ಕನ್ನಡ ವಾರ್ತೆಗಳು

ನಂತೂರು ಪ್ರದೇಶದಲ್ಲಿ ನೀರಿನ ಅಭಾವ: ಸ್ಥಳೀಯರಿಂದ ಮನಪಾ ಮುಂಭಾಗ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಮೇ 5: ನಗರದ ನಂತೂರು ಪ್ರದೇಶದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಮಂಗಳೂರು ಮ.ನ.ಪಾ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮನಪಾ ಮಾಜಿ ಸದಸ್ಯೆ ಜಯಂತಿ ಬಿ. ಶೆಟ್ಟಿ, ಕುಡಿಯುವ ನೀರಿಗಾಗಿ ಕೋಟಿಗಟ್ಟಲೆ ಹಣ ಬರುತ್ತದೆ. ಪಾಲಿಕೆಯಲ್ಲಿ ಅದನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸುಮಾರು 50 ವರ್ಷದ ಹಿಂದೆ ಪೆನಲ್ ಬೋರ್ಡ್ ಅಳವಡಿಸಿದ ಕಾರಣ ಅಲ್ಲಿ ಒಂದು ಬೋರ್‍ವೆಲ್‍ನಿಂದ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಆ ಸಂದರ್ಭದಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮೊಟರ್‌ಗಳು ಹಾಳಾಗಿದ್ದು, ಈ ಪ್ರದೇಶಗಳಿಗೆ ಕುಡಿಯುವ ನೀರಿನ ಸಮರ್ಪಕ ಸರಬರಾಜು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಪಿಐಎಂ ಪಕ್ಷದ ನಂತೂರು ಪ್ರದೇಶದ ಶಾಖಾ ಕಾರ್ಯದರ್ಶಿ ಲಿಂಗಪ್ಪ ನಂತೂರು ಮಾತನಾಡಿ, ದಿನದ 24 ಗಂಟೆಯೂ ಕುಡಿಯುವ ನೀರನ್ನು ಜನರಿಗೆ ಕೊಡುತ್ತೇವೆ ಎಂದು ಹೇಳಿ ಜನರಿಂದ ಮತಗಳಿಸಿದ ಇಲ್ಲಿಯ ಸ್ಥಳೀಯ ಪ್ರತಿನಿಧಿಗಳು ಹಲವಾರು ಸಮಯಗಳಿಂದ ಈ ಪ್ರದೇಶಗಳಿಗೆ ಸರಿಯಾಗಿ ಒಂದು ಗಂಟೆ ಕೂಡ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಮಲ್ಲಿಕಟ್ಟೆಯಿಂದ ನಂತೂರು ರಸ್ತೆಯು ಅಗಲೀಕರಣ ಮತ್ತು ಅಭಿವೃದ್ಧಿ ಆಗುವ ಈ ಸಂದರ್ಭದಲ್ಲಿ ಆ ಪ್ರದೇಶದಲ್ಲಿದ್ದ ಪಂಪ್‍ಹೌಸ್‍ನ್ನು ತೆಗೆದುದರಿಂದ ನಂತೂರಿನ ಸುತ್ತಮುತ್ತಲಿರುವ ಪ್ರದೇಶಗಳು ಎತ್ತರದ ಪ್ರದೇಶವಾಗಿರುವುದರಿಂದ ನೀರು ಸರಾಗವಾಗಿ ಹರಿಯಲು ಅಸಾಧ್ಯವಾಗುತ್ತದೆ. ಈ ಪ್ರದೇಶಗಳಿಗೆ ನೀರು ಸರಾಗವಾಗಿ ಹರಿಯಲು ಹೊಸ ಮೋಟರ್ ಅಳವಡಿಸಿ ಈ ಪ್ರದೇಶದ ಜನರಿಗೆ ಕುಡಿಯುವ ನೀರನ್ನು ಒದಗಿಸುವುದು ಈ ಪ್ರದೇಶದ ಸ್ಥಳೀಯ ಜನ ಪ್ರತಿನಿಧಿಗಳ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಅದೇ ರೀತಿ ಈ ಪ್ರದೇಶಕ್ಕೆ ನೀರಿನ ಸಂಪರ್ಕಕ್ಕಾಗಿ ಅಳವಡಿಸಿದಂತಹ ನೀರಿನ ಪೈಪ್‍ಗಳು 45 ವರ್ಷಗಳ ಹಿಂದಿನ ಕಾಲದ್ದಾಗಿರುವುದರಿಂದ ಪೈಪ್‍ಗಳು ತುಕ್ಕು ಹಿಡಿದು ಹೋಗಿವೆ. ಶೀಘ್ರವೇ ಹೊಸ ಮೋಟರ್ ಮತ್ತು ಪೈಪ್‍ಗಳನ್ನು ಅಳವಡಿಸಿ ಜನರಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕಾಗಿ ಸಿಪಿಐಎಂ ನಂತೂರು ಶಾಖೆ ಆಗ್ರಹಿಸಿದೆ ಎಂದು ತಿಳಿಸಿದರು. ಪ್ರತಿಭಟನೆಯ ಬಳಿಕ ಶಾಸಕರಿಗೆ, ಆಯುಕ್ತರಿಗೆ ಮೇಯರ್ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ಸಭೆಯಲ್ಲಿ ಥೋಮಸ್ ನಂತೂರು, ಶಶಿಕಲಾ ನಂತೂರು, ಅಶ್ವಿನಿ ನಂತೂರು, ಸವಿತ ನಂತೂರು, ವಸಂತಿ ನಂತೂರು, ಶಶಿಕಲಾ ಮೂಡುಶೆಡ್ಡೆ, ಪ್ರಶಾಂತ್ ಎಂ.ಬಿ., ತಿಮ್ಮಯ್ಯ ಕೊಂಚಾಡಿ, ಬೇಬಿ ತಣ್ಣೀರುಬಾವಿ, ಶಮೀಮಬಾನು, ಉಮಾಶಂಕರ್, ರವಿ ಉರ್ವಾಸ್ಟೋರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಥೋಮಸ್ ನಂತೂರು ಧನ್ಯವಾದ ಸಲ್ಲಿಸಿದರು.

Write A Comment