ಮಂಗಳೂರು,ಎ.18: ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಜಾಗ ಮಾರಾಟ ಮಾಡಿ 2.51 ಕೋ. ರೂ.ಗಳಷ್ಟು ಬಾರೀ ಮೊತ್ತದ ವಂಚನೆಯನ್ನು ಅಭಿನಯ್ ಸೊರಕೆ ಎಂಬವರಿಗೆ ಎಸಗಿದ ಪ್ರಕರಣವೊಂದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಂತ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಅಭಿನಯ್ ಸೊರಕೆ ಮತ್ತವರ ತಂದೆ ಮೋಸ ಹೋದವರು. ಓರ್ವ ವಕೀಲ ಸೇರಿದಂತೆ 13 ಮಂದಿ ಈ ಪ್ರಕರಣದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮಿಜಾರು ತೋಡಾರು ಗುಂಡಿಯ ರಭೀಯತ್ ಎಂಬವರು ತಿಳಿಸಿದಂತೆ ವೈದ್ಯರು ವಿಕ್ಟರ್ ಓಲಿಯೋ ಫೆರ್ನಾಂಡಿಸ್ ಎಂಬವರದು ಎನ್ನಲಾದ ಜಾಗ 2,51,15,000 ರೂ. ಹಣ ನೀಡಿ ಖರೀದಿಸಿದ್ದರು.ಪಚ್ಚನಾಡಿಯ ಸರ್ವೆ ನಂಬ್ರ 147-2 ಬಿ (ಪಾರ್ಟ್)ನಲ್ಲಿ 3 ಎಕರೆ ಮತ್ತು 147- 4 ರಲ್ಲಿ 3.36 ಎಕರೆ ಜಾಗದ ದಾಖಲಾತಿಗಳನ್ನು ಹಾಜರು ಪಡಿಸಲಾಗಿತ್ತು.
ಮಾಲಕ ವಿಕ್ಟರ್ ಓಲಿವ್ ಫರ್ನಾಂಡಿಸ್ ಎಂದು ಹೇಳುವ ವ್ಯಕ್ತಿಯನ್ನು ಮತ್ತು ಈ ಬಗ್ಗೆ ದೃಡೀಕರಿಸಲು ಪೌಲ್ ಮೋಂತೆರೋ, ಜೀವನ್ ದಾಸ್ ಶೆಟ್ಟಿ, ಸತೀಶ್ ಆರ್.ಕೆ., ಸುನೀಲ್ ಕುಮಾರ್, ಪ್ರವೀಣ್ ಶೆಟ್ಟಿ, ಅಲ್ಪೋನ್ಸಾ ಮ್ಯಾಕ್ಸಿ ಡಿಸೋಜ, ಉದಯ್ ಕುಮಾರ್, ವಿಜೇಶ್ ಸುನೀಲ್, ಕುಮಾರ್, ಹರೀಶ್ ತೋಳಾರ್, ಬಾಲು ಬಾಲಚಂದ್ರ ಶೆಟ್ಟಿ, ಗೋಪಿನಾಥ್, ಜೀವನ್ ರೋಶನ್ ಕುಟಿನೋ ಎಂಬವರನ್ನು ವೈದ್ಯರಿಗೆ ಈ ಸಂದರ್ಭ ಪರಿಚಯಿಸಲಾಗಿತ್ತು.
ಎ. 15 ರಂದು ತಾನು ಖರೀದಿಸಿದ ಜಾಗಕ್ಕೆ ಅಭಿನಯ್ ಸೊರಕೆ ತೆರಳಿ ಪರಿಶೀಲಿಸುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಈ ಜಾಗವನ್ನು ತಾನು ವಿಕ್ಟರ್ ಓಲಿವ್ ಫೆರ್ನಾಂಡಿಸ್ ಎಂಬವರಿಂದ ರಿಜಿಸ್ಟರ್ಡ್ ಸೇಲ್ ಡೀಡ್ ಮೂಲಕ ಖರೀದಿಸಿರುವುದಾಗಿ ತಿಳಿಸಿದರು. ವಿಕ್ಟರ್ ಒಲಿವ್ ಫೆರ್ನಾಂಡಿಸ್ ತಾನೇ ಎನ್ನುವ ಬಗ್ಗೆ ಸಂಬಂಧಿತ ವ್ಯಕ್ತಿ ನೈಜ ದಾಖಲಾತಿಗಳನ್ನು ತೋರಿಸಿದಾಗ ಅಭಿನಯ್ ಸೊರಕೆ ಅವರಿಗೆ ತಾನು ಮೋಸ ಹೋದ ಬಗ್ಗೆ ಅರಿವಾಗಿದ್ದರೂ ಕಾಲ ಮಿಂಚಿತ್ತು.
ನಕಲಿ ಡ್ರೈವಿಂಗ್ ಲೈಸನ್ಸ್, ನಕಲಿ ವೋಟರ್ ಐ.ಡಿ. ಮತ್ತು ಪಾನ್ ಕಾರ್ಡ್ಗಳ ಜೆರಾಕ್ಸೃ್ ಪ್ರತಿ ದಾಖಲೆಗಳನ್ನು ಸೃಷ್ಟಿಸಿದ ಪೌಲ್ ಮೊಂತೆರೋ, ಮಿಜಾರಿನ ತೋಡಾರ್ ಗುಂಡಿ ಎಂಬಲ್ಲಿ ವಾಸವಾಗಿದ್ದ ರಭೀಯತ್ ಮತ್ತು ಈ ಕೃತ್ಯದಲ್ಲಿ ಒಳಸಂಚು ನಡೆಸಿದ ಜೀವನ್ ದಾಸ್ ಶೆಟ್ಟಿ, ವಿಜೇಶ್ ರೋಶನ್ ಕುಟಿನೋ, ಸತೀಶ್ ಅರ್.ಕೆ., ಸುನೀಲ್ ಕುಮಾರ್, ಪ್ರವೀಣ್ ಶೆಟ್ಟಿ, ಅಲ್ಪೋನ್ಸ್ ಡಿಸೋಜ, ಉದಯ ಕುಮಾರ್, ಹರೀಶ್ ತೋಳಾರ್, ಬಾಲು ಯಾನೆ ಬಾಲಚಂದ್ರ ಶೆಟ್ಟಿ, ಗೋಪಿನಾಥ್, ಜೀವನ್ ಪಾಯ್ಸ್ ಹಾಗೂ ದಾಖಲೆ ಸೃಷ್ಟಿ ಮಾಡಲು ಸಹಕರಿಸಿದ ವಕೀಲ ಅರುಣ್ ಬಂಗೇರಾ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಭಿನಯ್ ಸೊರಕೆ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು
