ಮಂಗಳೂರು,ಎ.22 :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳೊಂದಿಗೆ ಮಂಗಳವಾರ ಶಿರಾಡಿ ಘಾಟಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಳಿಕ ಸುದ್ದಿಗಾರರ ಜತೆ ಮಾತನಾಡಿಶಿರಾಡಿ ಘಾಟಿ ರಸ್ತೆ ಮರು ನಿರ್ಮಾಣ ಕಾಮಗಾರಿ ಶೇ.43ರಷ್ಟು ಪೂರ್ಣಗೊಂಡಿದೆ. ಮೇ ಅಂತ್ಯಕ್ಕೆ ಕೆಲಸ ಪೂರ್ಣಗೊಂಡು ಜೂನ್‌ನಿಂದ ವಾಹನಗಳ ಸಂಚಾರ ಮುಕ್ತಗೊಳಿಸುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರಕಾರ ನೀಡಿದ 160 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಿದ್ದ ಪ್ರಥಮ ಹಂತದ ಕೆಂಪು ಹೊಳೆಯಿಂದ ಅಡ್ಡಹೊಳೆ ವರೆಗಿನ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಗುಲಗಳಲೆಯಿಂದ ಮಾರ್ನಹಳ್ಳಿ ವರೆಗಿನ ದ್ವಿತೀಯ ಹಂತದ ಕಾಮಗಾರಿಗೆ ಮರು ಟೆಂಡರ್ ಇದೇ ಶುಕ್ರವಾರ ಇತ್ಯರ್ಥವಾಗಲಿದ್ದು, 85 ಕೋಟಿ ರೂ. ವೆಚ್ಚದಲ್ಲಿ ದ್ವಿತೀಯ ಹಂತದ ಕಾಮಗಾರಿಯೂ ಆರಂಭಗೊಳ್ಳಲಿದೆ.
ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡ ತಕ್ಷಣ ಶಿರಾಡಿ ಘಾಟಿ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ದ್ವಿತೀಯ ಹಂತದ ಕಾಮಗಾರಿಯನ್ನು ರಸ್ತೆ ಮುಚ್ಚದೆ ಮುಂದುವರಿಸುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕೆಂಪು ಹೊಳೆಯಿಂದ ಅಡ್ಡಹೊಳೆ ವರೆಗೆ 13.62 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯಲ್ಲಿ 1.6 ಕಿ.ಮೀ.ವರೆಗಿನ ರಸ್ತೆಯು ಪೇವ್‌ಮೆಂಟ್ ಕ್ವಾಲಿಟಿ ಕಾಂಕ್ರಿಟ್‌ನೊಂದಿಗೆ ಸಂಪೂರ್ಣಗೊಂಡಿದೆ. ಏಳು ಮೀ. ಅಗಲದ ರಸ್ತೆ ಇದೀಗ 8.5 ಮೀಟರ್ ಅಗಲದೊಂದಿಗೆ ಕಾಂಕ್ರಿಟೀಕರಣಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಪ್ರಥಮ ಹಂತದ ಕಾಮಗಾರಿ 69.90 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ದ್ವಿತೀಯ ಹಂತದ ಕಾಮಗಾರಿ 85.28 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನವೆಂಬರ್ ವರೆಗೆ ಕಾಲಾವಕಾಶವಿದ್ದರೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರಲಾದ ಕಾರಣ ಮೇ ಅಂತ್ಯಕ್ಕೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಪೇವ್‌ಮೆಂಟ್ ಕ್ವಾಲಿಟಿ: ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಟರಾಜ್ ಸಿ. ಮಾಹಿತಿ ನೀಡಿ, ಶಿರಾಡಿ ಘಾಟಿ ರಸ್ತೆ ಮೂರು ಹಂತಗಳಲ್ಲಿ ಕಾಂಕ್ರಿಟೀಕರಣಗೊಳ್ಳುತ್ತಿದೆ. ಪ್ರಾಥಮಿಕವಾಗಿ 0.15 ಮೀಟರ್ ದಪ್ಪದಲ್ಲಿ ಗ್ರಾನುವೆಲ್ ಸಬ್ ಬೇಸ್ (ಜಿಎಸ್‌ಬಿ), ಬಳಿಕ ಡ್ರೈ ಲೇನ್ ಕಾಂಕ್ರಿಟ್ (ಡಿಎಲ್‌ಸಿ) 0.15 ದಪ್ಪದಲ್ಲಿ ಹಾಗೂ ಅಂತಿಮವಾಗಿ 0.30 ಮೀಟರ್ ದಪ್ಪದಲ್ಲಿ ಪೇವ್‌ಮೆಂಟ್ ಕ್ವಾಲಿಟಿ ಕಾಂಕ್ರಿಟ್ (ಪಿಕ್ಯುಸಿ) ಹಾಕಲಾಗುತ್ತದೆ ಎಂದರು.
