ಮಂಗಳೂರು ಎಪ್ರಿಲ್.28 : ಕರ್ನಾಟಕ ಸರ್ಕಾರದ ಧ್ಯೇಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು,ಇದನ್ನು ಸಾಧಿಸಲು ಹಮ್ಮಿಕೊಂಡಿರುವ ಶೈಕ್ಷಣಿಕ ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆ ಬಗ್ಗೆ ಜನರಲ್ಲಿ ಪ್ರಚಾರದ ಮೂಲಕ ಉತ್ತಮ ಅರಿವು ಮೂಡಿಸಿರುವುದರಿಂದ ಜಿಲ್ಲೆಯಲ್ಲಿ ಇದುವರೆಗೆ ಶೇ.79 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎನ್.ಲಿಂಗಪ್ಪ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.ಅವರು ಇಂದು ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷಾ ಕಾರ್ಯ ಸರ್ಕಾರ ನಿಗಧಿಪಡಿಸಿರುವ ಗಡುವಲ್ಲೇ ಅಂದರೆ ಏಪ್ರಿಲ್ 30ಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಅವರು ಮಂಗಳೂರು ತಾಲೂಕು ಮುಲ್ಕಿ ಪುರಸಭಾ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಏಪ್ರಿಲ್ 27 ರಂದೇ ಪೂರ್ಣಗೊಂಡಿರುವ ಬಗ್ಗೆ ಅಲ್ಲಿಯ ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಅವರನ್ನು ಪ್ರಶಂಸಿಸಿದರು. ಲಿಂಗಪ್ಪನವರು ಸುಳ್ಯ ತಾಲೂಕಿನಲ್ಲಿ ಹಲವೆಡೆ ಭೇಟಿ ನೀಡಿ ಸಮೀಕ್ಷಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಅಂತೆಯೇ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬ್ಲಾಕ್ ಸಂಖ್ಯೆ ಮತ್ತು ವಾರ್ಡ್ ಸಂಖ್ಯೆ 30 ರಲ್ಲಿ ಸುಂದರಮ್ಮ ಎಂಬುವವರು ತಮ್ಮ ಜಾತಿ ಬಗ್ಗೆ ನೀಡಿದ್ದ ಮಾಹಿತಿ ತಪ್ಪಾಗಿದ್ದನ್ನು ಪರಿಶೀಲಿಸಿ ಸರಿಪಡಿಸಿದ್ದಾಗಿ ತಿಳಿಸಿದರು.
ರಾಜ್ಯದಲ್ಲಿ 1.29 ಕೋಟಿ ಕುಟುಂಬಗಳ 6.50 ಕೋಟಿ ಜನರ ಸಮೀಕ್ಷೆಗೆ 1.27 ಲಕ್ಷ ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 4,52,408 ಕುಟುಂಬಗಳು ಇದ್ದವು ,ಆದರೆ 2015 ರ ಏಪ್ರಿಲ್ 1 ಮತ್ತು 2 ರಂದು ನಡೆಸಿದ ಸಮೀಕ್ಷಾ ಪೂರ್ವ ಸಮೀಕ್ಷೆಯಲ್ಲಿ 4,62,943 ಕುಟುಂಬಗಳನ್ನು ಗುರ್ತಿಸಲಾಗಿದೆ ಎಂದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,31,751 ಕುಟುಂಬಗಳು ಇವೆ ಎಂದರು.
ಜುಲೈ ಮಧ್ಯ ಭಾಗದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷಾ ಕಾರ್ಯದ ವರದಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.