ಕನ್ನಡ ವಾರ್ತೆಗಳು

ಉಡುಪಿಯಲ್ಲೂ ಗನ್ ಡೀಲ್…?; ಪಿಸ್ತೂಲು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ; ಡಿಸಿಐಬಿ ಪೊಲೀಸರ ಕಾರ್ಯಾಚರಣೆ

Pinterest LinkedIn Tumblr

ಉಡುಪಿ: ಇಬ್ಬರು ಖದೀಮರು ಪಿಸ್ತೂಲು  ಮಾರಾಟಕ್ಕಾಗಿ ಗ್ರಾಮೀಣ ಪ್ರದೇಶವಾದ  ಬ್ರಹ್ಮಾವರ ಠಾಣೆ ವ್ಯಾಪ್ತಿಯ ಯಡ್ತಾಡಿ ಎಂಬಲ್ಲಿ ತಮ್ಮ ಹಂಕ್ ಬೈಕಿನಲ್ಲಿ ತಿರುಗುವುದರ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ.

ಕೋಟೇಶ್ವರ ಹಳೆಅಳಿವೆ ನಿವಾಸಿ  ಯೋಗೀಶ (29) ಹಾಗೂ ಕುಂದಾಪುರ ಫೆರಿ ರಸ್ತೆ ನಿವಾಸಿ  ಸೊಹೆಲ್ (29) ಬಂಧಿತ ಆರೋಪಿಯಾಗಿದ್ದಾರೆ. ಆರೋಪಿಗಳಿಂದ ಒಂದು ಪಿಸ್ತೂಲ್, 7 ಸಜೀವ ಗುಂಡುಗಳು (ರೌಂಡ್ಸ್), 3 ಮೊಬೈಲ್ ಫೋನ್‌, ಹೀರೊ ಹೊಂಡಾ ಹಂಕ್ ಬೈಕ್  ಸೇರಿದಂತೆ ಅಂದಾಜು 1,34,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

Udupi_Police_News-3 Udupi_Police_News. Udupi_Police_News

ಗ್ರಾಮೀಣ ಪ್ರದೇಶದಲ್ಲಿ ಗನ್?: ಬೆಂಗಳೂರಿನಲ್ಲಿ ಹಾಸ್ಟೆಲ್ ಸಿಬ್ಬಂದಿಯೋರ್ವ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆಗೈದ ಪ್ರಕರಣ ಎಲ್ಲೆಡೆ ಕೇಳಿ ಬರುತ್ತಿರುವಾಗಲೇ ಕರಾವಳಿಯಲ್ಲೂ ಪಿಸ್ತೂಲಿನಂತಹ ಮಾರಣಾಂತಿಕ ವಸ್ತುಗಳ ಮಾರಾಟ ಜಾಲ ಸಕ್ರೀಯವಾಗಿದೆಯೇ ಎಂಬ ಅನುಮಾನಗಳು ಎಲ್ಲೆಡೆ ಕೇಳಿಬರುತ್ತಿದೆ. ತೀರಾ ಕುಗ್ರಾಮವಾದ ಯಡ್ತಾಡಿಯಲ್ಲಿ ಆರೋಪಿಗಳಿಬ್ಬರು ಯಾರಿಗೆ ಪಿಸ್ತೂಲು ಮಾರಾಟ ಮಾಡಲು ಹೋಗಿದ್ದಾರೆಂಬುದು ಒಂದೆಡೆಯಾದರೇ ಕುಂದಾಪುರದ ಈ ಯುವಕರಿಗೆ ಗನ್ ಸಪ್ಪ್ಲೈ ಮಾಡುತ್ತಿರುವ ಕಾಣದ ಕೈಗಳು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ.  ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಬಯಲಿಗೆಳೆಯಬೇಕಾಗಿದೆ.

ಕಾರ್ಯಾಚರಣೆಯಲ್ಲಿ ಇವರಿದ್ದರು: ಉಡುಪಿ ಜಿಲ್ಲೆ ಎಸ್ಪಿ ಕೆ.ಅಣ್ಣಾಮಲೈ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಹಾಗೂ ಉಡುಪಿ ಡಿವೈಎಸ್ಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್ ಜೈಶಂಕರ್‌ಅವರು ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ಸಂತೋಷ್ ಅಂಬಾಗಿಲು, ಸಂತೋಷ ಕುಂದರ್, ಪ್ರವೀಣ, ರಾಘವೇಂದ್ರ ಉಪ್ಪುಂದ, ಥಾಮ್ಸನ್ ಮತ್ತು ಚಂದ್ರಶೇಖರ ಮೊದಲಾದವರಿದ್ದರು.

ಆರೋಪಿಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. 

Write A Comment