ಕನ್ನಡ ವಾರ್ತೆಗಳು

ಬೈಕ್‌ ಮಾಡಿಫಿಕೇಷನ್‌ ನೀವೇ ಮಾಡಿ!

Pinterest LinkedIn Tumblr

baike

– ನೇಸರ ಕಾಡನಕುಪ್ಪೆ
ನಿಮಗೆ ಸಾಧಾರಣವಾಗಿ ಬೈಕ್‌ ರಿಪೇರಿ ಮಾಡಲು ಬರುತ್ತದಾ? ಅಥವಾ ನೀವು ಬೈಕ್‌ ಮೆಕಾನಿಕ್‌ ಆಗಿದ್ದೀರಾ? ಹಾಗಾದರೆ ಬೈಕ್‌ ಮಾಡಿಫಿಕೇಷನ್‌ ನಿಮ್ಮ ವೃತ್ತಿಯೇ ಆದರೆ ತಪ್ಪೇನಿಲ್ಲ. ವಿಶ್ವದ ಅತ್ಯದ್ಭುತ ಸೂಪರ್‌ ಬೈಕ್‌ಗಳ ಒಡನಾಟವೂ ಆದ ಹಾಗಾಗುತ್ತದೆ. ಜತೆಗೆ ಕೈ ತುಂಬಾ ಹಣ ಸಂಪಾದನೆಯ ಮಾರ್ಗವೂ ನಿಮ್ಮದಾಗುತ್ತದೆ.

ಸಾಮಾನ್ಯವಾಗಿ ತೃತೀಯ ಜಗತ್ತು ಎಂದು ಕರೆಸಿಕೊಳ್ಳುವ ಏಷ್ಯಾ, ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ, ಅಭಿವೃದ್ಧಿಶೀಲವಾದ ಭಾರತದಲ್ಲಿ ಬೈಕ್‌ ಕೊಳ್ಳುವವರ ಸಂಖ್ಯೆ ಹೆಚ್ಚಾಗೇ ಇದೆ. ಆದರೆ, ಈ ಬೈಕ್‌ಗಳೆಲ್ಲಾ ಸೂಪರ್‌ ಬೈಕ್‌ಗಳಲ್ಲ. ಬದಲಿಗೆ ಕೇವಲ ಸಾರಿಗೆ ಉದ್ದೇಶಕ್ಕಾಗಿ ಬಳಕೆಯಾಗುವ ಬೈಕ್‌ಗಳು. ಕೇವಲ ಮನರಂಜನೆ ಅಥವಾ ಸಾಹಸಕ್ಕಾಗಿ ಬೈಕ್‌ಗಳನ್ನು ಕೊಳ್ಳುವ ಆರ್ಥಿಕ ಶಕ್ತಿ ಭಾರತೀಯರಿಗೆ ಇನ್ನೂ ಅಷ್ಟಾಗಿ ಸಿಕ್ಕಿಲ್ಲ.

ಕೆಲವರು ಭಾರತೀಯ ನಿರ್ಮಿತ ಗರಿಷ್ಠ 3 ಲಕ್ಷ ರೂಪಾಯಿವರೆಗಿನ (ರಾಯಲ್‌ ಎನ್‌ಫೀಲ್ಡ್‌ ಕೆಫೆ ರೈಡರ್‌ ಸದ್ಯಕ್ಕೆ ಭಾರತ ನಿರ್ಮಿತ ದುಬಾರಿ ಬೈಕ್‌) ಬೈಕ್‌ಗಳನ್ನು ಕೊಳ್ಳುತ್ತಾರೆ, ಕೆಲವೇ ವರ್ಷಗಳ ಹಿಂದಷ್ಟೇ ಭಾರತಕ್ಕೆ ಕಾಲಿಟ್ಟಿರುವ ಹಾರ್ಲಿ ಡೇವಿಡ್‌ಸನ್‌, ಟ್ರಿಂಫ್ ಮಾದರಿಯ ಬೈಕ್‌ಗಳನ್ನ‌ ಕೊಳ್ಳುತ್ತಾರೆ. ಆದರೆ ಅವರ ಸಂಖ್ಯೆ ಈಗಲೂ ವಿರಳದಲ್ಲಿ ವಿರಳ. ಇಷ್ಟಾಗಿಯೂ ಸೂಪರ್‌ ಬೈಕ್‌ಗಳನ್ನು ಕೊಳ್ಳಬೇಕು ಎಂದು ಕನಸು ಕಾಣುವವರು ಬೈಕ್‌ ಮಾಡಿಫಿಕೇಷನ್‌ ಮೊರೆ ಹೋಗುತ್ತಿದ್ದಾರೆ.

