ಕನ್ನಡ ವಾರ್ತೆಗಳು

ಬಡವರ ಗೂಡಂಗಡಿಗಳನ್ನು ತೆರವುಗೊಳಿಸುವ ಪುರಸಭೆ ವಿರುದ್ಧ ಬಿಜೆಪಿ ಆಕ್ರೋಷ; ಕುಂದಾಪುರ ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ನಗರದ ಫೆರ್ರಿ ರಸ್ತೆಯಲ್ಲಿ, ಕಳೆದ 25 ವರ್ಷದಿಂದ ಸತತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪ ಸಂಖ್ಯಾತ ಕೋಟಾದಡಿ ಮಂಜೂರಾದ ಸಾರ್ವಜನಿಕ ದೂರವಾಣಿ ಬೂತನ್ನು ಯಾವುದೇ ಮುನ್ಸೂಚನೆ ನೀಡದೆ ಅಕ್ರಮವಾಗಿ ತೆರವುಗೊಳಿಸಿ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ಹಾಗೂ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಸರ್ವಾಧಿಕಾರಿ ದೋರಣೆ ಖಂಡಿಸಿ ಪುರಸಭೆಯ ಬಿಜೆಪಿ ಸದಸ್ಯರು, ನಗರದ ಗೂಡಂಗಡಿ ಮಾಲಿಕರು ಹಾಗೂ ಸಾರ್ವಜನಿಕರು ಮಂಗಳವಾರ ಬೆಳಿಗ್ಗೆ ಕುಂದಾಪುರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Pursabhe_Muttige_BJP (2) Pursabhe_Muttige_BJP (8) Pursabhe_Muttige_BJP (1) Pursabhe_Muttige_BJP (4) Pursabhe_Muttige_BJP (5) Pursabhe_Muttige_BJP (6) Pursabhe_Muttige_BJP (7) Pursabhe_Muttige_BJP (3) Pursabhe_Muttige_BJP

ಕುಂದಾಪುರದಲ್ಲಿ ಬಹಳಷ್ಟು ಬಹುಮಹಡಿ ಕಟ್ಟಡಗಳು ತಲೆ ಎತ್ತಿದೆ. ಬಹುತೇಕ ವಿಷಯಗಳಲ್ಲಿ ಅದ್ಯಾವುದು ಕಾನೂನು, ಕಾಯ್ದೆಗಳನ್ನು ಪಾಲನೆ ಮಾಡಿಲ್ಲ. ಆದರೆ ಅವರಿಗೆ ಪುರಸಭೆಯಿಂದ ಶ್ರೀ ರಕ್ಷೆ ದೊರಕಿರುವುದು ಒಂದೆಡೆ, ಇತ್ತ ಕಡೆ ನಿತ್ಯದ ಕೂಳಿಗಾಗಿ ಹೋರಾಟ ಮಾಡುತ್ತಿರುವ ಸಣ್ಣ ಸಣ್ಣ ಗೂಡಂಗಡಿಯನ್ನು ಕಿತ್ತೆಸೆದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ ನಡೆಸುತ್ತಿದೆ. ಆ ಸಂದರ್ಭದಲ್ಲಿ ನಗರದ ಫೆರ್ರಿ ರಸ್ತೆಯಲ್ಲಿರುವ ಬೂತನ್ನು ದುರುದ್ದೇಶ ಪೂರ್ವಕವಾಗಿ ಸಂಪೂರ್ಣವಾಗಿ ನುಜ್ಜಿ ಗುಜ್ಜಿ ಹಾಳು ಮಾಡಿ ನಷ್ಟ ಮಾಡಿದ್ದಲ್ಲದೆ, ಬೂತನ್ನು ನಡೆಸುತ್ತಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಅನ್ನದ ಬಟ್ಟಲನ್ನು ಕಸಿದುಕೊಂಡಿದೆ ಇಷ್ಟಲ್ಲದೆ ಹೀಗೆ ಕಾರ್ಯನಿರ್ವಹಿಸುತ್ತಿರುವ ಇನ್ನು ಅನೇಕ ಅಂಗಡಿಗಳನ್ನು ತೆರವುಗೊಳಿಸುತ್ತೇವೆ ಎಂಬ ಬೆದರಿಕೆಯನ್ನು ಒಡ್ಡಿದದ್ದು ಇದು ಸರಿಯಲ್ಲ ಎಂದು ಪುರಸಭಾ ಸದಸ್ಯ ರಾಜೇಶ ಕಾವೇರಿ ಕಿಡಿ ಕಾರಿದರು.

