ಬಂಟ್ವಾಳ: ಕಠ್ಮಂಡುವಿನಲ್ಲಿ ನಾನು ಸುರಕ್ಷಿತನಾಗಿದ್ದೇನೆ, ನೀವೇನು ಗಾಬರಿಯಾಗ್ಬೇಡಿ. 2-3 ದಿವಸಗಳಲ್ಲಿ ಊರಿಗೆ ತಲುಪುತ್ತೇನೆ – ಇದು ನೇಪಾಳ ಭೂಕಂಪ ಸಂತ್ರಸ್ತರ ಡೇರೆಯಲ್ಲಿರುವ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ ಮೂಲದ ರೋಮೆಲ್ ಸ್ಟೆಫನ್ ಮೋರಾಸ್ ಹೆತ್ತವರಿಗೆ ಫೋನ್ ನಲ್ಲಿ ನೀಡಿದ ಭರವಸೆ.
ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ರೋಮೆಲ್ (24) ಏ.22ರಂದು ಸ್ನೇಹಿತನ ಸಂಬಂಧಿಕರ ಮದುವೆಗೆ ಕಾಠ್ಮಂಡುಗೆ ಹೋಗಿದ್ದ. ಈ ವೇಳೆ, ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದಲ್ಲದೆ ರೋಮೆಲ್ ಸಂಪರ್ಕ ಕೂಡ ಕಡಿತಗೊಂಡಿದ್ದು ಹೆತ್ತವರನ್ನು ಆತಂಕ್ಕೀಡು ಮಾಡಿತ್ತು. ದ.ಕ. ಜಿಲ್ಲಾಧಿಕಾರಿ, ಎಸ್‌ಪಿ ಅವರಿಗೆ ಮಾಹಿತಿ ನೀಡಿದ್ದಲ್ಲದೆ, ಕರ್ನಾಟಕ ತುರ್ತು ನಿರ್ವಹಣಾ ಕೇಂದ್ರಕ್ಕೆ ಸಂಪರ್ಕ ಮಾಡಿದ್ದರೂ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ರೋಮೆಲ್ ತಂದೆ ರೋನಾಲ್ಡ್ ಮೋರಾಸ್ ಹಾಗೂ ತಾಯಿ ರೆಜಿನ್ ಮೋರಾಸ್ ಹೇಳಿದ್ದರು. ಮಗ ಸುರಕ್ಷಿತವಾಗಿ ಮನೆಗೆ ಬರಲು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
ಈ ನಡುವೆ, ಭಾನುವಾರ ಮಧ್ಯಾಹ್ನ 3ರ ವೇಳೆ ಮಗನ ಫೋನ್ ಬಂದಿದ್ದು, ಹೆತ್ತವರೀಗ ನಿರಾಳಗೊಳಿಸಿದೆ. ‘ನಮ್ಮನ್ನು ಕಾಠ್ಮಂಡು ಹೊರವಲಯದ ಹಿಮಾಲಯ ಹೈಟ್ ರೆಸಾರ್ಟ್‌ಗೆ ಸುರಕ್ಷಿತವಾಗಿ ಕರೆತರಲಾಗಿದೆ. ದೇಶದ ನಾನಾ ಕಡೆಗಳ ಪ್ರವಾಸಿಗರು, ವ್ಯಾಪಾರಿಗಳು ಇಲ್ಲಿದ್ದಾರೆ. ದಿನದ ಅಗತ್ಯದ ವಸ್ತುಗಳು ಬಿಟ್ಟರೆ ಇಲ್ಲಿ ಬೇರೇನು ಲಭ್ಯವಾಗುತ್ತಿಲ್ಲ. ನಿರಂತರ ಫೋನ್ ಸಂಪರ್ಕ ಕೂಡ ಇಲ್ಲ. ನಮ್ಮನ್ನು ಇಲ್ಲಿಂದ ಕರೆತರುವ ಸಾರಿಗೆ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. 2-3 ದಿವಸಗಳಲ್ಲಿ ಇಲ್ಲಿಂದ ಬಿಡುಗಡೆ ಹೊಂದಲಿದ್ದೇವೆ’ ಎಂದು ರೋಮೆಲ್ ಹೇಳಿಕೊಂಡಿದ್ದಾರೆ.
ಕಾಠ್ಮಂಡು ಸುರಕ್ಷಿತ ಕೇಂದ್ರವನ್ನು ಸಂಪರ್ಕಿಸಿ ರೋಮೆಲ್ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಶೀಘ್ರದಲ್ಲಿ ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಪಿ ಡಾ.ಶರಣಪ್ಪ ತಿಳಿಸಿದ್ದಾರೆ. ರೋಮೆಲ್ ಕುಟುಂಬ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನಿರಂತರ ಸಂಪರ್ಕದಲ್ಲಿದ್ದು, ಸಚಿವಾಲಯದ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದು ಸಂಗಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ಪ್ರತಿಕ್ರಿಯಿಸಿದ್ದಾರೆ.