ಏನಿದು ಬೈಕ್‌ ಮಾಡಿಫಿಕೇಷನ್‌?
ಸಾಮಾನ್ಯ ಬೈಕ್‌ಗಳನ್ನು ಸೂಪರ್‌ ಬೈಕ್‌ಗಳಂತೆ ಮಾಡುವುದು ಬೈಕ್ ಮಾಡಿಫಿಕೇಷನ್‌. ಅಂದರೆ ಇದು ಬೈಕ್ ನಕಲು ಮಾಡುವ ಕ್ರಿಯೆ. ಇನ್ನು ಈ ಬೈಕ್‌ ಮಾಡಿಫಿಕೇಷನ್‌ ಅನ್ನು ಹೇಗೆ ಸ್ವಂತ ಉದ್ಯೋಗವಾಗಿ ಮಾಡಿಕೊಳ್ಳಬಹುದು. ಇದು ತೀರಾ ಹೆಚ್ಚೇನೂ ಬಂಡವಾಳ ನಿರೀಕ್ಷಿಸದ, ಆದರೆ, ಕುಶಲತೆಯನ್ನು ಹೆಚ್ಚಾಗಿ ನಿರೀಕ್ಷಿಸುವ ವೃತ್ತಿ. ಬೈಕ್‌ ಮಾಡಿಫೈ ಮಾಡಲು ಸ್ವಂತ ಬೈಕ್‌ ಹೊಂದಿರಬೇಕಾದ ಅಗತ್ಯವೂ ಇಲ್ಲ ಅಥವಾ ಹೊಸ ಬೈಕ್‌ ಕೊಳ್ಳಬೇಕಾಗೂ ಇಲ್ಲ. ಗ್ರಾಹಕರ ಬೈಕ್‌ಗಳನ್ನೇ ಮಾಡಿಫೈ ಮಾಡುವುದು ತಾನೆ?

ಬೈಕ್‌ ಮಾಡಿಫಿಕೇಷನ್‌ನಲ್ಲಿ ಮೂರು ವಿಧ. ಒಂದು, ಕೇವಲ ಬಾಹ್ಯ ಬದಲಾವಣೆಗಳನ್ನು ಮಾಡುವ ಮೂಲಕ ಸೂಪರ್‌ ಬೈಕ್‌ಗಳನ್ನು ನಕಲು ಮಾಡುವುದು, ಎರಡನೆಯದು  ಬೈಕ್‌ನ ಎಂಜಿನ್‌ ಬದಲಾವಣೆ ಮಾಡುವುದು. ಮೂರನೆ ಯದು ಬಾಹ್ಯ ಹಾಗೂ ಎಂಜಿನ್‌ ಬದಲಾವಣೆಗಳೆರಡನ್ನೂ ಮಾಡುವುದು. ಇದಕ್ಕೆ ಬೇಕಾಗಿರುವುದು ತೀರಾ ಕಳಪೆಯೂ ಅಲ್ಲದ, ತೀರಾ ಶ್ರೇಷ್ಠವೂ ಅಲ್ಲದ ಬೈಕ್‌ ಅಷ್ಟೇ. ಎಕಾನಮಿ ಬೈಕ್‌ಗಳು ಸಲ್ಲುವುದಿಲ್ಲ, ಬದಲಿಗೆ ಪರ್ಫಾರ್ಮೆನ್ಸ್‌ ಬೈಕ್‌ಗಳು ಬೇಕು.

