ಮೂಲ್ಕಿ,ಎಪ್ರಿಲ್.03 : ಹಳೆಯಂಗಡಿ ಬಳಿಯ ಪಡುಪಣಂಬೂರು ಕಲ್ಲಾಪುವಿನ ಮೂಡುತೋಟದ ಫಕೀರ ಬ್ಯಾರಿ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೋಟ್‌ನಿಂದ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.ಬೆಂಕಿಯು ಮನೆಯ ಮೇಲ್ಛಾವಣಿಯನ್ನೆ ಸುಟ್ಟಿದ್ದು ಕದ್ರಿ ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ಹತೋಟಿಗೆ ತಂದರು. ಮನೆಗೆ ನೀಡಿರುವ ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ದೊಷದಿಂದ ಬೆಂಕಿ ಕಾಣಿಸಿಕೊಂಡಿತ್ತಲ್ಲದೇ ಅದು ಮನೆಯ ಮೇಲ್ಛಾವಣಿ ಸಹಿತ ಮುಚ್ಚಿಗೆ ಹಾಕಿರುವ ಮರದ ವಸ್ತುಗಳಿಗೆ ಬೆಂಕಿಯು ಹರಡಿ ಪಕ್ಕಾಸು ರೀಪು ಸಹಿತ ಎಲ್ಲವೂ ಸುಟ್ಟು ಕರಗಿತು.
ಹಳೆಯಂಗಡಿಯ ಜೈಕಿಶನ್ ಎಂಬುವರ ಪೂಜಾ ಅರೆಂಜರ್‍ಸ್‌ನವರು ನೀರಿನ ಟಾಂಕಿಯ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದು ಕೊನೆಗೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಈ ನಡುವೆ ಮನೆಯಲ್ಲಿದ್ದ ಕೋಣೆಗಳಲ್ಲಿ ಬೆಂಕಿಯ ಅನಾಹುತದಿಂದ ಹಲವಾರು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿದೆ.
ಮಹಿಳೆಯರ ಸಹಿತ ಮಕ್ಕಳಿರುವ ಫಕೀರ ಬ್ಯಾರಿಯವರ ಮನೆಯಲ್ಲಿ 10 ಮಂದಿ ವಾಸವಾಗಿದ್ದಾರೆ. ಅವರ ಗಂಡು ಮಕ್ಕಳು ವಿದೇಶದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದಾರೆ. ಬೆಂಕಿ ಕಂಡು ಬಂದರು ಮನೆಗಳಲ್ಲಿರುವ ಕೆಲವು ವಸ್ತುಗಳನ್ನು ಬೆಂಕಿಯ ನಡುವೆಯೇ ಸ್ಥಳೀಯ ಯುವಕರು ಹೊರತಂದರು. ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲೆಂಡರನ್ನು ಸಹ ಹೊತ್ತು ತರುವಲ್ಲಿ ಯಶಸ್ಸಾದರು.
ಸ್ಥಳೀಯ ಯುವಕರು ಮೂಲ್ಕಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಸಹಿತ ಸಿಬ್ಬಂದಿಗಳು ಹಾಗೂ ಗೃಹರಕ್ಷಕದಳದ ಮನ್ಸೂರ್ ಹಾಗೂ ಅವರ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಸಾಕಷ್ಟು ಶ್ರಮಿಸಿದರು.
ವರದಿ / ಚಿತ್ರ : ನರೇಂದ್ರ ಕೆರೆಕಾಡ್



