ಕನ್ನಡ ವಾರ್ತೆಗಳು

ಮೇ 10 ರಿಂದ `ಗೋಜ್ಯೋತಿ’ ಪರಿಕ್ರಮ ಯಾತ್ರೆ

Pinterest LinkedIn Tumblr

Anantha_Gou_Yatra_1

ಪೆರ್ಲ,ಮೇ.08 : ಕಾಸರಗೋಡಿಗರಿಂದ ಕಾಸರಗೋಡು ಗೋವಿಗೆ ಕಾಸರಗೋಡು ಗೋವಿನ ತುಪ್ಪದ ವಿಶಿಷ್ಟ `ಅನಂತ ನೀರಾಜನ’ ಕಾರ್ಯಕ್ರಮಕ್ಕಾಗಿ ಪೆರ್ಲ ಸನಿಹದ ಬಜಕೂಡ್ಲಿನಲ್ಲಿರುವ ಅಮೃತಧಾರಾ ಗೋಶಾಲೆ ಭರದಿಂದ ಸಿದ್ಧಗೊಳ್ಳುತ್ತಿದೆ. ಮೇ ತಿಂಗಳ 21 ರಿಂದ ಜರಗುವ ಗೋಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಜೊತೆಯಲ್ಲಿ ಗೋಮಯ ಜ್ಯೋತಿಯಿಂದ ಅನಂತ ನೀರಾಜನ ಕಾರ್ಯಕ್ರಮವನ್ನು 22 ರಂದು ರಾತ್ರಿ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪವಿತ್ರವಾದ ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಲಂಕೃತವಾದ `ಗೋ ಜ್ಯೋತಿ’ ರಥವು ಕುಂಬಳೆ ಸೀಮೆಯಾದ್ಯಂತ ದೇಸೀ ತಳಿಯ ಹಸುಗಳ ಮಹತ್ವವನ್ನು ಸಾರುತ್ತಾ ಸಾಗಲಿದೆ.

ಮೇ 10ರಂದು ಪೂರ್ವಾಹ್ನ 9 ಗಂಟೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ ಮಾಣಿಲ ಶ್ರೀಧಾಮದ ಯೋಗಿಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವದಿಸಿ `ಗೋ ಜ್ಯೋತಿ’ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಶಂ.ನಾ.ಅಡಿಗ ಕುಂಬಳೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಧಾರ್ಮಿಕ ಮುಂದಾಳು ಉಮೇಶ್ ಪೈ ಕುಂಬಳೆ ವಹಿಸಲಿದ್ದಾರೆ.

ಕಾಸರಗೋಡು ಗಿಡ್ಡ ಗೋವುಗಳು ಸಮಸ್ತ ಭಾರತದಲ್ಲಿಯೇ ಅತ್ಯಂತ ವಿಶೇಷವೆಂದು ಪರಿಗಣಿಸಲ್ಪಟ್ಟು ದೇಶದ ಆದ್ಯಂತ ಅತೀ ಹೆಚ್ಚು ಬೇಡಿಕೆಯುಳ್ಳದ್ದಾಗಿವೆ. ಆದರೂ ಈ ಕುರಿತು ಅನಾದರವನ್ನು ತೋರಿಸುತ್ತಿರುವ ಜನರಲ್ಲಿ ಗೋವಿನ ಮಹತ್ವದ ಕುರಿತಾದ ಅರಿವನ್ನು ಮೂಡಿಸಲು `ಗೋಜ್ಯೋತಿ’ ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯ ಆದ್ಯಂತ ಸಾಲಂಕೃತ ರಥದಲ್ಲಿ ಗೋವಿನೊಂದಿಗೆ ಗೋಪಾಲಕೃಷ್ಣರು ಓಡಾಟ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕಾಸರಗೋಡು ಗೋವಿನ ಹಾಲಿನಿಂದ ತಯಾರಿಸಿದ ತುಪ್ಪದ ಆರತಿಯನ್ನು ಗೋವಿಂದ – ಗೋಮಾತೆಯರಿಗೆ ಮಾಡಬಹುದು.

ಯಾತ್ರೆಯ ಸಂದರ್ಭದಲ್ಲಿ ನಡೆಯುವ ನೀರಾಜನಕ್ಕೆ ಕಾಸರಗೋಡು ಗಿಡ್ಡ ಗೋವಿನ ತುಪ್ಪವನ್ನೇ ಉಪಯೋಗಿಸಲಾಗುವುದು. ಪ್ರತಿದಿನ ಸಂಜೆಯ ಕಾರ್ಯಕ್ರಮದಲ್ಲಿ ಭಜನೆ, ಪ್ರವಚನಗಳನ್ನು ಏರ್ಪಡಿಸಲಾಗಿದೆ. ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ದೇಸೀ ಗೋ ಆಧಾರಿತ ಕೃಷಿ ಮಾಡುವವರನ್ನು ಗುರುತಿಸಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

Write A Comment