ಕನ್ನಡ ವಾರ್ತೆಗಳು

ಕೊಂಕಣ್ ತಾರಾಂ ಜೆರಿಮೆರಿ ಸ್ಥಾಪಕ ಸಲಹಾಗಾರ ಲಾರೇನ್ಸ್ ಡಿ. ಡಿ’ಸೋಜಾ ತಾಕೋಡೆ ನಿಧನ.

Pinterest LinkedIn Tumblr

Lawrence_D_Souza

ಮುಂಬಯಿ, ಎ.30: ಮುಂಬಯಿ ಕೇಂದ್ರವಾಗಿರಿಸಿ ಮಹಾನಗರದಲ್ಲಿ ಸುಮಾರು ಸುವರ್ಣಯುಗ ಪೂರೈಸಿದ್ದ ಕೊಂಕಣ್ ತಾರಾಂ ಜೆರಿಮೆರಿ ಸ್ಥಾಪಕ ಸಲಹಾಗಾರ ಲಾರೇನ್ಸ್ ಡೇನಿಯಲ್ ಡಿ’ಸೋಜಾ ತಾಕೋಡೆ (79.) ಹೃದಯಾಘಾತದಿಂದ ಇಂದಿಲ್ಲಿ ಗುರುವಾರ ಮುಂಜಾನೆ ಕುರ್ಲಾ ಪಶ್ಚಿಮದ ಸಫೇದ್‌ಫೂಲ್ ಅಲ್ಲಿನ ಡಿ’ಸೋಜಾ ಚಾಳ್‌ದಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು.

ಕುರ್ಲಾ ಪಶ್ಚಿಮದ ಜೆರಿಮೆರಿ ಅಲ್ಲಿನ ಸೈಂಟ್ ಜೂಡ್ ಚರ್ಚ್‌ನಲ್ಲಿ ಕೊಂಕಣಿ ಭಾಷೆಯಲ್ಲಿ ಪೂಜಾ ಪದ್ಧತಿಯ ಪ್ರಾಥನಾವಿಧಿಗಳನ್ನು ಆರಂಭಿಸಿದ ರೂವಾರಿ, ಎರಡುವರೆ ದಶಕದ ಹಿಂದೆ ಸೈಂಟ್ ಜೂಡ್ ಚರ್ಚ್‌ನಲ್ಲಿ ಸ್ಥಾಪಿಸಲ್ಪಟ್ಟ ಕೊಂಕಣ್ ತಾರಾಂ ಜೆರಿಮೆರಿ ಸಂಸ್ಥೆಯ ಸ್ಥಾಪಕ ಸಲಹಾಗಾರರಾಗಿ, ಸ್ಥಾನೀಯ ಹೆಸರಾಂತ ಸಮಾಜ ಸೇವಕರಾಗಿ ಜನಾನುರಾಗಿದ್ದರು. ಲಾರೇನ್ಸ್ ಅವರು ಬೆಸ್ಟ್ (ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಎಂಡ್ ಟ್ರಾನ್ಸ್‌ಫೋರ್ಟ್) ಸಂಸ್ಥೆಯ ಆರಂಭದಿಂದಲೇ ಕಾರ್ಯನಿರ್ವಾಹಕರಾಗಿ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಸದ್ಯ ಕಾಜುಪಾಡದಲ್ಲಿನ ತನ್ನ ಸ್ವನಿವಾಸದಲ್ಲೇ ಡೆರಿಕ್ ಝೆರಾಕ್ಸ್ ಅಂಗಡಿಯನ್ನು ನಡೆಸುತ್ತಿದ್ದರು. ಓರ್ವ ಕಲಾಭಿಮಾನಿ ಆಗಿ ಕಲಾ ಪ್ರೋತ್ಸಹಕರಾಗಿದ್ದ ಲಾರೇನ್ಸ್ ಕೊಂಕಣಿ-ಕನ್ನಡ ವಾಚಕರಿಗೆ ಪತ್ರಿಕೆಗಳನ್ನು ಒದಗಿಸುತ್ತಿದ್ದು, ಸಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಹಿಸುತ್ತಾ ನೆರವು ನೀಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಕೋಡೆ ಮೂಲದವರಾಗಿದ್ದ ಮೃತರು ಪತ್ನಿ ಶ್ರೀಮತಿ ಫಿಯದಾ ಡಿ’ಸೋಜಾ ಗಂಡು, ಹೆಣ್ಣು, ಅಳಿಯ (ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಆರ್.ಸಿಕ್ವೇರಾ) ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು 01.ಮೇ.2015 ನೇ ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಜೆರಿಮೆರಿಯ ಸೈಂಟ್ ಜೂಡ್ ಚರ್ಚ್‌ನಲ್ಲಿ ನೆರವೇರಲಿದ್ದು, ಬಳಿಕ ಕುರ್ಲಾ ಪಶ್ಚಿಮದ ಕಮಾನಿ ಅಲ್ಲಿನ ಹೋಲಿಕ್ರಾಸ್ ಇಗರ್ಜಿಯ ಸಮಾಧಿಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

ಕೊಂಕಣ್ ತಾರಾಂ ಜೆರಿಮೆರಿ ಸಂಸ್ಥೆಯ ಮಾಜಿ ಅಧ್ಯಾತ್ಮಿಕ ನಿರ್ದೇಶಕರುಗಳಾದ ಫಾ| ಆಲ್ವಿನ್ ಡಿ’ಸೋಜಾ, ರೆ| ಫಾ| ವಾಲ್ಟರ್ ಪಿಂಟೋ, ರೆ| ಫಾ| ಸೈಮನ್ ಡಿ’ಸೋಜಾ, ಸಂಸ್ಥೆಯ ಮುಂದಾಳುಗಳಾದ ಜೋನ್ ಮಸ್ಕರೇನ್ಹಾಸ್, ಜಾರ್ಜ್ ಫುರ್ಟಾಡೋ, ಪ್ಲೋರಾ ಡಿ’ಸೋಜಾ ಕಲ್ಮಾಡಿ, ವಾಲ್ಟರ್ ಡಿ’ಸೋಜಾ ಜೆರಿಮೆರಿ, ಜೋನ್ ವೇಗಸ್, ಜೋಸೆಫ್ ಡಿ’ಸೋಜಾ, ಮತ್ತಿತ್ತರ ಮಾಜಿ ಹಾಗೂ ಹಾಲಿ ಪದಾಧಿಕಾರಿಗಳು, ಸದಸ್ಯರುಗಳು, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‌ನ ಲೀಯೋ ಫೆರ್ನಾಂಡಿಸ್, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Write A Comment