ಕುಂದಾಪುರ: ಅನಾಥ ಮಗುವಾದೆ ನಾನು ಅಪ್ಪನೂ ಅಮ್ಮನೂ ಇಲ್ಲದೇ ಎನ್ನುವ ಶಂಕರನಾಗ್ ಸಿನೇಮಾದ ಹಾಡು ಶನಿವಾರ ಬೆಳಿಗ್ಗೆ ಕೆದೂರು ಸ್ಪೂರ್ತಿಧಾಮದ ಆವರಣದಲ್ಲಿರುವ ‘ಮಮತೆಯ ತೊಟ್ಟಿಲು’ನಲ್ಲಿ ಅನಾಥವಾಗಿ ಅಳುತ್ತಿದ್ದ ಮಗುವನ್ನು ನೋಡಿದಾಗ ಅಲ್ಲಿದ್ದವರ ನಾಲಗೆಯ ಮೇಲೆ ತನಗರಿವಿಲ್ಲದಂತೆ ಹೇಳಲ್ಪಟ್ಟಿದ್ದರೆ ಅದು ಆಶ್ಚರ್ಯವಲ್ಲ. ಕಾರಣ ಇಷ್ಟೇ. ಶನಿವಾರ ಬೆಳ್ಳಂಬೆಳಿಗ್ಗೆ ಮಗುವಿನ ಚೀರಾಟ ಕೇಳಿಬರುತ್ತಿತ್ತು.
ಅದು ಕಳೆದ ಒಂದೂವರೆ ವರ್ಷದ ಹಿಂದೆ ಸ್ಥಾಪಿಸಲ್ಪಟ್ಟ ಮಮತೆಯ ತೊಟ್ಟಿಲಿನಲ್ಲಿ ಅಂದಾಜು 8 ತಿಂಗಳು ಪ್ರಾಯದ ಮುದ್ದಾದ ಗಂಡುಮಗು ಅನಾಥವಾಗಿ ಅಳುತ್ತಿತ್ತು. ಆದರೆ ಹೆತ್ತವರಿಗೆ ಬೇಡವಾಗಿ ಮಮತೆಯ ತೊಟ್ಟಿಲಿನ ಮೂಲಕ ಸ್ಪೂರ್ತಿಧಾಮವನ್ನು ಸೇರಿದ ಕಂದನ ಮುಖದಲ್ಲೀಗ ಸಂತಸದ ಛಾಯೆ.
ಬೆಳ್ಳಂಬೆಳಗೆ 5 ಘಂಟೆ ಸುಮಾರಿಗೆ ನಿತ್ಯದ ವಾಡಿಕೆಯಂತೆ ಸ್ಫೂರ್ತಿಧಾಮಕ್ಕೆ ಬಂದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಡಾ.ಕೇಶವ ಕೋಟೇಶ್ವರರವರಿಗೆ ಮಗುವಿನ ಅಳುವ ಧ್ವನಿ ಕೇಳಿಸಿತ್ತು. ಓಡಿ ಬಂದವರೆ ಮಗುವನ್ನು ಎತ್ತಿ ಮುದ್ದಿಸಿ ಸ್ಫೂರ್ತಿಯಲ್ಲಿರುವ ದತ್ತುಕೇಂದ್ರದ ವಶಕ್ಕೆ ನೀಡಿದ್ದಾರೆ. ಮಗು ಕೇಂದ್ರದ ಸಿಬ್ಬಂದಿಗಳ ಆರೈಕೆಯಲ್ಲಿದೆ. ಮಮತೆಯ ತೊಟ್ಟಿಲಿಗೆ ಮೊದಲೆನೆಯದಾಗಿ ಬಂದ ಈ ಮುದ್ದು ಕಂದಮ್ಮನಿಗೆ ‘ಪ್ರಥಮ್’ ಎಂದು ನಾಮಕರಣ ಮಾಡಲಾಗಿದೆ.
