ಮಂಗಳೂರು: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನ ತಹಸೀಲ್ದಾರರು ವಾರಕ್ಕೊಮ್ಮೆ ಕಾರ್ಯಪಡೆಯ ಸಭೆ ಕರೆದು ಪರಿಸ್ಥಿತಿಯ ಬಗ್ಗೆ ನಿರಂತರ ಅವಲೋಕಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪ್ರದೇಶಗಳ ಬಗ್ಗೆ ತುರ್ತು ಗಮನ ಹರಿಸಿ ಆದ್ಯತೆ ಮೇರೆಗೆ ಮುಂದಾಲೋಚನೆಯಿಂದ ಕಾರ್ಯಕ್ರಮ ರೂಪಿಸದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಯೊಂದು ವಿಧಾನಸಭೆ ವ್ಯಾಪ್ತಿಗೆ 40 ಲಕ್ಷ ರೂ.ವನ್ನು ಸರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನೀಡಿದ್ದು, ಕಾರ್ಯಪಡೆಯು ಅನುದಾನಕ್ಕೆ ತಕ್ಕ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, 40 ಲಕ್ಷ ರೂ.ವನ್ನು ಕಾರ್ಯಪಡೆ ಒಮ್ಮೆಗೆ ಖರ್ಚು ಮಾಡದೆ ಹಂತ ಹಂತವಾಗಿ ವಿನಿಯೋಗಿಸಬೇಕು ಹಾಗೂ ಕನಿಷ್ಠ 6 ಲಕ್ಷ ರೂ.ವನ್ನು ತುರ್ತು ಕಾಮಗಾರಿಗೆ ಮೀಸಲಿಡಬೇಕು ಎಂದರು. ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪ್ರದೇಶಗಳ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಪಟ್ಟಿ ತರಿಸಿಕೊಂಡು ಎಂಜಿನಿಯರಿಂಗ್ ಇಲಾಖೆಯಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಅಗತ್ಯ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕ ನೆಲೆಯಲ್ಲಿ ಆದಷ್ಟು ಶೀಘ್ರದಲ್ಲಿ ಒದಗಿಸಿಕೊಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ಸೂಚಿಸಿದರು. ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ 1.20 ಕೋಟಿ ರೂ. ಹಾಗೂ ಗ್ರಾಮೀಣ ಪ್ರದೇಶಾಭಿವೃದ್ಧಿ ಯೋಜನೆ ಅನ್ವಯ 2.80 ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಲಾಗಿದ್ದು, ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ತಾಕತ್‌ರಾವ್ ತಿಳಿಸಿದರು.
ಈ ವರೆಗೆ ನೀರಿನ ಸಮಸ್ಯೆ ತೀವ್ರವಾಗಿ ಕಾಡಿಲ್ಲದಿದ್ದರೂ, ಪೂರೈಕೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೋಟೆಕಾರ್, ಬೆಳ್ಮ, ಹರೇಕಳ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಳೆದ ವರ್ಷ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಂಟ್ವಾಳದಲ್ಲಿ 44 ಕೊಳವೆ ಬಾವಿಗಳಿಗೆ ಬೇಡಿಕೆ ಬಂದಿದ್ದು, 8 ಕೊಳವೆಬಾವಿ ಕೊರೆಯಿಸಲಾಗಿದೆ. ಪಜೀರು, ಬಾಳೆಪುಣಿ, ಕೈರಂಗಳದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಪುತ್ತೂರು ವಿಧಾನಸಭೆ ವ್ಯಾಪ್ತಿಯಲ್ಲಿ 40 ಲಕ್ಷ ರೂ.ನಲ್ಲಿ 44 ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಕಡಬದಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದ್ದು, ಸಮಸ್ಯೆ ಎದುರಾದ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಉಪ ಆಯುಕ್ತ ಕಾಂತರಾಜು ಮಾಹಿತಿ ನೀಡಿದರು. ಶಾಸಕ ಜೆ.ಆರ್. ಲೋಬೋ ಅವರು ಮಾತನಾಡಿ, ತುಂಬೆಯಿಂದ ಮಂಗಳೂರಿಗೆ ನೀರು ಪೂರೈಕೆಯಾಗುವ ಕೊಳವೆಗೆ ಅಲ್ಲಲ್ಲಿ ಗ್ರಾಮ ಪಂಚಾಯಿತಿಗೆ ಪೂರೈಕೆಯನ್ನು ಅಧಿಕೃತಗೊಳಿಸಬೇಕು ಹಾಗೂ ಅನಧಿಕೃತ ಸಂಪರ್ಕವಿರುವುದನ್ನು ಸರಿಪಡಿಸಬೇಕು ಎಂದರು.
ಸಚಿವ ಖಾದರ್ ಮಾತನಾಡಿ, ಅಡ್ಯಾರ್, ಅರ್ಕುಳ, ಪುದು ಪಂಚಾಯಿತಿಗೆ ಮನಪಾ ವ್ಯಾಪ್ತಿಯಿಂದ ಮೀಟರ್ ಅಳವಡಿಸಿ ನೀರು ನೀಡಿ, ಶುಲ್ಕ ಸಂಗ್ರಹಿಸಬಹುದು ಎಂದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಕಾಮಗಾರಿಗಳ ಕುರಿತು ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಅಂತರ್ಜಲ ಮಟ್ಟ ಕುಸಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಂತರ್ಜಲ ಮರುಪೂರಣ ಕ್ರಮಗಳನ್ನು ಮಹಾನಗರ ಪಾಲಿಕೆಗಳಲ್ಲಿ ನಡೆಸುವುದು ಕಡ್ಡಾಯವಾಗಿದ್ದು, ಅದನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಏ. 14ರಿಂದ ಮಲೇರಿಯಾ ಅಭಿಯಾನ:
ಎಚ್1 ಎನ್1 ಸಮಸ್ಯೆಯ ನಡುವೆಯೇ ಇದೀಗ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗೆ, ಕಾಲರಾ ಹಾಗೂ ಚಿಕನ್‌ಗುನ್ಯಾದಂತಹ ರೋಗಗಳ ಸಮಸ್ಯೆ ಎದುರಾಗಲಿದೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸುವುದು, ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಜತೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರ ಪಟ್ಟಿ ಮಾಡಿಕೊಂಡು ಸುರಕ್ಷಾ ಕ್ರಮಗಳನ್ನು ವಹಿಸಿಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಬೇಕು. ಮಾತ್ರವಲ್ಲದೆ ಮಲೇರಿಯಾವನ್ನು ನಿಯಂತ್ರಣದ ಹಿನ್ನೆಲೆಯಲ್ಲಿ ಏ. 14ರಿಂದ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಉಪಸ್ಥಿತರಿದ್ದರು.