ಮಂಗಳೂರು, ಎ.2: ವೆಂಡಿಂಗ್ ಝೋನ್ ರಚಿಸಲು ಜಾಗ ನಿಗದಿ ಮಾಡುವ ಹಾಗೂ ಗುರುತು ಚೀಟಿ ನೀಡುವ ಭರವಸೆ ನೀಡಿ ಕಳೆದ ಆರು ತಿಂಗಳಿನಿಂದ ಬೀದಿಬದಿ ವ್ಯಾಪಾರಸ್ಥರನ್ನು ಸತಾಯಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶಗೊಂಡ ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಮಾರು 300ಕ್ಕೂ ಮಿಕ್ಕಿದ ಬೀದಿಬದಿ ವ್ಯಾಪಾರಸ್ಥರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಹಾಗೂ ಮೇಯರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್‌ಕುಮಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಜೀವನಾಧಾರ ಹಕ್ಕುಗಳ ರಕ್ಷಣಾ ಮಸೂದೆ 2014ರ ಮೇ 1ರಂದು ಸಂಸತ್ತಿನಲ್ಲಿ ಅಂಗೀಕಾರಗೊಂಡು ದೇಶಾದ್ಯಂತ ಜಾರಿಗೊಂಡರೂ ಸ್ಥಳೀಯಾಡಳಿತಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಈ ಹಿಂದಿನ ಬಿಜೆಪಿ ಆಡಳಿತದಂತೆಯೇ ಪ್ರಸ್ತುತ ಕಾಂಗ್ರೆಸ್ ಆಡಳಿತವು ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಕೆಂಗಣ್ಣು ಬೀರುತ್ತಿದೆ. ದೇಶದ ಕಾನೂನನ್ನು ಜಾರಿ ಮಾಡಬೇಕಾದ ಮಂಗಳೂರು ಮಹಾನಗರ ಪಾಲಿಕೆ ಕಾನೂನನ್ನು ಉಲ್ಲಂಘಿಸಿದೆ.
ಒಂದೂವರೆ ವರ್ಷಗಳ ಹಿಂದೆ ಟೌನ್ ವೆಂಡಿಂಗ್ ಕಮಿಟಿ ರಚನೆಗೊಂಡಿದ್ದು, ನಾಲ್ಕು ಬಾರಿ ಸಭೆ ಸೇರಿ ಬೀದಿಬದಿ ವ್ಯಾಪಾರಸ್ಥರಿಗೆ ವೆಂಡಿಂಗ್ ಝೋನ್ ರಚಿಸಲು ಜಾಗ ನಿಗದಿಯಾಗಿದ್ದರೂ, ಗುರುತು ಚೀಟಿ ಮುದ್ರಣಗೊಂಡರೂ ಬೀದಿಬದಿ ವ್ಯಾಪಾರಸ್ಥರಿಗೆ ಇನ್ನೂ ವಿತರಿಸಿಲ್ಲ. ಕಳೆದ 6 ತಿಂಗಳಿನಿಂದ ಟೌನ್‌ವೆಂಡಿಂಗ್ ಕಮಿಟಿಯ ಸಭೆಯೇ ನಡೆದಿಲ್ಲ ಎಂದು ಸುನೀಲ್ ದೂರಿದರು.
ಈ ಕೂಡಲೇ ಟೌನ್‌ವೆಂಡಿಂಗ್ ಕಮಿಟಿ ಸಭೆ ಕರೆಯಬೇಕು, ಬೀದಿಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿಯನ್ನು ತಕ್ಷಣ ನೀಡಬೇಕು, ಬೀದಿಬದಿ ವ್ಯಾಪಾರಸ್ಥರ ಮೇಲೆ ದೈಹಿಕ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ದಾಳಿ ನಡೆಸಿದ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರ ವಸ್ತುಗಳನ್ನು ವಾಪಸು ನೀಡಬೇಕು, ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ದಾಳಿ ನಡೆಸಬಾರದು ಎಂದು ಸುನೀಲ್‌ಕುಮಾರ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಜು ಮೊಗೇರ ಸ್ಥಳಕ್ಕಾ ಗಮಿಸಿ ಎಪ್ರಿಲ್ 15ರೊಳಗೆ ಟೌನ್ ವೆಂಡಿಂಗ್ ಕಮಿಟಿ ಸಭೆ ಕರೆಯುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂ ಪಡೆಯಲಾಯಿತು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ದಾಳಿ ನಡೆಸಬಾರದು ಎಂದು ಬೀದಿಬದಿ ವ್ಯಾಪಾರಸ್ಥರು ಒಕ್ಕೊರಳಿನಿಂದ ಮನಪಾಕ್ಕೆ ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಇತರ ಮುಖಂಡರಾದ ಮುಹಮ್ಮದ್ ಆಸಿಫ್, ಅಣ್ಣಯ್ಯ ಕುಲಾಲ್, ರಿತೇಶ್ ಪೂಜಾರಿ, ಅಬ್ದುಲ್ ಮಾಲಿಕ್, ಹಸನ್ ಮಾಡೂರು, ಶೋಭಾ, ನಟರಾಜ್, ಹಮೀದ್ ಬಿ.ಸಿ.ರೋಡ್, ಮೇರಿ ಡಿಸೋಜ, ಮೇಬಲ್ ಡಿಸೋಜ, ಝಾಕಿರ್ ಹುಸೈನ್, ಆದಂ, ಚೆರಿಯೋನ್ ಮುಂತಾದವರು ಹೋರಾಟದ ನೇತೃತ್ವ ವಹಿಸಿದ್ದರು.