ತೆರವಿಗೊಳಿಸಿದ ಭೂತನ್ನು ಇದ್ದ ಸ್ಥಳದಲ್ಲಿಯೇ ಪುರಸಭೆ ತನ್ನ ಸ್ವಂತ ಖರ್ಚಿನಿಂದ ಸ್ಥಾಪಿಸಬೇಕು ಮತ್ತು ಇದುವರೆಗೆ ಆತನಿಗೆ ಆದ ನಷ್ಟಕ್ಕೆ ಪರಿಹಾರ ನೀಡಬೇಕು. ಬೂತ್ ಕಳೆದುಕೊಂಡ ವ್ಯಕ್ತಿಗೆ ಹಾಗೂ ಇನ್ನುಳಿದ ಗೂಡಂಗಡಿಗಳನ್ನು ತೆರವುಗೊಳಿಸುತ್ತೇವೆ ಎಂಬ ಹೇಳಿಕೆಯನ್ನು ಹಿಂಪಡೆಯಬೇಕು. ಕಾನೂನು ಕಾಯ್ದೆಗಳನ್ನು ಮೀರಿ, ಉಲ್ಲಂಘಿಸಿರುವ ಬಹು ಮಹಡಿ ಕಟ್ಟಡಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಪ್ರತಿಭಟನಾಕಾರರು ಆಗ್ರಹಿಸಿದರು.

ಕುಂದಾಪುರ ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಮತ್ತು ಕಳಪೆ ರಸ್ತೆ ತಡೆಗಳನ್ನು ನಿರ್ಮಿಸಲಾಗಿದ್ದು ಇದಕ್ಕೆ ಸಾರ್ವಜನಿಕರಿಂದ ತೀವೃ ವಿರೋಧ ವ್ಯಕ್ತವಾಗಿತ್ತು. ಆ ಕಾರಣ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸದರಿ ಹಂಪ್‌ಗಳನ್ನು ತೆರವುಗೊಳಿಸಬೇಕು, ಇಲ್ಲ ಉತ್ತಮ ಗುಣಮಟ್ಟದ ವೈಜ್ಞಾನಿಕ ಹಂಪ್‌ಗಳನ್ನು ಅಳವಡಿಸಬೇಕು ಎಂದು ನಿರ್ಣಯವಾಗಿದ್ದರೂ ಕೂಡ ಸದಸ್ಯರ ಬಹುಮತ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದೀಗ ಕಾಟಾಚಾರಕ್ಕೆ ಅಳವಡಿಸಲಾದ ಫೈಬರ್ ಹಂಪ್‌ಗಳ ಮೇಲೆ ಡಾಂಬರಗಳನ್ನು ಹೊದಿಸಿ ಹಂಪ್ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಜನರ ಕಣ್ಣಿಗೆ ಮಣ್ಣೆರೆಚಿ ಪುರಸಭಾ ಖಜಾನೆಯನ್ನು ಕೊಳ್ಳೆಹೊಡೆಯುತ್ತಿರುವ ಲಕ್ಷಣಗಳು ಕಂಡು ಬರುತ್ತಿದೆ ಎಂಬ ಗಂಭೀರ ಆರೋಪವು ಕೇಳಿಬಂತು.

ಪೈಬರ್ ಹಂಪ್‌ಗಳ ಮೇಲೆ ಡಾಂಬರ್ ಹೊದೆಕೆಯನ್ನು ಹಾಕಿ ಜನರ ಕಣ್ಣಿಗೆ ಮಣ್ಣೆರೆಚುವ ಈ ಹಂಪ್‌ಗಳನ್ನು ತಕ್ಷಣವೇ ತೆರವುಗೊಳಿಸಿ ಸಂಚರಿಸಲು ತೊಂದರೆಯಾಗದಂತೆ ಹಂಪುಗಳ ಅಳತೆಗಳನ್ನು ಸಂಬಂಧ ಪಟ್ಟ ತಜ್ಞರಿಂದ ಸಲಹೆ ಪಡೆದುಕೊಂಡು ಅಳವಡಿಸಬೇಕೆಂದು ಆಗ್ರಹಿಸಿದರು.

ಬಡವರಿಗೆ ಅನ್ಯಾಯವಾದಲ್ಲಿ ಹಾಗೂ ಬೇಡಿಕೆಗಳೂ ಈಡೇರಿಸದಿದ್ದಲ್ಲಿ ಮುಂದಿನ 10 ದಿನಗಳಲ್ಲಿ ಇನ್ನಷ್ಟು ತೀವೃವಾದ ಪ್ರತಿಭಟನೆಯನ್ನು ನಾಗರಿಕರೊಂದಿಗೆ ನಡೆಸುವ ಎಚ್ಚರಿಕೆಯನ್ನೂ ಇದೇ ಸಂದರ್ಭ ಪ್ರತಿಭಟನಾಕಾರರು ನೀಡಿದರು.

ಈ ಸಂದರ್ಭ ಬಿಜೆಪಿ ಬೆಂಬಲಿತ ಪುರಸಭಾ ಸದಸ್ಯರು, ಬಿಜೆಪಿ ಪ್ರಮುಖರು, ನಾಗರೀಕರು ಉಪಸ್ಥಿತರಿದ್ದರು.

Write A Comment