ಕಾಸರಗೋಡು,ಎ.16 : ಆಯುಷ್‌ನಂತಹ ಸಂಸ್ಥೆಗಳು ಭಾರತೀಯ ಚಿಕಿತ್ಸಾ ಪದ್ಧತಿಗಳ ಧನಾತ್ಮಕ ಅಂಶಗಳನ್ನೂ ಸೇರಿಸಿಕೊಂಡ ಸಂಯೋಜಿತ ಚಿಕಿತ್ಸೆಗಳ ಪಲಪ್ರದವಾದ ಅಳವಡಿಕೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಸಂದರ್ಭ ಸನ್ನಿಹಿತವಾಗುತ್ತಿದೆ. ಭಾರತದ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಆನೆಕಾಲು ರೋಗ, ಬಿಳಿತೊನ್ನು ಮತ್ತಿತರ ಚರ್ಮರೋಗಗಳಿಗೆ ಸಂಯೋಜಿತ ಚಿಕಿತ್ಸೆ ಫಲಪ್ರದವೆಂಬುದು ಅನೇಕ ಸಂದರ್ಭಗಳಲ್ಲಿ ರುಜುವಾತುಗೊಳಿಸಲ್ಪಟ್ಟಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಂಯೋಜಿತ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ತರವಾದುದು. ಅನಾರೋಗ್ಯವನ್ನು ಶಮನಗೊಳಿಸುವುದರ ಜೊತೆಗೆ ಭಾರತೀಯ ಚಿಕಿತ್ಸಾ ಪದ್ಧತಿಗಳು ಮನುಷ್ಯನ ಜೀವನ ಕ್ರಮದ ಬದಲಾವಣೆಗೂ ಒತ್ತು ನೀಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿವೆ. ಈ ಚಿಕಿತ್ಸಾ ಪದ್ಧತಿಗಳನ್ನು ಅಲೋಪತಿ ಮತ್ತಿತರ ವಿಧಾನಗಳ ಜೊತೆಗೆ ಸಂಯೋಜಿಸುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ ಎಂದು ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ|ಪಿ.ಎಸ್.ಬಾಲು ಅಭಿಪ್ರಾಯಪಟ್ಟರು. ಅವರು ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಯೋಗಾಸನಗಳ ಗುಣಾಂಶಗಳನ್ನು ಅಳವಡಿಸಿ ರೂಪಿಸಲಾದ `ಸಂಯೋಜಿತ ಚಿಕಿತ್ಸೆ’ಯನ್ನು ಸಿದ್ಧಪಡಿಸಿರುವ ಇನ್ಸ್‌ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ)ಯು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದ ಕೇಂದ್ರದಲ್ಲಿ ಗುರುವಾರ ಆಯೋಜಿಸಿರುವ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿವಿಶೇಷ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹರಿದ್ವಾರದ ಪತಂಜಲಿ ರಿಸರ್ಚ್ ಫೌಂಡೇಶನಿನ ನಿರ್ದೇಶಕಿ ಡಾ|ಶಿರ್ಲೆ ಟೆಲೆಸ್ ಭಾರತೀಯ ಯೋಗಾಸನ ಪದ್ಧತಿಯು ಮಾನವನ ಉತ್ತಮ ಬದುಕಿಗಾಗಿ ಪರಿಣಾಮಕಾರಿ ತರಬೇತಿಯನ್ನು ನೀಡುತ್ತದೆ. ಭಾವನೆ ಹಾಗೂ ಬುದ್ಧಿವಂತಿಕೆಗಳನ್ನು ಸಮತೋಲನಗೊಳಿಸಿ ಸಮೃದ್ಧ ಬದುಕನ್ನು ರೂಪಿಸುತ್ತದೆ. ಸಮಾಜ ಮತ್ತು ಮಾನವನ ನಡುವಿನ ಉತ್ತಮ ಸಂಬಂಧಕ್ಕೂ ಯೋಗ ನೆರವಾಗುತ್ತದೆ. ಈ ನಿಟ್ಟಿನಲ್ಲ್ಲಿ ಐಎಡಿಯು ಸಂಶೋಧಿಸಿರುವ ಲಿಂಫೇಟಿಕ್ ಫೈಲೇರಿಯಾಸಿಸ್ ರೋಗದ ಸಂಯೋಜಿತ ಚಿಕಿತ್ಸೆಯಲ್ಲಿ ಯೋಗಾಸನಕ್ಕೆ ಅಪಾರ ಪ್ರಾಧಾನ್ಯತೆಯಿದೆ ಎಂದು ಹೇಳಿದರು. ಐಎಡಿಯು ಪ್ರತಿ ತಿಂಗಳಿನಲ್ಲೂ ಹಮ್ಮಿಕೊಳ್ಳಲು ಉದ್ದೇಶಿಸಿರುವ ಉಚಿತ ಯೋಗ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿದರು. ಈ ಹಿನ್ನೆಲೆಯಲ್ಲಿ ಅವರು ಸ್ವತಃ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ವಿಶೇಷ ಯೋಗ ತರಬೇತಿಯನ್ನು ನೀಡಿದ್ದಾರೆ.
