ಮಂಗಳೂರು,ಎ.25 : 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆರು ದಿನಗಳು ಬಾಕಿ ಉಳಿದಿದ್ದು, ಕ್ರೀಡಾಕೂಟದಲ್ಲಿ ಕರ್ನಾಟಕ ಹಾಗೂ ನೆರೆಯ ಕೇರಳ ರಾಜ್ಯ ಪ್ರತಿನಿಧಿಸುವ ಹಲವಾರು ಕ್ರೀಡಾಪಟುಗಳು ನಗರದ ಮಂಗಳಾ ಕ್ರೀಡಾಂಗಣದಲ್ಲಿ ತಾಲೀಮು ಆರಂಭಿಸಿದ್ದಾರೆ.
ಕಳೆದ ಒಂದು ವಾರದಿಂದ ಬೆಳಿಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳಲ್ಲಿ ಕರ್ನಾಟಕದ ಹೈಜಂಪ್ ಪಟು ಸಹನಾಕುಮಾರಿ, ಅವರ ಪತಿ ಹಾಗೂ 100 ಮೀಟರ್ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ನಾಗರಾಜ್, ಪಿ.ಟಿ.ಉಷಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಏಷಿಯನ್ ಗೇಮ್ಸ್‌ನ 800 ಮೀಟರ್ ಓಟದಲ್ಲಿ ಬೆಳ್ಳಿ ಹಾಗೂ 4X400 ಮೀಟರ್ ರಿಲೇಯಲ್ಲಿ ಬಂಗಾರದ ಪದಕ ಪಡೆದ ಕೇರಳದ ಟಿಂಟು ಲುಕಾ ತರಬೇತಿ ಪಡೆಯುತ್ತಿರುವ ಪ್ರಮುಖ ಕ್ರೀಡಾಪಟುಗಳು.
ಅವರಷ್ಟೇ ಅಲ್ಲದೇ ಆಳ್ವಾಸ್ ಪ್ರತಿನಿಧಿಸುವ ಇನ್ನೂ ಕೆಲವು ಯುವ ಪ್ರತಿಭೆಗಳು ತಮ್ಮ ತರಬೇತುದಾರ ಮಾರ್ಗದರ್ಶನದಲ್ಲಿ ರನ್ನಿಂಗ್, ಹೈಜಂಪ್ ತರಬೇತಿ ಪಡೆಯುತ್ತಿದ್ದು, ಕ್ರೀಡಾಪಟುಗಳ ತಾಲೀಮು ರಂಗೇರಿದೆ. ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳನ್ನು ನೋಡಲು ಈಗಲೇ ಸಾರ್ವಜನಿಕರು ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದರೆ, ರಜೆ ಇರುವುದರಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕ್ರೀಡಾಪಟುಗಳು ಅಭ್ಯಾಸ ಮಾಡುವುದನ್ನು ತೋರಿಸುತ್ತಿದ್ದಾರೆ.
ಅಲ್ಲದೇ ಕ್ರೀಡಾಪಟುಗಳನ್ನು ಭೇಟಿ ಮಾಡಿ ಕೂಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸುವ ದೃಶ್ಯವೂ ಸಾಮಾನ್ಯವಾಗಿದೆ. ಬಾಕಿ ಉಳಿದಿರುವ ದಿನಗಳಲ್ಲಿ ಇನ್ನಷ್ಟು ಜನ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕ್ರೀಡಾಂಗಣ ಸಮಿತಿ ಸದಸ್ಯ ಹಾಗೂ ಹಿರಿಯ ಕ್ರೀಡಾಪಟು ಸುನೀಲ್ ಶೆಟ್ಟಿ ಹೇಳುತ್ತಾರೆ.
ತರಬೇತಿ ಅಗತ್ಯ: ಯಾವುದೇ ಒಂದು ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲು ಹಾಗೂ ಹಿಂದಿನ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಲು ತರಬೇತಿ ಅತ್ಯವಶ್ಯವಾಗಿದೆ. ನಮ್ಮ ರಾಜ್ಯದಲ್ಲಿ ನಮಗೆ ಅನುಕೂಲವಾಗುವಂತಹ ಸಿಂಥೆಟಿಕ್ ಟ್ರ್ಯಾಕ್ ಸಮೀಪದಲ್ಲಿ ಇಲ್ಲದಿರುವುದರಿಂದ ಕಳೆದ ಒಂದು ವಾರದಿಂದ ನಾಲ್ಕು ಜನ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದೇನೆ ಎಂದು ಒಲಂಪಿಯನ್ ಪಿ.ಟಿ.ಉಷಾ ತಿಳಿಸುತ್ತಾರೆ.
ನಮ್ಮ ತಂಡದಲ್ಲಿರುವ ನಾಲ್ವರೂ ಕ್ರೀಡಾಪಟುಗಳು ಪ್ರತಿಭಾವಂತರಾಗಿದ್ದಾರೆ. ಟಿಂಟು ಬುಕಾ ಈಗಾಗಲೇ ಏಷಿಯನ್ ಗೇಮ್ಸ್‌ನ 800 ಮೀಟರ್ ಹಾಗೂ 4X400 ಮೀಟರ್ ಓಟದಲ್ಲಿ ಪದಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ.
ಪದಕ ಪಡೆಯುವ ವಿಶ್ವಾಸ : ತಮ್ಮ ಪತಿ ಹಾಗೂ 100 ಮೀಟರ್ ಓಟಗಾರ ನಾಗರಾಜ್ ಅವರ ಜತೆ ಕಳೆದ ಒಂದು ವಾರದಿಂದ ಮಂಗಳಾ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಹಿಂದಿನ ಸಾಧನೆಯನ್ನು ಇನ್ನಷ್ಟು ಸುಧಾರಿಸುವುದರ ಜತೆಗೆ ಈ ಕ್ರೀಡಾಕೂಟದಲ್ಲಿ ಪದಕ ಪಡೆಯುವ ವಿಶ್ವಾಸವಿದೆ ಎಂದು ಕರ್ನಾಟಕವನ್ನು ಪ್ರತಿನಿಧಿಸುವ ಕರಾವಳಿ ಪ್ರದೇಶದವರಾದ ಹೈಜಂಪ್ ಪಟು ಸಹನಾ ಕುಮಾರಿ ಹೇಳುತ್ತಾರೆ.