ಮಂಗಳೂರು: ಶಿಕ್ಷಣ, ಆರೋಗ್ಯ, ಉದ್ಯಮ ರಂಗದಲ್ಲಿ ಮುಂಚೂಣಿ ಹಾಗೂ ವಾಯು, ಜಲ, ರಸ್ತೆ, ರೈಲು ಸೇರಿದಂತೆ ಎಲ್ಲ ರೀತಿಯ ಸಂಪರ್ಕ ಸಾಧನಗಳಿರುವ ಮಂಗಳೂರಿನಲ್ಲಿ ವಿಶ್ವದರ್ಜೆಯ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಮಂಗಳೂರಿನಲ್ಲಿ ಎಂಆರ್‌ಪಿಎಲ್, ಒಎಂಪಿಎಲ್, ಐಎಸ್‌ಪಿಆರ್‌ಎಲ್, ವಿಶೇಷ ವಿತ್ತ ವಲಯ ಇರುವುದರಿಂದ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಪೂರಕ ವಾತಾವರಣ ಇದೆ. ಕೇಂದ್ರ ಸರಕಾರ ಹೊಸದಾಗಿ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದ್ದು, ಅದು ಎಂಆರ್‌ಪಿಎಲ್ ನೇತೃತ್ವದಲ್ಲಿ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಅವರು ಹೇಳಿದರು.
ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್‌ನ ಮೂರನೇ ಹಂತದ ಉದ್ಯಮದಲ್ಲಿ ಪಾಲಿಪ್ರೊಪಿಲೀನ್ ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕೌಶಲ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದು, ಎಲ್ಲ ಇಲಾಖೆಗಳೂ ಈ ಕುರಿತು ಕಾರ್ಯತಂತ್ರ ರೂಪಿಸುತ್ತಿವೆ. ಹೈಡ್ರೋಕಾರ್ಬನ್ ವಿಭಾಗವೊಂದರಲ್ಲಿಯೇ 136 ವಿಭಾಗಗಳಲ್ಲಿ ಕೌಶಲ್ಯ ಕಲಿಕೆಯ ಅವಕಾಶಗಳನ್ನು ಗುರುತಿಸಲಾಗಿದೆ. ಮೇಕ್ ಇನ್ ಇಂಡಿಯಾದ ಪ್ರಮುಖ ನಗರವನ್ನಾಗಿಯೂ ಮಂಗಳೂರನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆ ಮುಂಬಯಿ, ಕೊಲ್ಲಿ ರಾಷ್ಟ್ರಗಳಿಗೆ ತೆರಳುತ್ತಿದ್ದು, ಅವರಿಗೆ ಹೆಚ್ಚಿನ ಕೌಶಲ್ಯ ಲಭಿಸದರೆ ಉತ್ತಮ ಕೆಲಸ ಹಾಗೂ ಹೆಚ್ಚಿನ ವೇತನ ಸಿಗಲು ಸಾಧ್ಯವಿದೆ. ಮಂಗಳೂರಿನಲ್ಲಿ ಎನ್‌ಎಂಪಿಟಿ, ಕುದುರೆಮುಖ ಸಹಿತ ಹಲವಾರು ಉದ್ಯಮಗಳು ಇರುವುದರಿಂದ ಇಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕೂಡಾ ಸಾಧ್ಯವಾಗಲಿದೆ. ಉದ್ಯೋಗ ನೀಡುವ ಎಲ್ಲ ಇಲಾಖೆಗಳಿಗೆ ಬೇಕಾದ ತರಬೇತಿ ಕೌಶಲ್ಯ ಕೇಂದ್ರದಿಂದ ನೀಡಿ, ಮಂಗಳೂರಿನ ಮರು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಹಿಂದಿನ ಸರಕಾರ ಕೊಚ್ಚಿಯಿಂದ ಮಂಗಳೂರಿಗೆ ಅನಿಲ ಕೊಳವೆ ಯೋಜನೆ ರೂಪಿಸಿತ್ತು. ಆದರೆ, ಜನರ ವಿರೋಧದಿಂದ ಕೊಳವೆ ಹಾಕಲು ಆಗುತ್ತಿಲ್ಲ. ಈ ಬಗ್ಗೆ ಕೇರಳದ ಸರಕಾರದ ಜತೆ ಮಾತುಕತೆ ನಡೆಸುತ್ತೇವೆ. ಅದು ಆಗದಿದ್ದರೆ, ಗೋಕಾಕ್‌ನಿಂದ ಬಿಡದಿಗೆ ಹೋಗುವ ಕೊಳವೆಯಿಂದ ಇಲ್ಲಿಗೆ ತರಲು ಕೂಡಾ ಅಧ್ಯಯನ ನಡೆಸಲಾಗುತ್ತಿದೆ. ಮಂಗಳೂರು ಬಂದರಿನಲ್ಲಿ ಎಲ್‌ಎನ್‌ಜಿ ಟರ್ಮಿನಲ್ ಸ್ಥಾಪನೆ ಪ್ರಸ್ತಾಪವೂ ಇದೆ. ಅನಿಲ ಕೊಳವೆ ಸಾಕಾರಗೊಂಡರೆ ಎಂಸಿಎಫ್ ಉತ್ಪಾದನೆ ಹೆಚ್ಚಳಗೊಂಡು ಸಾಕಷ್ಟು ಉದ್ಯಮ, ಉದ್ಯೋಗಕ್ಕೆ ಸಹಕಾರಿಯಾಗಲಿದೆ ಎಂದರು.











