ಮಂಗಳೂರು, ಎ.7: ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂಬ ಇರಾದೆ ಹೊಂದಿರುವ ಮಿಸ್ ಇಂಡಿಯಾ ಪ್ರಥಮ ರನ್ನರ್ ಅಪ್, ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆಫ್ರೀನ್ ರಚೆಲ್ ವಾಝ್ ಕೆಲ ದಿನಗಳಲ್ಲೇ ಇಡಿಸಿ (ಅರ್ಲಿ ಡಿಟೆಕ್ಷನ್ ಫೋರ್ ಕ್ಯೂರ್) ಎಂಬ ಸ್ತನ ಕ್ಯಾನ್ಸರ್ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಸ್ಥೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೆ ನಡೆದ ‘ಫೆಮಿನಾ ಮಿಸ್ ಇಂಡಿಯಾ 2015’ರ ಪ್ರಥಮ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡು ತನಗೆ ವೈದ್ಯಕೀಯ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತ ಮಂಗಳೂರಿಗೆ ಸೋಮವಾರ ಆಗಮಿಸಿದ ಅವರು ತಮ್ಮ ಸಂತಸ ಹಂಚಿಕೊಂಡರು.
ನಗರದ ಎಜೆ ಸಂಸ್ಥೆಯಲ್ಲಿ ಮೆಡಿಸಿನ್ ಆ್ಯಂಡ್ ಸರ್ಜರಿ ವಿಭಾಗದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆಫ್ರೀನ್ ಸೋಮವಾರ ಬೆಳಗ್ಗೆ ವಿಮಾನದ ಮೂಲಕ ಆಗಮಿಸಿದ ಅವರು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಸಂಸ್ಥೆಯ ಕುರಿತು ಮಾಹಿತಿ ನೀಡಿದರು.
ಸ್ತನ ಕ್ಯಾನ್ಸರ್ ಕುರಿತಂತೆ ಕಾರ್ಯ ನಿರ್ವಹಿಸಲಿರುವ ಈ ಸಂಸ್ಥೆಗಾಗಿ ಕಳೆದ ಸುಮಾರು 2 ವರ್ಷಗಳಿಂದ ತಾನು ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು. ದಮನಿತ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉತ್ಕಟವಾದ ಬಯಕೆಯನ್ನು ನಾನು ಹೊಂದಿದ್ದು, ಆ ನಿಟ್ಟಿನಲ್ಲಿಯೂ ಕಾರ್ಯ ನಿರ್ವಹಿಸಲಿದ್ದೇನೆ. ಆದರೆ ಈ ಸೌಂದರ್ಯ ಸ್ಪರ್ಧೆಯ ವಿಜೇತೆಯಾಗಿರುವುದರಿಂದ ಸದ್ಯ ಒಂದು ವರ್ಷ ಕಾಲ ಆ ಕಡೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.
‘ನಟನೆ ನನ್ನ ಜೀವನದ ಒಂದು ಭಾಗ’
ಅತ್ಯಂತ ಸ್ಪಷ್ಟ ಹಾಗೂ ಜಾಣ್ಮೆಯಿಂದ ಉತ್ತರಿಸುವ ಆಫ್ರೀನ್, ನಟನೆ ಎಂಬುದು ನನ್ನ ಜೀವನದ ಒಂದು ಭಾಗ ಎನ್ನುವ ಮೂಲಕ ಚಿತ್ರರಂಗ ಪ್ರವೇಶಿಸುವ ತಮ್ಮ ಬಯಕೆಯನ್ನು ತೆರೆದಿಟ್ಟರು. ಚಿತ್ರಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಸದ್ಯ ನಾನು ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಡೆಗೆ ಗಮನ ಹರಿಸುತ್ತಿದ್ದೇನೆ. ಹಾಗಾಗಿ ಮುಂದೆ ಅವಕಾಶಗಳು ಬಂದಲ್ಲಿ ನಾನು ಖಂಡಿತಾ ಚಿತ್ರರಂಗ ಪ್ರವೇಶಿಸುವುದನ್ನು ನಿರಾಕರಿಸಲಾರೆ. ನಿಜ ಜೀವನದಲ್ಲಿ ನಾನೋರ್ವ ‘ಸೀಕ್ರೆಟ್ ನಟಿ’ ಎಂದು ಕಣ್ಣು ಮಿಟುಕಿಸಿದರು.
ಕನ್ನಡ, ತುಳು ಕಲಿಯುವ ಬಯಕೆ:
ನನ್ನ ಹುಟ್ಟೂರು ಇದಾಗಿಲ್ಲವಾದರೂ ನಾನು ಉನ್ನತ ಶಿಕ್ಷಣ ಪಡೆಯುತ್ತಿರುವ ಸ್ಥಳ ಮಂಗಳೂರು ಆಗಿರುವುದರಿಂದ ಈ ಸ್ಥಳ ನನಗೆ ಅತ್ಯಂತ ಪ್ರಿಯವಾದುದು ಎಂದರು. ಎರಡೂವರೆ ವರ್ಷಗಳ ಹಿಂದೆ ಮಂಗಳೂರಿಗೆ ಆಗಮಿಸಿದ ತಾನು ಕನ್ನಡ ಮತ್ತು ತುಳು ಭಾಷೆಯನ್ನು ಕಲಿಯಬೇಕೆಂದು ಇಚ್ಛಿಸಿದ್ದೇನೆ ಎಂದರು. ಮಾಡೆಲ್ ಆಗುವುದಕ್ಕೂ ಸೌಂದರ್ಯ ಸ್ಪರ್ಧೆಯಲ್ಲಿ ಜಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಸೌಂದರ್ಯ ಸ್ಪರ್ಧೆಯ ಗೆಲುವು ಮಾತ್ರ ಮಾಡೆಲ್ ಆಗಲು ಸಾಕಷ್ಟು ಅವಕಾಶಗಳನ್ನು ನೀಡಬಹುದು. ನಾನೀಗ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ತೃತೀಯ ವರ್ಷದಲ್ಲಿದ್ದು, ಸದ್ಯ ನನ್ನ ಪಾಲಿಗೆ ನನ್ನ ಶಿಕ್ಷಣವನ್ನು ಪೂರೈಸುವುದು ಕಷ್ಟವಾದರೂ ನಾನು ನನ್ನ ಶಿಕ್ಷಣಕ್ಕೆ ಪ್ರಮುಖ ಆದ್ಯತೆಯನ್ನು ನೀಡಲಿದ್ದೇನೆ ಹಾಗೂ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸುತ್ತೇನೆ ಎಂದು ಆಫ್ರೀನ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಬಿಸಿಡಿ ಸಂಸ್ಥೆಯ ಚರಣ್ ಸುವರ್ಣ ಉಪಸ್ಥಿತರಿದ್ದರು.
ವರದಿ ಕೃಪೆ : ವಾಭಾ