ಬೈಕ್‌ ಮಾಡಿಫಿಕೇಷನ್‌ಗೆ ಹೆಚ್ಚಾಗಿ ಇಂದು ಭಾರತದಲ್ಲಿ ಬಳಕೆಯಾಗುತ್ತಿರುವುದು ಬಜಾಜ್‌ ಪಲ್ಸರ್‌. ಅದನ್ನು ಬಿಟ್ಟರೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು ಹಾಗೂ ಟಿವಿಎಸ್‌ ಅಪಾಚೆ. ಬಜಾಜ್‌ ಪಲ್ಸರ್‌ ಹಾಗೂ ಟಿವಿಎಸ್‌ ಅಪಾಚೆ ಬೈಕ್‌ಗಳನ್ನು ಯಮಹಾ ಆರ್‌ 1, ಸುಜುಕಿ ಹೊಯಾಬುಸಾ ಮಾದರಿಗೆ ಬದಲಾಯಿಸಿದರೆ, ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಹಾರ್ಲಿ ಡೇವಿಡ್‌ಸನ್‌ ಬೈಕ್‌ಗಳಂತೆ ಬದಲಾಯಿಸಬಹುದು. ಆದರೆ ಬೈಕ್‌ ಮಾಡಿಫೈ ಮಾಡುವವರಿಗೆ, ಮಾಡಿಸುವವರಿಗೆ ಇಬ್ಬರಿಗೂ ಇದು ಈ ಸೂಪರ್‌ ಬೈಕ್‌ಗಳ ಕೇವಲ ನಕಲಷ್ಟೇ ಹೊರತು, ಪರಿಪೂರ್ಣ ಬೈಕ್‌ ಆಗದು ಎಂದು ತಿಳಿದಿರಬೇಕಷ್ಟೆ.

ಮಾಡಿಫಿಕೇಷನ್‌ ಕಿಟ್‌ ಸಹಾಯ
ಬೈಕ್‌ ಮಾಡಿಫಿಕೇಷನ್‌ ಮಾಡಲೆಂದೇ ಇಂದು ಅನೇಕ ಬೈಕ್‌ ಕಿಟ್‌ಗಳು ಲಭ್ಯವಿವೆ. ಈ ಮಾಡಿಫಿಕೇಷನ್‌ ಕಿಟ್‌ಗಳಲ್ಲೂ ಎರಡು ವಿಧ. ಕೇವಲ ಬಾಹ್ಯ ರೂಪ ಬದಲಿಸುವ ಕಿಟ್‌, ಮತ್ತೊಂದು ಎಂಜಿನ್‌ ಸಾಮರ್ಥ್ಯ ಹೆಚ್ಚಿಸುವ ಕಿಟ್‌. ಬೈಕ್‌ ಮಾಡಿಫಿಕೇಷನ್‌ ಕಿಟ್‌ಗಳು ಭಾರತ ಹಾಗೂ ವಿದೇಶಿ ನಿರ್ಮಿತವಾಗಿಯೂ ಸಿಗುತ್ತವೆ. ಮತ್ತೂ ಒಂದು ವಿಧಾನವಿದೆ. ಅದು ಕಸ್ಟಂ ಮಾಡಿಫಿಕೇಷನ್‌. ಇದರಲ್ಲಿ, ಯಾವುದೇ ಸೂಪರ್‌ ಬೈಕ್‌ ಒಂದನ್ನು ನಕಲು ಮಾಡದೇ, ನಮಗೆ ಬೇಕಾದ ಹೊಸ ರೂಪದ ಬೈಕ್‌ ನಿರ್ಮಿಸುವುದು.