ಬೆಳಗ್ಗೆ ಜನಸಾಮಾನ್ಯರಿಗಾಗಿ ಕಾಸರಗೋಡಿನ ಸನಿಹ ಪಾರೆಕಟ್ಟೆಯಲ್ಲಿರುವ ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಯಲ್ಲಿ ಜನಮೈತ್ರಿ ಪೋಲೀಸ್ ಸಹಭಾಗಿತ್ವದೊಂದಿಗೆ ಡಾ|ಶಿರ್ಲೆ ಟೆಲೆಸ್ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಭಾಗವಹಿಸಿದ್ದ ನೂರಕ್ಕೂ ಮಿಕ್ಕಿ ಮಂದಿ ಈ ಸಂದರ್ಭದಲ್ಲಿ ವಿಶೇಷ ಯೋಗಾಸನಗಳನ್ನು ಪರಿಚಯಿಸಿಕೊಂಡರು. ನಂತರ ಐಎಡಿಯಲ್ಲಿ ಜರಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ| ಗೈಲ್ ಟೋಡ್ ಮತ್ತು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಗೌರವ ಪ್ರಾಚಾರ್ಯ ಡಾ. ಟೆರೆನ್ಸ್ ಜೆ. ರಯಾನ್, ಕಾಸರಗೋಡಿನ ತಜ್ಞ ವೈದ್ಯರಾದ ಡಾ|ಎಸ್.ಆರ್.ನರಹರಿ, ಡಾ|ಕೆ.ಎಸ್.ಬೋಸ್, ಡಾ|ಪ್ರಸನ್ನ ನರಹರಿ, ಡಾ|ಗುರುಪ್ರಸಾದ ಅಗ್ಗಿತ್ತಾಯ ಇವರು ರೋಗಿಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ವಿಧಾನಗಳನ್ನು ನಿರ್ದೇಶಿಸಿದರು. ಕಳೆದ ಮೂರು ದಿನಗಳಿಂದ ಐಎಡಿಯಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾರತದಲ್ಲಿ ಆನೆಕಾಲು ರೋಗದ ಪ್ರಧಾನ ಸಮಸ್ಯೆ ಇರುವ ಎಂಟು ರಾಜ್ಯಗಳ ಇನ್ನೂರಕ್ಕೂ ಅಧಿಕ ರೋಗಿಗಳು ಭಾಗವಹಿಸಿ ತಜ್ಞ ವೈದ್ಯರಿಂದ ಪರಿಹಾರವನ್ನು ಪಡೆದುಕೊಂಡಿದ್ದಾರೆ.
ಪರಂಪರಾಗತ ಭಾರತೀಯ ಯೋಗ, ಆಯುರ್ವೇದ, ಹೋಮಿಯೋಪತಿಗಳನ್ನು ಅಲೋಪತಿಯ ಜೊತೆ ಸಂಯೋಜಿಸಿದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಐಎಡಿಯು ಹಮ್ಮಿಕೊಂಡಿರುವ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣವು ಜಗತ್ತಿನಾದ್ಯಂತ ಇರುವ ಲಿಂಫೇಟಿಕ್ ಫೈಲೇರಿಯಾಸಿಸ್ ಮತ್ತು ಇತರ ಚರ್ಮರೋಗ ಪೀಡಿತರ ಸಮಸ್ಯೆಗಳನ್ನು ಇನ್ನಷ್ಟು ಸಮರ್ಥವಾಗಿ ಪರಿಹರಿಸಲು ಮತ್ತು ಚಿಕಿತ್ಸಾ ವಿಧಾನವನ್ನು ಸರಳಗೊಳಿಸಲು ಪ್ರಯತ್ನಿಸುತ್ತಿದೆ. ಚಿಕಿತ್ಸೆಯಲ್ಲಿ ಆಯುರ್ವೇದ ಕಷಾಯಗಳ ಉಪಯೋಗ ಮತ್ತು ಯೋಗಾಸನ ಇತ್ಯಾದಿ ಅಂಶಗಳ ಧನಾತ್ಮಕ ಬಳಕೆಯ ಕಡೆಗೆ ವಿಚಾರ ಸಂಕಿರಣದಲ್ಲಿ ಗಮನ ಹರಿಸಲಾಗುತ್ತಿದೆ. ವಿಚಾರ ಸಂಕಿರಣವು ಎಪ್ರಿಲ್ ೧೭ ರಂದು ಕೊನೆಗೊಳ್ಳಲಿದೆ.