಮವಾರ ಸಂಜೆ ಅಬ್ಬರದ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಪಾಣೆಮಂಗಳೂರಿನಲ್ಲಿ ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟಿದ್ದರೆ, ಕಡೇಶ್ವಾಲ್ಯದಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ. ಸುಮಾರು 60ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಪಾಣೆಮಂಗಳೂರು ಬಂಗ್ಲೆಗುಡ್ಡೆಯ ಪಿ.ಎಚ್.ಯೂಸುಫ್ ಎಂಬವರ ಮಗ ಅಬೂಬಕರ್ ಸಿದ್ದೀಕ್(16) ಸಿಡಿಲು ಬಡಿದು ಮೃತಪಟ್ಟ ಬಾಲಕನಾಗಿದ್ದಾನೆ. ಸಿಡಿಲಿನ ಆಘಾತಕ್ಕೊಳಗಾದ ಕಡೇಶ್ವಾಲ್ಯ ಗ್ರಾಮದ ಕೆರೆಮೂಲೆ ನಿವಾಸಿ ಸುಶೀಲಾ ಎಂಬವರ ಪುತ್ರಿ ವನಿತಾ ಗಂಭೀರ ಗಾಯಗೊಂಡಿದ್ದು, ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಸಂಜೆ 4:30ರ ವೇಳೆಗೆ ಮಳೆ ಸುರಿಯಲಾರಂಭಿಸಿದ್ದು, ಇದೇ ವೇಳೆ ಅಬೂಬಕರ್ ಸಿದ್ದೀಕ್ ತನ್ನ ಮನೆಯ ಪಕ್ಕದ ಮಾವಿನ ಮರದ ಅಡಿಯಲ್ಲಿ ನಿಂತಿದ್ದ. ಈ ವೇಳೆ ಮರಕ್ಕೆ ಬಡಿದ ಸಿಡಿಲಿನಿಂದ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎನ್ನಲಾಗಿದೆ.

ಬಡಕುಟುಂಬಕ್ಕೆ ಬರಸಿಡಿಲು…

ಸಿಡಿಲಿಗೆ ಬಲಿಯಾದ ಅಬೂಬಕರ್ ಸಿದ್ದೀಕ್ ಬಂಗ್ಲೆಗುಡ್ಡೆಯ ಪಿ.ಎಚ್.ಯೂಸುಫ್‌ರ ನಾಲ್ವರು ಮಕ್ಕಳಲ್ಲಿ ಕೊನೆಯವ. ಕಲ್ಲಡ್ಕದ ಬೀಡಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಯೂಸುಫ್ ಪ್ರಸ್ತುತ ನಿವೃತ್ತರಾಗಿದ್ದಾರೆ. ತಂದೆ ತಾಯಿ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಮಗನನ್ನು ಕಳೆದುಕೊಂಡ ಬಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಯಾಗಿದ್ದ ಸಿದ್ದೀಕ್, ಕಳೆದ ಎಪ್ರಿಲ್ ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ. ಮಂಗಳವಾರ ಪ್ರಕಟವಾಗುವ ಫಲಿತಾಂಶದ ನಿರೀಕ್ಷೆಯಲ್ಲಿದ್ದ. ಈ ನಡುವೆಯೇ ಆತ ಸಿಡಿಲಿನ ರುದ್ರನರ್ತನಕ್ಕೆ ಬಲಿಯಾಗಿದ್ದಾನೆ.
ಪ್ರಾಕೃತಿಕ ವಿಕೋಪದಡಿ ಘಟನೆಯನ್ನು ದಾಖ ಲಿಸಿದ್ದು, ಪ್ರಸ್ತುತ ಕಾನೂನಿನಂತೆ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಲು ಮಹಜರು ಸಲ್ಲಿಸಿ ದ್ದಾಗಿ ಕಂದಾಯ ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್. ನಾಮನಿರ್ದೇಶಿತ ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಸಹಿತ ಇತರರು ಆಸ್ಪತ್ರೆಗೆ ಭೇಟಿ ನೀಡಿ, ಸಂತಾಪ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ: 60ಕ್ಕೂ ಅಧಿಕ ಮನೆಗಳಿಗೆ ಹಾನಿ…

