ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮ ‘ಬಾಂಧವ್ಯ ಹಾಗೂ ‘ವಿಶ್ವ ಬಂಟರ ಮಾಹಿತಿ ಕೋಶ’ ಮಾಹಿತಿ ಸಂಗ್ರಹಣೆಗೆ ಚಾಲನೆ, ಸಾಧಕರಿಗೆ ಸನ್ಮಾನ, ವಿಕಲ ಚೇತನರಿಗೆ ಸಹಾಯ ಹಸ್ತ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗುರುವಾರ ನಗರದ ಬಂಟ್ಸ್ ಹಾಸ್ಟೆಲ್ ಸಭಾಗಂಣದಲ್ಲಿ ಜರಗಿತು.
ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಮತ್ತು ‘ವಿಶ್ವ ಬಂಟರ ಮಾಹಿತಿ ಕೋಶ’ ಮಾಹಿತಿ ಸಂಗ್ರಹ ಕಾರ್ಯಕ್ರಮದ ಉದ್ಘಾಟನೆಯನ್ನು ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಅವರು ನೆರವೇರಿಸಿದರು. ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಪ್ರಗತಿಯನ್ನು ಸಾಸಿರುವುದರಿಂದ ಬಂಟ ಸಮುದಾಯ ಯಶಸ್ವಿ ಸಮುದಾಯವಾಗಿ ಮೂಡಿಬರಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಬಂಟರ ಸಂಘವು ಸಮಾಜಕ್ಕಾಗಿ ಕೆಲಸ ಮಾಡಬೇಕು. ಇವತ್ತು ಜಗತ್ತಿನ ಎಲ್ಲ ಬಂಟರ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದು, ಇದು ಅತ್ಯಂತ ಅಗತ್ಯವಾದ ಕೆಲಸವಾಗಿದ್ದು, ಇದರಲ್ಲಿ ಯಶಸ್ವಿಯಾಗಲಿ ಎಂದು ಐಜಿಪಿಯವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಸ್ತಾವಿಕ ಭಾಷಣ ಮಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈಯವರು, ಬಂಟ ಜನಾಂಗವು ತನ್ನದೇ ಆದ ವಿಶಿಷ್ಟ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ನಡೆ-ನುಡಿ ಯೊಂದಿಗೆ ಎಲ್ಲಾ ಜಾತಿ-ಮತ-ಬಾಂಧವರೊಂದಿಗೆ ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲರ ಪ್ರೀತ್ಯಾದರ, ವಿಶ್ವಾಸಗಳಿಗೆ ಪಾತ್ರರಾಗಿರುವವರು.
ಈ ಹಿಂದೆ ಹೆಚ್ಚಿನ ಸಮಾಜ ಬಾಂಧವರು ಅವಿಭಕ್ತ ಕುಟುಂಬದ ಮನೆಗಳಲ್ಲಿ ವಾಸಿಸುತ್ತಿದ್ದು ಅಲ್ಲಿ ಅವರಿಗೆ ಭದ್ರತೆ ಇತ್ತು. ಕಷ್ಟ ಸುಖಗಳನ್ನು ಹಂಚಿಕೊಳ್ಳುವ, ತ್ಯಾಗ, ಪ್ರೀತಿ, ವಿಶ್ವಾಸ, ಗೌರವ ಇತ್ಯಾದಿ ಉತ್ತಮ ವಿಷಯಗಳು ಅವಿಭಕ್ತ ಕುಟುಂಬದ ಬುನಾದಿಯಾಗಿತ್ತು. ಪರಿವರ್ತಿತ ಕಾಲಘಟ್ಟದಲ್ಲಿ ಹಾಗೂ ಅನಿವಾರ್ಯ ಕಾರಣಗಳಿಂದ ಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚಿನ ಮಟ್ಟಿಗೆ ನಶಿಸಿ ಹೋದಂತಾಯಿತು. ನಮ್ಮ ಸಮಾಜ ಬಾಂಧವರು, ಬಂಧುಗಳು ಹಾಗೂ ಊರಿನವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಜೀವನ ನಡೆಸುವ ರೀತಿಯಲ್ಲಿ ಅಮೂಲಾಗ್ರವಾದ ಬದಲಾವಣೆಯಾದ ಕಾರಣ ನಾವು ನಮ್ಮವರಿಂದ ದೂರವಾಗಿ ಅಣ್ಣ ತಮ್ಮಂದಿರ, ಅಕ್ಕ ತಂಗಿಯಂದಿರ ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪರಿಚಯ, ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ನಶಿಸಿ ಹೋಗುತ್ತಿದ್ದ ನೂರಾರು ದೇವಸ್ಥಾನ, ದೈವಸ್ಥಾನ, ನಾಗಬನ, ಬ್ರಹ್ಮಸ್ಥಾನ, ಗರಡಿಗಳು, ಶಾಲೆಗಳು, ಕೆರೆಗಳು, ಆಲಯಗಳು, ಇವೆಲ್ಲವುಗಳ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣ, ಪುನರುತ್ಥಾನ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸಮಾಜ ನಮ್ಮದು. ಇಂದು ನಶಿಸಿ ಹೋಗುತ್ತಿರುವ ನಮ್ಮ ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ‘ಬಾಂಧವ್ಯ’ ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಜೌದ್ಯೋಗಿಕ, ವೈವಾಹಿಕ, ಆರೋಗ್ಯ, ಕೃಷಿ, ವಸತಿ, ಸಾಂಸ್ಕೃತಿಕ ಹಾಗೂ ಒಟ್ಟು ಜೀವನದ ವ್ಯವಸ್ಥೆ, ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದೂರಗಾಮಿ ಪರಿಣಾಮವನ್ನು ಬೀರುವ ವಿಶ್ವ ಬಂಟರ ಮಾಹಿತಿ ಕೋಶವನ್ನು ತಯಾರು ಮಾಡಲು ಮುಂದಡಿ ಇಟ್ಟಿದ್ದೇವೆ.
