ಕನ್ನಡ ವಾರ್ತೆಗಳು

ಕಂಪೌಂಡ್ ಹಾರಿದ ಯುವಕನಿಗೆ ಜನರಿಂದ ಥಳಿತ

Pinterest LinkedIn Tumblr

Sattar_Mastikatte_1

ಮಂಗಳೂರು, ಏ.06 :  ತಾಲೂಕಿನ ಕೊಲ್ಯದಲ್ಲಿ ನಿನ್ನೆ ತಡರಾತ್ರಿ ಮನೆಯೊಂದರ ಕಾಂಪೌಂಡ್ ಗೋಡೆಯನ್ನು ಹಾರಿ ಆವರಣವನ್ನು ಪ್ರವೇಶಿಸಿ ಮನೆಯವರಲ್ಲಿ ಆತಂಕ ಸೃಷ್ಟಿಸಿದ್ದ ಯುವಕನೋರ್ವನನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಬಳಿಕ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ವಾರವಷ್ಟೇ ಇದೇ ಪರಿಸರದಲ್ಲಿ ಸರಣಿಗಳ್ಳತನ ನಡೆದು, ಕಳ್ಳರು ಲಕ್ಷಾಂತರ ರೂ.ಗಳ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪರಾರಿಯಾಗಿದ್ದರು. ಬಂಧಿತ ಯುವಕನನ್ನು ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಸತ್ತಾರ್ (25) ಎಂದು ಗುರುತಿಸಲಾಗಿದೆ.

ಕೊಲ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ 66ಕ್ಕೆ ಹೊಂದಿಕೊಂಡಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮೀಪವಿರುವ ಮನೆಯೊಂದರ ಕಂಪೌಂಡ್ ನಿಂದ ಸತ್ತಾರ್ ಇಣುಕುತ್ತಿದ್ದುದನ್ನು ಮನೆಮಂದಿ ಗಮನಿಸಿದ್ದರು. ಅವರು ನೋಡುತ್ತಿದ್ದಂತೆಯೇ ಸತ್ತಾರ್ ಕಂಪೌಂಡ್ ಹಾರಿ ಆವರಣದೊಳಕ್ಕೆ ಪ್ರವೇಶಿಸಿದ್ದ. ತಕ್ಷಣ ಮನೆಮಂದಿ ಆತನನ್ನು ಹಿ‌ಡಿಯಲು ಹೊರಕ್ಕೆ ಧಾವಿಸಿದ್ದು, ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ ಸತ್ತಾರ್ ದೇವಸ್ಥಾನದ ಸಮೀಪವಿರುವ ಖಾಲಿ ಕಂಪೌಂಡ್ ವೊಂದರಲ್ಲಿ ಅಡಗಿಕೊಂಡು ಕುಳಿತಿದ್ದ.

ಈ ವೇಳೆಗೆ ಮನೆಮಂದಿಯೊಂದಿಗೆ ಸ್ಥಳೀಯರೂ ಸೇರಿಕೊಂಡಿದ್ದು, ಅಡಗಿ ಕುಳಿತಿದ್ದ ಸತ್ತಾರ್ ನನ್ನು ಹಿಡಿದು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ್ದ. ಆತನ ಶಂಕಾಸ್ಪದ ವರ್ತನೆಯಿಂದ ಕೆರಳಿದ ಜನರು ಹಿಗ್ಗಾಮುಗ್ಗಾ ಥಳಿಸಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಿಚಾರಣೆಗೊಳ ಪಡಿಸಿ ದಾಗಲೂ ಮಾತನಾಡದೆ ಸುಮ್ಮನಿದ್ದ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸತ್ತಾರ್ ಗಾಂಜಾದ ಅಮಲಿನಲ್ಲಿದ್ದಂತಿತ್ತು ಎಂದು ಕೆಲವರು ಶಂಕಿಸಿದ್ದಾರೆ. ಎರಡು ಬೈಕ್ ಗಳಲ್ಲಿ ಸತ್ತಾರ್ ಜೊತೆ ಇತರ ನಾಲ್ವರು ಬಂದಿದ್ದರೆಂದು ಕೆಲವರು ತಿಳಿಸಿದ್ದಾರೆ. ಇದು ವಿಚಾರಣೆಯ ಬಳಿಕ ದೃಢಪಡಬೇಕಾಗಿದೆ.

ಮಂಗಳೂರಿನಲ್ಲಿ ಬಟ್ಟೆ ಮಾರಾಟದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸತ್ತಾರ್ ದಾರಿಹೋಕರಿಂದ ಹಣವನ್ನು ಕೇಳುತ್ತಿದ್ದ. ಅವರು ನಿರಾಕರಿಸಿದರೆ ಪಿಕ್ ಪಾಕೆಟ್ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

Write A Comment