ಈ ವಿಧಾನ ಸಹ ಇಂದು ಭಾರತದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಬೈಕ್ ಮಾಡಿಫಿಕೇಷನ್‌ ಕಿಟ್‌ಗಳಲ್ಲಿ ಆಯಾ ಬೈಕ್‌ ಹೆಸರಿನ ಕಿಟ್‌ಗಳೇ ಸಿಗುತ್ತವೆ. ಉದಾಹರಣೆಗೆ ಯಮಹಾ ಆರ್‌ 1, ಹೊಯಾಬುಸಾ ಹೀಗೆ. ಈ ಕಿಟ್‌ನಲ್ಲಿ ಬೈಕ್‌ನ ದೇಹದ ಮುಖ್ಯ ಭಾಗಗಳಾದ ಟ್ಯಾಂಕ್‌, ಫೇರಿಂಗ್, ಸೈಡ್‌ ಡೆಕೇಲ್‌ಗಳು, ಅಗಲವಾದ ಚಕ್ರಗಳು, ಟೈರ್‌ಗಳು ಇತ್ಯಾದಿ ಇರುತ್ತವೆ. ಎಂಜಿನ್ ಮಾಡಿಫಿಕೇಷನ್‌ ಮಾಡುವವರಿಗೆ ಪರ್ಫಾರ್ಮೆನ್ಸ್‌ ಪಿಸ್ಟನ್‌, ಗಜನ್‌ ರಿಂಗ್‌, ಕನೆಕ್ಟಿಂಗ್‌ ರಾಡ್‌ಗಳು ಸಿಗುತ್ತವೆ.

ಇವನ್ನು ಕೊಂಡುಕೊಂಡು ಹಳೆಯ ಬೈಕ್‌ಗಳ ಭಾಗಗಳಿಗೆ ಬದಲಾಯಿಸುವುದು. ಬಹುತೇಕ ಆಧುನಿಕ ಬೈಕ್‌ಗಳಲ್ಲಿ ಮಾಡಿಫಿಕೇಷನ್‌ ಸುಲಭ. ಕೆಲವು ಸ್ಟಾಂಡರ್ಡ್‌ ಎನ್ನುವ ನಿರ್ಮಾಣ ಕ್ರಿಯೆ ಆಗಿರುತ್ತದೆ. ಉದಾಹರಣೆಗೆ ಸಸ್ಪೆನ್ಷನ್‌ ಫೋರ್ಕ್‌ಗಳನ್ನು ಕೂರಿಸುವ ‘ಸ್ಟೆಮ್‌’ಗಳು, ಟಾಪ್‌ ಹಾಗೂ ಬಾಟಮ್‌ ಪ್ಲೇಟ್‌ಗಳು. ಇವು ಆಧುನಿಕ ಬೈಕ್‌ಗಳಲ್ಲಿ ಹೆಚ್ಚೂ ಕಡಿಮೆ ಒಂದೇ ರೀತಿ ಆಗಿರುವುದರಿಂದ ಕೊಂಚ ಬದಲಾವಣೆ ಮಾಡಿಕೊಂಡು ಹೊಸತನ್ನು ಕೂರಿಸಬಹುದು. ಅದೇ ರೀತಿ ಬೈಕ್‌ನ ಇತರೆ ಭಾಗಗಳಿಗೂ ಅನ್ವಯವಾಗುತ್ತದೆ.

