ಕನ್ನಡ ವಾರ್ತೆಗಳು

2ನೇ ದ.ಕ ಜಿಲ್ಲಾ ತಲೆಹೊರೆ ಕಾರ್ಮಿಕರ ಜಿಲ್ಲಾ ಸಮ್ಮೇಳನ

Pinterest LinkedIn Tumblr

Havali_workers_meet_1

ಮಂಗಳೂರು,ಎ.27 : ಪ್ರತಿನಿತ್ಯ ಪೇಟೆ ಪಟ್ಟಣಗಳಲ್ಲಿ, ಕೃಷಿ ಮಾರುಕಟ್ಟೆಗಳಲ್ಲಿ ಭಾರವಾದ ಮೂಟೆಗಳನ್ನು ಹೊತ್ತು ಶ್ರಮ ಪಡುತ್ತಿರುವ ತಲೆಹೊರೆ (ಹಮಾಲಿ) ಕಾರ್ಮಿಕರು ನಮ್ಮ ಸಮಾಜದ ಚಲಿಸುವ ಚಕ್ರಗಳಿದ್ದಂತೆ. ಹಮಾಲಿ ಕಾರ್ಮಿಕರು ನಿತ್ಯ ದುಡಿಯದಿದ್ದರೆ ಈ ಸಮಾಜದ ಚಕ್ರ ತಿರುಗಲಾರದು ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಅಧ್ಯಕ್ಷ ಕೆ. ಮಹಾಂತೇಶ್ ಹೇಳಿದರು.

ನಗರದ ಎನ್‌ಜಿಓ ಸಭಾಂಗಣದಲ್ಲಿ ನಡೆದ 2ನೇ ದ.ಕ ಜಿಲ್ಲಾ ತಲೆಹೊರೆ ಕಾರ್ಮಿಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅತ್ಯಂತ ಶ್ರಮ ಪಡುವ ಹಮಾಲಿ ವಿಭಾಗವನ್ನು ಅವರನ್ನು ದುಡಿಸಿಕೊಳ್ಳುತ್ತಿರುವ ಮಾಲೀಕರು, ಸಮಾಜ ಹಾಗೂ ಸರಕಾರ ನಿರ್ಲಕ್ಷಿಸಿ ಅವರಿಗೆ ಯಾವುದೇ ಸಾಮಾಜಿಕ ಭದ್ರತೆಯನ್ನು ಒದಗಿಸಿಲ್ಲ. ಪ್ರತೀ ಬಜೆಟ್‌ನಲ್ಲಿ ಶ್ರೀಮಂತರಿಗೆ ಕೋಟ್ಯಂತರ ರೂಪಾಯಿ ತೆರಿಗೆ ರಿಯಾಯಿತಿ ನೀಡುವ ಸರಕಾರಗಳು ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ, ವಸತಿ ಮತ್ತಿತರೆ ಸೌಲಭ್ಯಗಳನ್ನು ಒದಗಿಸಲು ಬೇಕಾದ ಹಣಕಾಸಿನ ನೆರವನ್ನು ನೀಡುತ್ತಿಲ್ಲ ಎಂದರು.

Havali_workers_meet_2 Havali_workers_meet_3 Havali_workers_meet_4 Havali_workers_meet_5 Havali_workers_meet_6

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಜೆ. ಬಾಲಕಷ್ಣ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಸರಕಾರ ಕಾರ್ಪೋರೇಟ್ ವಲಯಕ್ಕೆ ಉತ್ತೇಜನ ನೀಡುತ್ತಾ, ಕಾರ್ಮಿಕ ವರ್ಗವನ್ನು ನಿರ್ಲಕ್ಷಿಸುತ್ತಿದೆ. ಇದರ ವಿರುದ್ಧ ಎಲ್ಲ ಕಾರ್ಮಿಕ ಸಂಘಗಳು ಹೋರಾಟಕ್ಕೆ ಮುಂದಾಗಿವೆ. ಅದಕ್ಕಿಂತ ಪೂರ್ವದಲ್ಲಿ ಮೇ 1 ರಿಂದ 26 ರ ವರೆಗೆ ಪ್ರಚಾರಾಂದೋಲನ ನಡೆಸಿ ಮೇ 30ರಂದು ಕಾರ್ಮಿಕರ ಬೇಡಿಕೆಗಳಿಗಾಗಿ ಸಿಐಟಿಯು ದೇಶಾದ್ಯಂತ ಹೋರಾಟ ರೂಪಿಸಿದೆ. ಅದನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವಂತೆ ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಇಲ್ಲಿಯ ಮಾಲೀಕರು ನಡೆಸಿದ ದೌರ್ಜನ್ಯ, ಕಿರುಕುಳ ಹಾಗೂ ವೇತನ ಪರಿಷ್ಕರಣೆಗಾಗಿ ಹಲವು ಸಮರ ಧೀರ ಚಳುವಳಿಗಳನ್ನು ಹಮಾಲಿ ಕಾರ್ಮಿಕರು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯಲ್ಲಿರುವ ಇತರೆ ಹಮಾಲಿ ಕಾರ್ಮಿಕರನ್ನು ಸಂಘಟಿಸುವ ಪ್ರಯತ್ನ ಮುಂದುವರಿಸಲಿದೆ ಎಂದು ಹೇಳಿದರು.

ಮೂಡುಬಿದಿರೆ ಹಮಾಲಿ ಕಾರ್ಮಿಕರ ಸಂಘದ ಮುಖಂಡ ಕೃಷ್ಣಪ್ಪ, ಸುಳ್ಯದ ರಾಬರ್ಟ್ ಡಿಸೋಜ, ಬಂದರು ಶ್ರಮಿಕ ಸಂಘದ ಮುಖಂಡರಾದ ವಿಲ್ಸನ್, ಬಾವ, ಇಮ್ತಿಯಾಜ್, ರಫೀಕ್ ಹರೇಕಳ ಉಪಸ್ಥಿತರಿದ್ದರು. ಬಂದರು ಶ್ರಮಿಕ ಸಂಘದ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್ ವಂದಿಸಿದರು.

Write A Comment