ಮುಖ್ಯವಾಗಿ ವಿದ್ಯಾಭ್ಯಾಸ, ಉದ್ಯೋಗ, ವಧೂ-ವರರ ಅನ್ವೇಷಣೆ, ವೈದ್ಯಕೀಯ ಚಿಕಿತ್ಸೆ, ರಕ್ತದಾನ, ಅಂಗದಾನ, ಹಾಗೂ ಯಾವುದೇ ಸಮಸ್ಯೆ, ಸಂಕಷ್ಟದ ಸಮಯದಲ್ಲಿ ಸಹಾಯ ಅಥವಾ ಸಹಕಾರ ಪಡೆಯಲು, ವ್ಯಾಪಾರ ವ್ಯವಹಾರ, ಮಾರ್ಗದರ್ಶನ ಮಾಹಿತಿ ಪಡೆಯಲು ಈ ಮಾಹಿತಿ ಕೋಶವು ಖಂಡಿತವಾಗಿಯೂ ಉಪಯುಕ್ತವಾಗುತ್ತದೆ. ಸಹಾಯ ಸಹಕಾರದ ಅಗತ್ಯವಿರುವವರನ್ನು ಹಾಗೂ ಸಹಾಯ, ಸಹಕಾರ ನೀಡಲು ಶಕ್ತರಾಗಿರುವವರನ್ನು ಗುರುತಿಸುವ ಮೂಲಕ ಸಂಪರ್ಕ ಕೊಂಡಿಯಾಗಿ ಸುಖೀ ಸಮಾಜವನ್ನು ನಿರ್ಮಾಣ ಮಾಡುವ ಸದುದ್ದೇಶದೊಂದಿಗೆ ಕಾರ್ಯಪೃವತ್ತರಾಗಿದ್ದೇವೆ. ಒಂದು ಭವ್ಯ ಬಂಟ ಸಮಾಜಭವನದ ನಿರ್ಮಾಣ ಕಾರ್ಯವನ್ನು ಜೂನ್ ತಿಂಗಳ ನಂತರ ಪ್ರಾರಂಭಿಸಲಾಗುವುದು. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ಸೂರಿನಡಿ ಸೇರಿಸಿ ಜಾಗತಿಕ ಬಂಟರ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುವುದು.
ದೂರದೃಷ್ಟಿತ್ವವನ್ನು ಹೊಂದಿದ್ದ ಹಾಗೂ ತ್ಯಾಗಜೀವಿಗಳಾದ ನಮ್ಮ ಸಮಾಜದ ಹಿರಿಯರು ಬಂಟರ ಯಾನೆ ನಾಡವರ ಮಾತೃ ಸಂಘವನ್ನು ಸ್ಥಾಪಿಸಿ ಕಾಸರಗೋಡು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ತಾಲೂಕುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳನ್ನು ನಿರ್ಮಾಣ ಮಾಡಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲಾ ಜಾತಿ ಮತ ಬಾಂಧವರು ಜೊತೆಯಾಗಿ ಬಾಳಲು ಅವಕಾಶ ಮಾಡಿಕೊಟ್ಟು, ಒಂದು ವಿದ್ಯಾವಂತ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದರು. ಎಲ್ಲಾ ಜಾತಿ ಮತ ಬಾಂಧವರು ಅಭಿವೃದ್ಧಿಯ ಪಥದಲ್ಲಿ ಸಾಗಬೇಕು, ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂಬುವುದು ಸಂಘದ ಮೂಲೋದ್ದೇಶ.
