ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ರಂಗಮಂದಿರ ನಿರ್ಮಿಸಲು ಅನುದಾನಕ್ಕೆ ಪ್ರಸ್ತಾವನೆ : ಸಚಿವೆ ಉಮಾಶ್ರೀ

Pinterest LinkedIn Tumblr

Umashri

ಮಂಗಳೂರು: ಮಂಗಳೂರಿನಲ್ಲಿ ಉದ್ದೇಶಿತ ರಂಗಮಂದಿರ ನಿರ್ಮಿಸಲು ಅನುದಾನಕ್ಕೆ ಹೊಸದಿಲ್ಲಿಯ ನೇಶನಲ್‌ ಸ್ಕೂಲ್‌ ಡ್ರಾಮಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಲಭ್ಯವಾಗುವ ಭರವಸೆ ಇದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫೆಡರೇಶನ್‌ ಕಪ್‌ ಸೀನಿಯರ್‌ ಕ್ರೀಡಾಕೂಟಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲೇ ನೇಶನಲ್‌ ಸ್ಕೂಲ್‌ ಡ್ರಾಮಾದ ಸಭೆ ನಡೆಯಲಿದ್ದು, ಅದರಲ್ಲಿ ಈ ಪ್ರಸ್ತಾವನೆ ಬರಲಿದೆ ಎಂದರು.

ಮಂಗಳೂರಿನಲ್ಲಿ ರಾಷ್ಟ್ರೀಯ ಫೆಡರೇಶನ್‌ ಕಪ್‌ ಸೀನಿಯರ್‌ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಕ್ರೀಡಾಪಟುಗಳು ಉತ್ತಮ ಸಾಧನೆ ದಾಖಲಿಸಿ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಕ್ರೀಡೆ ದೈಹಿಕ ಕ್ಷಮತೆ ವರ್ಧಿಸಿದರೆ, ಕಲೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಕ್ರೀಡಾಕೂಟದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಲ್ಲಿ ಜೋಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 20 ಲಕ್ಷ ರೂ. ಅನುದಾನವನ್ನು ಇದಕ್ಕೆ ಒದಗಿಸಿದೆ ಎಂದು ಅವರು ಹೇಳಿದರು.

ರಾಣಿ ಅಬ್ಬಕ್ಕ ಉತ್ಸವದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಜಿಲ್ಲಾ ಉತ್ಸವವಾಗಿ ಆಚರಿಸುವ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಉಪಸ್ಥಿತರಿದ್ದರು.

Write A Comment