ಮಂಗಳೂರ,ಮೇ.05: ಬೈಕ್ ಆ್ಯಂಬುಲೆನ್ಸ್ ಸೇವೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಮಂಗಳವಾರ ಚಾಲನೆ ನೀಡಿದರು. ಸದ್ಯಕ್ಕೆ ಇದು ಮಂಗಳೂರು ಹಾಗೂ ಉಳ್ಳಾಲದಲ್ಲಿ ಕಾರ್ಯಾಚರಿಸಲಿದೆ ಎಂದು ಸಚಿವರು ತಿಳಿಸಿದರು.
ಇದೀಗ ಸದ್ಯ 32 ಬೈಕ್‍ಗಳಲ್ಲಿ 20ನ್ನು ಬೆಂಗಳೂರಿಗೆ ಒದಗಿಸಲಾಗಿದೆ. ಮಂಗಳೂರು ಮತ್ತು ಉಳ್ಳಾಲಕ್ಕೆ ಎರಡು ಬೈಕ್ ನೀಡಲಾಗಿದೆ. ಉಳಿದವುಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ನೀಡಲಾಗುವುದು. ಬೈಕ್‍ಗೆ ತಲಾ 2.5 ಲಕ್ಷ ವೆಚ್ಚವಾಗಲಿದ್ದು, ಪ್ಯಾರ ಮೆಡಿಕಲ್ ಸಿಬಂದಿ ಇದನ್ನು ನಿರ್ವಹಿಸುವರು ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮಂಗಳೂರಿನಲ್ಲಿ ಮಲೇರಿಯಾ ಹೆಚ್ಚುತ್ತಿರುವ ಕುರಿತಂತೆ ಜರ್ಮನಿಯ ಬರ್ಲಿನ್‍ನ ಇನ್ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಡಿಸಿನ್ ಆ್ಯಂಡ್ ಇಂಟರ್‍ನ್ಯಾಷನಲ್ ಹೆಲ್ತ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸಂಸ್ಥೆಯ ಡಾ. ಮೆಡ್ ಪ್ರಾಂಕ್ ನೇತೃತ್ವದಲ್ಲಿ ಮೂರು ಮಂದಿ ಇಲ್ಲಿ ಅಧ್ಯಯನ ನಡೆಸಿ ಆರು ತಿಂಗಳೊಳಗೆ ವರದಿ ನೀಡಲಿದ್ದಾರೆ. ಮಂಗಳೂರಿನಲ್ಲಿ ಮಲೇರಿಯಾ ಹೆಚ್ಚಳವಾಗಲು ಕಾರಣವೇನು, ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದೇಶದಲ್ಲಿಯೇ ಎರಡನೇ `ಸೋಟ್ರ್ಸ್ ಇಂಜುರಿ ಸೆಂಟರ್’ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ. ಕ್ರೀಡಾಪಟುಗಳಿಗೆ ಉತ್ತಮ ಚಿಕಿತ್ಸೆಯೊಂದಿಗೆ ಅವರು ಶೀಘ್ರ ಗುಣಮುಖವಾಗುವ ದಿಸೆಯಲ್ಲಿ ಈ ಚಿಕಿತ್ಸಾ ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ಕೇಂದ್ರಕ್ಕೆ 2ರಿಂದ 6 ಕೋಟಿ ವೆಚ್ಚವಾಗಲಿದ್ದು, ಡಾ. ತಿಲಕ್ ಹಾಗೂ ಡಾ. ಮದನ್ ಬಲ್ಲಾಳ್ ನೇತೃತ್ವದಲ್ಲಿ ಕಾರ್ಯಾಚರಿಸಲಿದೆ. ಸದ್ಯ ಒಬ್ಬರು ಫಿಸಿಯೋಥೆರಪಿಸ್ಟ್ ಹಾಗೂ ಮೂರು ವೈದ್ಯರಿದ್ದು ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವೈದ್ಯರುಗಳ ಸಂಖ್ಯೆ ಹೆಚ್ಚಾಗಲಿದೆ. ಆರು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಸುಸಜ್ಜಿತ ಒ.ಟಿ. ಸೌಲಭ್ಯ, ಟ್ರಾಮಾ ಸೆಂಟರ್ ಒದಗಿಸಲಾಗಿದೆ. ಈಗ ದೆಹಲಿಯಲ್ಲಿ ಇಂತಹ ಒಂದು ಸೆಂಟರ್ ಇದ್ದು, ಬೆಂಗಳೂರಿನದ್ದು ದೇಶದಲ್ಲಿಯ ಎರಡನೇ ಸೆಂಟರ್. ಇಲ್ಲಿ ಕ್ರೀಡಾಪಟುಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಿಂದ ಕಡಿಮೆ ದರದಲ್ಲಿ ನೀಡಲಾಗುವುದು ಎಂದರು.
ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಮಾಸಾಶನ ವಿಳಂಬವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶೀಘ್ರದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಆರೋಗ್ಯ ಇಲಾಖೆಯಿಂದ ನೀಡುವ ಸೌಲಭ್ಯವನ್ನು ಒದಗಿಸುತ್ತೇವೆ. ಕೆಲ ಸೌಲಭ್ಯಗಳನ್ನು ಕಂದಾಯ ಇಲಾಖೆಯಿಂದ ಒದಗಿಸಬೇಕಾಗಿದೆ. ನಮ್ಮ ಸರಕಾರ ಆಡಳಿತಕ್ಕೆ ಬರುವ ಮೊದಲು ಎಂಡೋ ಸಂತ್ರಸ್ತರ ನಿಖರ ಸಮೀಕ್ಷೆ ನಡೆದಿರಲಿಲ್ಲ. ನಾವು ಸಮೀಕ್ಷೆ ನಡೆಸಿ ನೈಜ ಎಂಡೋ ಸಂತ್ರಸ್ತರನ್ನು ಗುರುತಿಸಿದ್ದೇವೆ. ಸಂತ್ರಸ್ತರಿಗೆ ಶೀಘ್ರವೇ ಮೊಬೈಲ್ ಅ್ಯಂಬುಲೆನ್ಸ್ ಸೇವೆಯನ್ನು ಕೂಡಾ ಒದಗಿಸಲಾಗುವುದು ಎಂದರು.