ಅನುಕರಣೀಯ ಕೆಲಸ ಮಾಡಿದ ಹಿರಿಯರು ತೋರಿಸಿದ ದಾರಿದೀಪದ ಬೆಳಕಿನಲ್ಲಿ ನಡೆದುಕೊಂಡು ಹೋಗಿ ಒಂದು ಸಮೃದ್ಧ ಸುಖೀ ಸಮಾಜವನ್ನು ನಿರ್ಮಾಣ ಮಾಡಿ, ಎಲ್ಲರನ್ನೂ ಸೇರಿಸಿಕೊಂಡು ಸಮಾಜಮುಖಿ ಕೆಲಸಗಳಿಂದ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಿ ದೇಶದ ಸರ್ವತೋಮುಖವಾದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುವ ಸಲುವಾಗಿ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ -ಬಾಂಧವ್ಯ – ಎಂದು ಮಾಲಾಡಿ ಅಜಿತ್ ಕುಮಾರ್ ರೈಯವರು ಹೇಳಿದರು.
ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ಕಷಿ, ವಸತಿ, ಸಾಂಸ್ಕೃತಿಕ ಹಾಗೂ ಒಟ್ಟು ಜೀವನದ ವ್ಯವಸ್ಥೆ, ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ವಿಶ್ವ ಬಂಟರ ಮಾಹಿತಿ ಕೋಶ ಸಿದ್ಧಪಡಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಎ.ಬಿ. ಶೆಟ್ಟಿ ಸಭಾಂಗಣವನ್ನು ಕೆಡವಿ ಹೊಸದಾಗಿ ವಿಶಾಲವಾದ ಸಭಾಂಗಣ ನಿರ್ಮಾಣವಾಗಲಿದೆ. ಸಮಾಜದ ಎಲ್ಲ ವರ್ಗದವರನ್ನು ಒಂದೇ ಸೂರಿನಡಿ ಸೇರಿಸಿ ಜಾಗತಿಕ ಬಂಟರ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು. ಬಾಂಧವ್ಯದ ಸಂಕೇತವಾಗಿ ಎಲ್ಲ್ಲ ತಾಲೂಕು ಸಂಘಗಳ ಪದಾಕಾರಿಗಳು ಭತ್ತದ ತೆನೆಯನ್ನು ಮಾತೃ ಸಂಘದ ಅಧ್ಯಕ್ಷರಿಗೆ ನೀಡಿ ಮಾಹಿತಿ ಕೋಶದ ಫಾರಂನ್ನು ಮಾಲಾಡಿ ಅಜಿತ್ ಕುಮಾರ್ ರೈ ಪಡೆದುಕೊಂಡರು.
ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ.ನರೇಶ್ ಶೆಟ್ಟಿ, ಮುಂಬಯಿ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾಧಕರಿಗೆ ಚಿನ್ನದ ಪದಕ – ಗೌರವ
ಬಂಟ ಸಮುದಾಯದ 35 ಮಂದಿ ಹಿರಿಯ ಸಾಧಕರಿಗೆ ಚಿನ್ನದ ಪದಕದೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ವತಿಯಿಂದ ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿಕಲಚೇತನರಿಗೆ ಸಹಾಯದ ಮೊತ್ತವನ್ನು ಹಸ್ತಾಂತರಿಸಲಾಯಿತು. ಹಾಗೆಯೇ ಬಂಟ ಸಮುದಾಯದ ಪ್ರತಿಭಾವಂತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಹಿಳಾ ಘಟಕ: ಮಹಾ ಅವೇಶನದಲ್ಲಿ ಬಂಟರ ಸಂಘದ ಮಹಿಳಾ ಘಟಕ ಸ್ಥಾಪನೆ ಮಾಡಲಾಯಿತು. ಸ್ಥಾಪಕ ಅಧ್ಯಕ್ಷರಾಗಿ ಡಾ.ಆಶಾ ಜ್ಯೋತಿ ರೈ ಅವರನ್ನು ಆಯ್ಕೆ ಮಾಡಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘ(ರಿ),ದ.ಕ ಇದರ ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು.ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ವಂದಿಸಿದರು.ಸುಖೇಶ್ ಚೌಟ, ಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಸಿಎ. ಮನಮೋಹನ್ ಶೆಟ್ಟಿ ಮತ್ತಿತ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ಬಳಿಕ ಭಾರ್ಗವಿ ಉಡುಪಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.