ಕನ್ನಡ ವಾರ್ತೆಗಳು

ಹರಿದ್ವಾರದಲ್ಲಿ ಧರ್ಮಗುರು ಕಾಶೀ ಶ್ರೀಗಳ ನವತಿ ಸಂಭ್ರಮ

Pinterest LinkedIn Tumblr

Haridwar_sevaganga_1

ಹರಿದ್ವಾರ, ಏ 05 : ದೇಶದ ಜೀವನದಿ ಗಂಗಾನದಿ ತಟದಲ್ಲಿರುವ ಪವಿತ್ರ ಹರಿದ್ವಾರದಲ್ಲಿ ಕಾಶೀಮಠ ಸಂಸ್ಥಾನದ ಧರ್ಮಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ನವತಿ (90) ಮಹೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಹರಿದ್ವಾರದ ವ್ಯಾಸಾಶ್ರಮದಲ್ಲಿ ಏಪ್ರಿಲ್ ಒಂದರಿಂದ ಆರಂಭವಾಗಿರುವ ಈ ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ಏಪ್ರಿಲ್ ಆರು ಸ್ವಾತಿ ನಕ್ಷತ್ರದಂದು ಸಂಪನ್ನಗೊಳ್ಳಲಿದೆ. ವಿವಿಧ ಹೋಮ, ಹವನಗಳು ಶ್ರೀಗಳ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿದೆ.

Haridwar_sevaganga_3a Haridwar_sevaganga_2a

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ (GSB) ಧರ್ಮ ಪೀಠಗಳಲ್ಲಿ ಒಂದಾಗಿರುವ ಕಾಶೀಮಠದ ಸಂಸ್ಥಾನದ ಹಾಲಿ ಪೀಠಾಧಿಪತಿಯಾಗಿರುವ ಸುಧೀಂದ್ರ ತೀರ್ಥ ಸ್ವಾಮೀಜಿಗಳ ನವತಿ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾಮೀಜಿಗಳ ಜೀವನಾಧಾರಿತ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ವ್ಯಾಸಾಶ್ರಮದಲ್ಲಿ ಏರ್ಪಡಿಸಲಾಗಿತ್ತು. ಬಾಲ್ಯದಿಂದ ಇಂದಿನವರೆಗಿನ ತಮ್ಮ ಸುಮಾರು 800ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ನೋಡಿ ಸುಧೀಂದ್ರ ತೀರ್ಥರು ಮೆಚ್ಚುಗೆ ಸೂಚಿಸಿದರು. ಬೆಂಗಳೂರು, ಕೊಚ್ಚಿ, ಮಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧಡೆಯಿಂದ ಜಿಎಸ್ಬಿ ಸಮುದಾಯದ ಧಾರ್ಮಿಕ ಬಂಧುಗಳು ಭಾರೀ ಸಂಖ್ಯೆಯಲ್ಲಿ ಹರಿದ್ವಾರಕ್ಕೆ ಆಗಮಿಸುತ್ತಿದ್ದು, ಸೋಮವಾರ (ಏ 6) ನಡೆಯಲಿರುವ ಕಾರ್ಯಕ್ರಮದ ಪ್ರಮುಖ ಘಟ್ಟವನ್ನು (ಶ್ರೀಗಳ ತೊಂಬತ್ತನೇ ಸಂಭ್ರಮ) ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಏಪ್ರಿಲ್ ಆರರಂದು ನಡೆಯುವ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೆಬ್ ಕಾಸ್ಟ್ ತಂತ್ರಜ್ಞಾನದ ಮೂಲಕ www.kashimath.in ಅಂತರ್ಜಾಲದಲ್ಲಿ ವೀಕ್ಷಿಸಬಹುದಾಗಿದೆ. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಬಗ್ಗೆ: ಜಿಎಸ್ಬಿ ಸಮಾಜದ ಧರ್ಮ ಪೀಠಗಳಲ್ಲಿ ಒಂದಾಗಿರುವ ಶ್ರೀ ಕಾಶೀಮಠ ಸಂಸ್ಥಾನದ ಪೀಠಾಧಿಪತಿಯಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಮಠದ ಯತಿಪರಂಪರೆಯ 20ನೇ ಯತಿವರ್ಯರು.

Haridwar_sevaganga_4a Haridwar_sevaganga_5

1944ರಲ್ಲಿ ಒಳಲಂಕೆ ಖ್ಯಾತಿಯ ದಕ್ಷಿಣಕನ್ನಡ ಜಿಲ್ಲೆ ಮೂಲ್ಕಿಯ ಗುರು ಶ್ರೀ ಸುಕೃತೀಂದ್ರ ತೀರ್ಥ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಳೆದ ಏಳು ದಶಕಗಳಿಂದ ಸಂಸ್ಥಾನದ ಪ್ರಗತಿ ಮತ್ತು ಶಿಷ್ಯ ವರ್ಗದ ಉನ್ನತಿಗಾಗಿ ನಿಸ್ವಾರ್ಥವಾಗಿ ತಮ್ಮನ್ನು ತೊಡಗಿಸಿಕೊಂಡವರು. ವಿಶ್ವಾದ್ಯಂತ ಲಕ್ಷಾಂತರ ಮಂದಿ ಶಿಷ್ಯವರ್ಗಕ್ಕೆ ಪ್ರತ್ಯಕ್ಷ ದೇವರಾಗಿ ತೊಂಬತ್ತರ ಹರೆಯದ ಶ್ರೀಗಳು, ಸದಾ ಪರಮಾತ್ಮನ ಸ್ಮರಣೆ, ಸಮಾಜ ಮುಖಿ ಯೋಜನೆಗಳಿಂದ ಶಿಷ್ಯವರ್ಗಕ್ಕೆ ಮಾರ್ಗದರ್ಶನ, ಪ್ರೇರಣೆಯಾಗಿದ್ದಾರೆ. ಸರ್ವರ ಒಳಿತಿನಲ್ಲೇ ಪರಮಾತ್ಮನನ್ನು ಕಂಡ ತಪಸ್ವಿಯಾಗಿ, ಜಾಗತಿಕ ಕಲ್ಯಾಣಕ್ಕಾಗಿ ನಿತ್ಯ ಪ್ರಾರ್ಥಿಸುವ, ಹಾರೈಸುವ ಸಮಾಜ ಮುಖೀ ಚಿಂತನೆಯ, ನವತಿ ಸಂಭ್ರಮದಲ್ಲಿರುವ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಹಾರ್ಥಿಕ ಶುಭಾಶಯಗಳು ಮತ್ತು ಪ್ರಣಾಮಗಳು. (ಚಿತ್ರ ಸಂಗ್ರಹ : ಮಂಜು ನೀರೇಶ್ವಾಲ್ಯ)

Write A Comment