ಅಲ್ಪ ಮಾಡಿಫಿಕೇಷನ್‌ ಅವಕಾಶ
ಬೈಕ್‌ಗೆ ತೀರಾ ಬದಲಾವಣೆಯನ್ನೂ ಮಾಡಿಕೊಳ್ಳದೇ, ಅದರ ಮೂಲ ರೂಪವನ್ನು ಉಳಿಸಿಕೊಂಡು ಕಡಿಮೆ ಮಾಡಿಫಿ ಕೇಷನ್‌ ಮಾಡಿಸಿಕೊಳ್ಳುವವರೂ ಇದ್ದಾರೆ. ಅಂದರೆ ದೊಡ್ಡ ಚಕ್ರಗಳನ್ನು ಅಳವಡಿಸಿಕೊಳ್ಳುವುದು, ಕೆಳಕ್ಕೆ ಬಾಗುವ ಹ್ಯಾಂಡಲ್‌ಬಾರ್‌ ಅಳವಡಿಸಿಕೊಳ್ಳುವುದು, ಶಾಕ್‌ ಅಬ್ಸಾರ್ಬರ್‌ಗಳ ಬದಲಾವಣೆ, ಅಲಾಯ್‌ ಚಕ್ರಗಳನ್ನು ಅಳ ವಡಿಸಿಕೊಳ್ಳುವುದು ಇತ್ಯಾದಿ. ಅಲ್ಲದೇ, ಬಣ್ಣ ಬದಲಾವಣೆ, ಸ್ಟಿಕರಿಂಗ್‌ ಮೂಲಕವೂ ಮಾಡಿಫಿಕೇಷನ್‌ ಮಾಡಬಹುದು.

ವಿಪುಲ ಅವಕಾಶ
ಬೈಕ್‌ ಮಾಡಿಫಿಕೇಷನ್‌ ಭಾರತದಲ್ಲಿ ಪ್ರಸಿದ್ಧವೇ ಆದರೂ, ಅದನ್ನು ವೃತ್ತಿಯಾಗಿ ಸ್ವೀಕರಿಸಿದವರು ಕಡಿಮೆಯೇ ಇದ್ದಾರೆ. ಕರ್ನಾಟಕದಲ್ಲಿ ಹೆಚ್ಚೆಂದರೆ 10 ಮಂದಿ ಸಿಗಬಹುದು. ಬೇರೆಡೆಯೂ ಅದು ಬೆರಳೆಣಿಕೆ ಸಂಖ್ಯೆಯಲ್ಲೇ ಇದ್ದಾರೆ. ಇನ್ನು ತೀರಾ ವೃತ್ತಿಪರವಾಗಿ ಮಾಡಿಫಿಕೇಷನ್ ಮಾಡುವವರ ಸಂಖ್ಯೆಯಂತೂ ಕಡಿಮೆಯೇ ಇದೆ. ಹಾಗಾಗಿ, ಹೊಸತಾಗಿ ಬೈಕ್‌ ಮಾಡಿಫಿಕೇಷನ್‌ ವೃತ್ತಿಯನ್ನು ಸ್ವೀಕರಿಸುವವರಿಗೆ ವಾಸ್ತವದಲ್ಲಿ ಉತ್ತಮ ಅವಕಾಶವೇ ಇದೆ.

ಸಾಂಪ್ರದಾಯಿಕ ಮೆಕಾನಿಕ್‌ ವೃತ್ತಿಯಂತೆ ಸ್ವೀಕರಿಸದೇ, ಸಾಮಾಜಿಕ ಜಾಲತಾಣಗಳ ಸಹಾಯ, ಆಧುನಿಕ ವರ್ಕ್‌ಶಾಪ್‌ ಹಾಗೂ ಕಾರ್ಯವಿಧಾನ ಗಳನ್ನು ಅಳವಡಿಸಿಕೊಂಡರೆ ಇದರಲ್ಲಿ ಯಶಸ್ಸನ್ನೂ ಪಡೆಯಬಹುದು. ಬೈಕ್‌ ಮಾಡಿಫಿಕೇಷನ್‌ ಕಿಟ್‌ಗಳು ಇಂದು ಮಾರುಕಟ್ಟೆಯಲ್ಲಿ ಸುಲಭವಾಗಿಯೇ ಸಿಗುತ್ತವೆ. ಕೆಲವು ಸ್ವಂತ ಮಾಡಿಫಿಕೇಷನ್‌ ಮಾಡುವುದನ್ನು ಅಂತರ್ಜಾಲದ ಮೂಲಕವೂ ಕಲಿತುಕೊಳ್ಳಬಹುದು.

Write A Comment