ಏನಿದು ಮಮತೆಯ ತೊಟ್ಟಿಲು: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಕ್ಕಳ ರಕ್ಷಣಾ ಯೋಜನೆಯ ದೂರದೃಷ್ಠಿಯ ಯೋಜನೆ ಇದು. ಪ್ರತಿ ಆಸ್ಪತ್ರೆ, ದತ್ತುಕೇಂದ್ರ ಹಾಗೂ ಮಕ್ಕಳ ರಕ್ಷಣೆ ಹಾಗೂ ಆರೈಕೆ ಕೇಂದ್ರಗಳ ಪಡಸಾಲೆಯೊಂದಿಗೊಂದು ತೆರೆದ ತೊಟ್ಟಿಲನ್ನು ಇಡಬೇಕು ಯಾರಿಗಾದರು ಬೇಡವಾದ ಮಗು ಇದ್ದರೆ ಅಲ್ಲೊ ಇಲ್ಲೊ ಬಿಟ್ಟು ಎಸೆದು ಹೋಗದೆ ಈ ತೊಟ್ಟಿಲೊಳೆಗೆ ಮಲಗಿಸಿ ಹೋಗಬಹುದು. ಅಂತಹ ಮಗುವನ್ನು ಕಾನೂನು ರೀತಿಯಲ್ಲಿ ದತ್ತು ಕೇಂದ್ರಗಳು ಯೋಗ್ಯಕುಟುಂಬದ ವಶಕ್ಕೆ ದತ್ತು ನೀಡಬೇಕು ಎನ್ನುವುದು ಯೋಜನೆ. ಸರ್ಕಾರಿ ಆದೇಶವನ್ನು ಪಾಲಿಸಿ ಸ್ಪೂರ್ತಿ ಸಂಸ್ಥೆ ಸುಮಾರು 2 ವರ್ಷದ ಕೆಳಗೆ ಈ ತೊಟ್ಟಿಲನ್ನು ಸ್ಫೂರ್ತಿಧಾಮದಲ್ಲಿ ಸ್ಥಾಪಿಸಿತ್ತು ಅದಕ್ಕೆ “ಮಮತೆಯ ತೊಟ್ಟಿಲು” ಎಂದು ನಾಮಕರಣವೂ ಮಾಡಲಾಗಿತ್ತು.
ಮಮತೆಯ ತೊಟ್ಟಿಲು ಸ್ಥಾಪಿಸಿದಾಗ ಕೆಲವು ಟೀಕೆಗಳು ಕೇಳಿಬಂದಿತ್ತು. ಆದರೆ ಮಮತೆಯ ತೊಟ್ಟಿಲಿನ ಉದ್ದೇಶ ಈ ಪ್ರಕರಣದ ಮೂಲಕ ಎಲ್ಲರಿಗೂ ತಿಳಿಯುವಂತಾಗಿದೆ. ಬೇಡವಾದ ಮಗುವನ್ನು ಕತ್ತು ಹಿಸುಕಿ ಕತ್ತಲೆಯ ಅಡವಿಯೊಳು ಎಸೆದು ತಮ್ಮ ಕ್ರೌರ್ಯ ಪ್ರದರ್ಶಿಸುವವರು ಹಲವರಿದ್ದು, ಅದರ ಬದಲಾಗಿ ಮಗುವಿನ ಅತ್ಯುತ್ತಮ ಭವಿಷ್ಯದ ಹಿತದೃಷ್ಠಿಯಿಂದ ಸ್ಫೂರ್ತಿಧಾಮದ ದತ್ತುಕೇಂದ್ರಕ್ಕೆ ಸಂಬಂಧಪಟ್ಟ ತೊಟ್ಟಿನೊಳಗೆ ಮಲಗಿಸಿ ಹೋಗಿದ್ದಾರೆ. ಇದು ಮಮತೆಯ ತೊಟ್ಟಿಲಿನ ಉದ್ಧೇಶವೆನ್ನುವುದು ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಅವರ ಮಾತು. ಒಂದು ಮಗುವಿನ ಜೀವ ರಕ್ಷಿಸಿದ ಖ್ಯಾತಿ, ಯೋಜನೆ ರೂಪಿಸಿದ ಸರಕಾರಕ್ಕೂ ಅದನ್ನು ಕಾರ್ಯರೂಪಕ್ಕೆ ತಂದ ಸ್ಫೂರ್ತಿ ಸಂಸ್ಥೆಗೂ ಸಲ್ಲುತ್ತದೆ.
ಮಗು ಆರೋಗ್ಯವಾಗಿದೆ ಆದರೂ ತಕ್ಷಣ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ಪೊಲೀಸರಿಗೂ, ಮಕ್ಕಳ ಕಲ್ಯಾಣ ಸಮಿತಿಗೂ ಮಾಹಿತಿ ನೀಡಲಾಗುತ್ತೆ. ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶನದಂತೆ ಮುಂದುವರಿಯಲಾಗುತ್ತೆ. 45 ದಿನಗಳು ಕಾದು ಯಾರೂ ಮಗುವನ್ನು ಸ್ವೀಕರಿಸಲು ಮುಂದೆ ಬರದಿದ್ದರೆ ಕಾನೂನು ರೀತಿ ಮಗುವನ್ನು ದತ್ತು ನೀಡಲು ಅವಕಾಶವಿದೆ. ನಿಜವಾಗಿಯೂ ಮಗು ಬೇಡವೆನಿಸಿದ ಫೋಷಕರು ಅಚಾತುರ್ಯ ಮಾಡದೆ ಮಗುವನ್ನು ತೊಟ್ಟಿಲಿನೊಳಗೆ ಇಟ್ಟು ಹೊಗಿರುವುದು ಒಳಿತಾಗಿದೆ.
– ಡಾ.ಕೇಶವ ಕೋಟೇಶ್ವರ (ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಾಹಕರು)
ಚಿತ್ರ,ವರದಿ- ಯೋಗೀಶ್ ಕುಂಭಾಸಿ