27 ದಿನಗಳಲ್ಲಿ ಪೂರೈಕೆ: ಮಳೆಗಾಲದಲ್ಲಿ ಕಾಂಕ್ರಿಟ್ ಕುಸಿಯದಂತೆ ಸ್ಲಿಪ್ ಫರ್ಮ್ ಸೆನ್ಸಾರ್ ಪೇವರ್ ತಂತ್ರಜ್ಞಾನ ಉಪಯೋಗಿಸಲಾಗಿದೆ. ಪೇವ್‌ಮೆಂಟ್ ಕ್ವಾಲಿಟಿ ಕಾಂಕ್ರಿಟೀಕರಣಕ್ಕಾಗಿ 6.5 ಕೋಟಿ ರೂ. ವೆಚ್ಚದ ಟೆಕ್ಚರಿಂಗ್ ಯಂತ್ರ ಬಳಸಿಕೊಳ್ಳಲಾಗುತ್ತಿದೆ. ಈ ಯಂತ್ರ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ಕಾಮಗಾರಿ ಸಂಜೆ 5ರಿಂದ ಬೆಳಗ್ಗೆ ಆರು ಗಂಟೆ ವರೆಗೆ ಪಿಕ್ಯೂಸಿ ಕಾಮಗಾರಿ ನಡೆಸಲಾಗುತ್ತದೆ. ಈಗಾಗಲೇ ಜಿಎಸ್‌ಬಿ ಕಾಮಗಾರಿ 11 ಕಿ.ಮೀ., ಡಿಎಲ್‌ಸಿ ಕಾಮಗಾರಿ 9.9 ಕಿ.ಮೀ. ಹಾಗೂ ಪಿಕ್ಯುಸಿ ಕಾಮಗಾರಿ 1.6 ಕಿ.ಮೀ.ವರೆಗೆ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ದಿನಕ್ಕೆ 800 ಮೀ.ನಂತೆ 27 ದಿನಗಳಲ್ಲಿ ಪೂರೈಸಲಾಗುವುದು ಎಂದು ಅವರು ಹೇಳಿದರು.
ಇದರೊಂದಿಗೆ 10 ಹೊಸ ಮೋರಿಗಳೊಂದಿಗೆ 69 ಮೋರಿಗಳು, ನಾಲ್ಕು ಸಣ್ಣ ಸೇತುವೆಗಳ ಕಾಮಗಾರಿ ಪೂರ್ಣಗೊಂಡಿದೆ. ಗುತ್ತಿಗೆ ವಹಿಸಿಕೊಂಡಿರುವ ಓಷಿಯನ್ ಕನ್‌ಸ್ಟ್ರಕ್ಷನ್ ಪ್ರೈ. ಲಿಮಿಟೆಡ್ ಸಂಸ್ಥೆಯ ಸುಮಾರು 200 ಹಾಗೂ ಇತರ ಸುಮಾರು 150 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಾರ್ನಹಳ್ಳಿಯಲ್ಲಿ ಬ್ಯಾಚ್ ಮಿಕ್ಸ್ ಪ್ಲಾಂಟ್‌ನಲ್ಲಿ ಕಾಂಕ್ರಿಟ್ ಮಿಶ್ರಣ ನಡೆಸಲಾಗುತ್ತಿದೆ. ಪ್ರಥಮ ಹಂತದ ಕಾಮಗಾರಿಗಾಗಿ ಈಗಾಗಲೇ ಕಾಂಕ್ರಿಟೀಕರಣ ಪೂರ್ಣಗೊಂಡ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಸುವುದು, ತಡೆಗೋಡೆ, ಸೂಚನಾ ಫಲಕ ಸೇರಿದಂತೆ ಇತರ ಅಗತ್ಯ ಹಾಗೂ ಪೂರಕ ಕಾರ್ಯ ನಡೆಸಲಾಗುವುದು ಎಂದು ಅವರು ವಿವರಿಸಿದರು.