ಗುಡುಗು ಮಿಂಚಿನಿಂದಾಗಿ ಬಂಟ್ವಾಳ ತಾಲೂಕಿನಾದ್ಯಂತ ವಿದ್ಯುತ್ ಕೂಡಾ ವ್ಯತ್ಯಯಗೊಂಡಿದೆ. ಅನಂತಾಡಿ ಗ್ರಾಮದಲ್ಲಿ 15 ಮನೆಗಳಿಗೆ ಹಾನಿಯಾಗಿದ್ದು, ಒಂದು ಮನೆ ಸಂಪೂರ್ಣ ಕುಸಿದುಬಿದ್ದಿದೆ. 9 ಮನೆಗಳಿಗೆ ತೀವ್ರ ಹಾನಿ ಹಾಗೂ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನೆಟ್ಲ ಮುಡ್ನೂರಿನ ಪರಿಸರದಲ್ಲೂ ಗಾಳಿಮಳೆಯ ಅಬ್ಬರಕ್ಕೆ ಒಟ್ಟು 18 ಮನೆಗಳಿಗೆ ಹಾನಿಯಾಗಿದ್ದು, 12 ಮನೆಗಳಿಗೆ ತೀವ್ರ ಹಾನಿ ಹಾಗೂ 6 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ನೆಟ್ಲಮುಡ್ನೂರು ಹಾಗೂ ಅನಂತಾಡಿ ಗ್ರಾಮಗಳಲ್ಲಿ ತೋಟದ ಬೆಳೆಗಳಿಗೆ ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಸುಮಾರು 26 ಲಕ್ಷ ರೂ ನಷ್ಟ ಅಂದಾಜಿಸಿದ್ದಾರೆ. ಅನಂತಾಡಿ ಗ್ರಾಮದ 8 ಪ್ರಕರಣಗಳಲ್ಲಿ 2 ಎಕ್ರೆಯಷ್ಟು ಬೆಳೆ ಹಾನಿಯಾಗಿದ್ದು, ಸುಮಾರು 20 ಲಕ್ಷ ನಷ್ಟ ಸಂಭವಿಸಿದೆ. ನೆಟ್ಲ ಮುಡ್ನೂರು ಗ್ರಾಮದಲ್ಲಿ 1 ಎಕ್ರೆಯಷ್ಟು ಬೆಳೆ ಹಾನಿ ಸಂಭವಿಸಿದೆ.

ಕಡಬ ಪರಿಸರದಲ್ಲಿ ಭಾರೀ ಗಾಳಿಮಳೆ: ಅಪಾರ ಹಾನಿ

ಸೋಮವಾರ ಮುಂಜಾನೆ ಕಡಬ ಸುತ್ತಮುತ್ತ ಸುರಿದ ಭಾರೀ ಗಾಳಿ-ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದರೆ, ಕೆಲವೆಡೆ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸೋಮವಾರ ರಾತ್ರಿ ಯಾದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಬಗೆಹರಿಯದಿರುವುದರಿಂದ ಊರವರು ಕತ್ತಲಲ್ಲೇ ಕಳೆಯುವಂತಾಗಿತ್ತು.

Rain_siddik_dead_2

ರೈಲು ಸಂಚಾರಕ್ಕೆ ಅಡ್ಡಿ.

ಬಿರುಗಾಳಿ ಮಳೆಗೆ ಬಿ.ಮೂಡ ಗ್ರಾಮದ ಕುಪ್ಪಿಲದಲ್ಲಿ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಮರಬಿದ್ದು ಮಂಗಳೂರು ಸುಬ್ರಹ್ಮಣ್ಯ ರೈಲು ಸಂಚಾರಕ್ಕೆ ತಡೆಯಾಗಿದೆ. ಘಟನೆ ನಡೆದ ಸ್ವಲ್ಪ ಹೊತ್ತಿಗೆ ರೈಲು ಬರುವ ಮಾಹಿತಿ ಇದ್ದಂತಹ ಸ್ಥಳೀಯರು ಬಿ.ಸಿ.ರೋಡ್ ರೈಲ್ವೆ ಸ್ಟೇಶನ್‌ಗೆ ಮಾಹಿತಿ ನೀಡಿ ಅದನ್ನು ನಿಲುಗಡೆ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಮರದ ಕೊಂಬೆಗಳನ್ನು ಕಡಿದು ತಡೆ ತೆರವು ಮಾಡಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ತಲಪಾಡಿ ಮಸೀದಿ ಮಿನಾರಕ್ಕೆ ಹಾನಿ  

ಬಿ.ಸಿ.ರೋಡ್ ತಲಪಾಡಿ ಮಸೀದಿಯ ಮಿನಾರಕ್ಕೆ ಸಿಡಿಲು ಹೊಡೆದು ಹಾನಿಯಾಗಿದ್ದು, ಸುತ್ತಲಿನ ಪ್ರದೇಶದ 21 ಮನೆಗಳಿಗೆ ಅಲ್ಪಸ್ವಲ್ಪಹಾನಿಯಾಗಿದೆ. ಪಂಜಿಕಲ್ಲು ಗ್ರಾಮದ ಪುಂಚಾಡಿ ಎಂಬಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬವೊಂದು ರಸ್ತೆಗೆ ಬಿದ್ದು, ಬಸ್ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಿ ಮೂಡ ಗ್ರಾಮದ ಗಾಂದೋಡಿ ಪರಾರಿ ಎಂಬಲ್ಲಿ ಗಾಳಿಮಳೆಗೆ ವಿದ್ಯುತ್ ಕಂಬ ಧರೆಗುರುಳಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಸಂಜೆ ಸುಮಾರು 4:30ರ ಹೊತ್ತಿಗೆ ತಾಲೂಕಿನಾದ್ಯಂತ ಅಬ್ಬರದ ಗುಡುಗು, ಮಿಂಚು ಹಾಗೂ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮಕರಣಿಕ ಎ.ಪಿ.ಭಟ್, ನಾರಾಯಣ ಪೂಜಾರಿ, ಗ್ರಾಮಕರಣಿಕ ರಾಜ್‌ಕುಮಾರ್ ಹಾಗೂ ಸಿಬ್ಬಂದಿ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment