ಮಂಗಳೂರು:ಮಂಗಳಾ ಸ್ಟೇಡಿಯಂನ ಆವರಣದಲ್ಲಿದ್ದ ಸುಮಾರು 6 ದಶಕಗಳ ಹಿಂದಿನ ಹೆರಿಟೇಜ್ ಕಟ್ಟಡವನ್ನು ನವೀಕೃತಗೊಳಿಸಿ, ಅದನ್ನು ನಾಡಾ (ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ-ರಾಷ್ಟ್ರೀಯ ಉದ್ದೀಪನಾ ವಿರೋಧಿ ಘಟಕ) ಕಚೇರಿಯನ್ನಾಗಿ ನಾಮಕರಣ ಮಾಡಿ ಮಂಗಳವಾರ ಉದ್ಘಾಟಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಈ ನವೀಕೃತ ಕಚೇರಿಯನ್ನು ಉದ್ಘಾಟಿಸಿದರು.
ಬಳಿಕ ಮಂಗಳಾ ಸ್ಟೇಡಿಯಂನಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕ ಅಮೆಚೂರು ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಶನ್ ಇದರ ಸಂಯುಕ್ತ ಅಶ್ರಯದಲ್ಲಿ ಏ೩೦ರಿಂದ ಮೇ೪ ರತನಕ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ೧೯ ನೇ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಸಮಾರೋಪಾದಿಯಲ್ಲಿ ಕೆಲಸಕಾರ್ಯಗಳು ನಡೆಯುತ್ತಿದ್ದು, ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟಕ್ಕಾಗಿ ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಸಿದ್ದತೆ ಪೂರ್ಣಗೊಂಡಿದೆ ಎಂದರು.
ಅಲ್ಲದೇ ಸುಮಾರು 6 ದಶಕಗಳ ಹಿಂದಿನ ಹೆರಿಟೇಜ್ ಕಟ್ಟಡವನ್ನು ನವೀಕೃತಗೊಳಿಸಲಾಗಿದ್ದು, ಅದನ್ನು ನಾಡಾ (ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ-ರಾಷ್ಟ್ರೀಯ ಉದ್ದೀಪನಾ ವಿರೋಧಿ ಘಟಕ) ಕಚೇರಿಯಾಗಿ ಪರಿವರ್ತಿಸಿ, ಇಂದು ಉದ್ಘಾಟಿಸಲಾಯಿತು ಎಂದು ಸಚಿವರು ತಿಳಿಸಿದರು.
ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ ಒಂಡು ಕೋಟಿ ಘೋಷಿಸಿದ್ದು ಈಗಾಗಲೇ 50 ಲಕ್ಷ ರೂ ಬಿಡುಗಡೆಗೊಂಡಿದೆ. .ರಾಷ್ಟ್ರೀಯ ಕ್ರೀಡಾಕೂಟವನ್ನು ಮಾದರಿ ಕ್ರೀಡಾಕೂಟವನ್ನಾಗಿ ಮಾಡುವ ಕನಸಿಗೆ ಅಧಿಕಾರಿಗಳು ಕೂಡಾ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ ಎಂದರು.
ದೇಶದೊಳಗಿನ ಒಲಿಂಪಿಕ್ ಎಂದೇ ಕರೆಯಲಾಗುವ ಈ ಕ್ರೀಡಾಕೂಟ ಮಂಗಳೂರಿನಲ್ಲಿ ನಡೇಯುತ್ತಿರುವುದು ಸಂತೋಷದ ವಿಷಯ. ಕರಾವಳಿ ಜಿಲ್ಲೆಯಲ್ಲಿ ನಡೆಯುವಂತಹ ಈ ರಾಷ್ಟ್ರೀಯ ಕ್ರೀಡಾಕೂಟವನ್ನು ಮಾದರಿ ಕ್ರೀಡಾಕೂಟವನ್ನಾಗಿ ಮಾಡುವುದು ನಮ್ಮೆಲ್ಲರ ಕನಸು. ಅದಕ್ಕಾಗಿ ಹಗಲಿರುಳೆನ್ನದೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿಗಳು 1 ಕೋಟಿ ರೂ ಘೋಷಿಸಿದ್ದು, ಅದರಲ್ಲಿ 50 ಲಕ್ಷ ರೂ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ 5 ಲಕ್ಷ ರೂ ನೀಡಿದ್ದು, ಪ್ರಯೋಜಕರಿಂದ ವಿವಿಧ ಸಂಘ ಸಂಸ್ಥೆಗಳಿಂದ 60 ಲಕ್ಷ ರೂ ದೇಣಿಗೆ ನಿರೀಕ್ಷಿಸಲಾಗಿದೆ. ಪರಿಸರ ಇಲಾಖೆಯಿಂದ 10 ಲಕ್ಷ ರೂ ಗಳನ್ನು ನಾನು ಬಿಡುಗಡೆ ಮಾಡುತ್ತಿದ್ದೇನೆ ಎಂದರು.
ಕ್ರೀಡಾ ಇಲಾಖೆಯ ರಾಜ್ಯ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟ ನಮ್ಮ ಕನಸಿನ ಕೂಸು. ಮಂಗಳಾ ಕ್ರೀಡಾಂಗಣದಲ್ಲಿರುವ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿದ್ದು, ಕ್ರೀಡಾಂಗಣಕ್ಕೆ ನೂತನ ಕಾಯಕಲ್ಪ ನೀಡಲಾಗಿದೆ ಎಂದರು.
ದ.ಕ. ಜಿಲ್ಲಾ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಎ.30ರಂದು ಫೆಡರೇಶನ್ ಕಪ್ನ ಉದ್ಘಾಟನೆ ಅದ್ದೂರಿಯಾಗಿ ನಡೆಯಲಿದೆ. ವಿಶೇಷ ಶೈಲಿಯ ಮೆರವಣಿಗೆ, ಪಥಸಂಚಲನ ನಡೆದು, ಕ್ರೀಡಾಕೂಟ ಉದ್ಘಾಟನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಮಾರೋಪ ಸಮಾರಂಭವನ್ನು ಕೂಡ ಅದ್ದೂರಿಯಾಗಿ ನಡೆಸಲಾಗುವುದು ಎಂದರು. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಮಾತನಾಡಿ, ಮಳೆ ಬಂದರೂ ಕ್ರೀಡಾಕೂಟಕ್ಕೆ ಯಾವುದೇ ತೊಡಕಾಗುವುದಿಲ್ಲ. ಪ್ರಮುಖ ಸಂಘ ಸಂಸ್ಥೆ, ನಿಗಮಗಳು ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಕನಿಷ್ಟ 20,000 ಜನರ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.
ಕ್ರೀಡಾ ಇಲಾಖೆಯ ಉಪನಿರ್ದೇಶಕ ಹೆಚ್.ಎಸ್ ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡ ಆಯುಕ್ತ ನಝೀರ್, ಅಪರ ಜಿಲ್ಲಾಧಿಕಾರಿ ಸದಾಶಿವ ಫ್ರಭು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.