ಕನ್ನಡ ವಾರ್ತೆಗಳು

ಜೀ ಕನ್ನಡ ವಾಹಿನಿಯಲ್ಲಿ ವಿನೂತನ ರಿಯಾಲಿಟಿ ಶೋ – ಸಿಂಪಲ್ಲಾಗೊಂದ್ ಸಿಂಗಿಂಗ್

Pinterest LinkedIn Tumblr

simplgi_singing_photo_2

ಬೆಂಗಳೂರು: ಜೀ ಕನ್ನಡ ವಾಹಿನಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಈಗಾಗಲೇ ಅಪಾರ ಸಂಖ್ಯೆಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ವಿಶೇಷವಾಗಿ ಕಾರ್ಯಕ್ರಮ ವಿಭಾಗದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು ಅವುಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ‘ಡಿವೈಡೆಡ್’ ಮತ್ತು ‘ಲೈಫ್ ಸೂಪರ್ ಗುರೂ’ ಕಾರ್ಯಕ್ರಮಗಳೂ ಸೇರಿವೆ. ಈ ಪ್ರಯತ್ನಕ್ಕೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ವಾಹಿನಿಯ ಜವಾಬ್ದಾರಿ ಕೂಡಾ ಹೆಚ್ಚಿದೆ.

ನೋಡುಗರ ನಿರೀಕ್ಷೆಗೆ ಅನುಗುಣವಾಗಿ ನಾವೀಗ ಸಿಂಪಲ್ಲಾಗೊಂದ್ ಸಿಂಗಿಂಗ್ (SINGING) ಶೋ ಎಂಬ ಮತ್ತೊಂದು ವಿನೂತನ ರಿಯಾಲಿಟಿ ಶೋ ಪ್ರಾರಂಭಿಸುತ್ತಿದ್ದೇವೆ. ಅರುಣ್ ಸಾಗರ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಈ ಶೋನಲ್ಲಿ ಒಟ್ಟು ನಾಲ್ಕು ರೌಂಡ್ ಗಳಿರುತ್ತದೆ.

ಮೊದಲನೇ ರೌಂಡ್ ನ ಹೆಸರು ಗಾನಾ ಬಜಾನಾ ಇದರಲ್ಲಿ ಸ್ಪರ್ಧಿಯು ವಿದೇಶಿಯರೊಬ್ಬರು ಹಾಡುವ ಕನ್ನಡ ಹಾಡನ್ನು ಕೇಳಿಸಿಕೊಂಡು ಸರಿಯಾದ ಸಾಹಿತ್ಯದೊಂದಿಗೆ ಹಾಡಬೇಕಾಗುತ್ತದೆ. ಈ ರೌಂಡ್ ನಲ್ಲಿ ಒಟ್ಟು 4 ಸುತ್ತುಗಳಿದ್ದು ಪ್ರತಿ ಸುತ್ತಿಗೂ 2500 ರೂ ಬಹುಮಾನ ಗೆಲ್ಲಬಹುದು.

simplgi_singing_photo_1

ಎರಡನೇ ರೌಂಡ್ನ ಹೆಸರು ಚಿತ್ರಗೀತೆ. ಇಲ್ಲಿ ಯಾವುದಾದರೊಂದು ಹಾಡಿಗೆ ಸಂಬಂಧಿಸಿದಂತೆ ಒಂದಷ್ಟು ಫೋಟೋಗಳನ್ನು ತೋರಿಸಲಾಗುತ್ತೆ. ಅಂದರೆ ನಾ ಬೋರ್ಡು ಇರದ ಬಸ್ಸುನು..’ ಹಾಡಿಗೆ ಒಂದು ಬೋರ್ಡು ಮತ್ತು ಬಸ್ಸಿನ ಫೋಟೋ ತೋರಿಸಲಾಗುತ್ತೆ. ಅದನ್ನು ನೋಡಿ ಹಾಡನ್ನು ಹಾಡಬೇಕಾಗುತ್ತೆ. ಇಲ್ಲೂ ಕೂಡಾ ನಾಲ್ಕು ಸುತ್ತುಗಳಿದ್ದು ಪ್ರತಿ ಸುತ್ತಿಗೂ 5000 ಸಾವಿರ ರೂ ಬಹುಮಾನವಿರುತ್ತದೆ.

ಮೂರನೇ ರೌಂಡ್ ನ ಹೆಸರು – ಮಿಸ್ಸಿಂಗ್ ಲಿರಿಕ್. ಇಲ್ಲಿ ಒಂದು ಹಾಡನ್ನು ಹಾಡಿಸಿ ಮಧ್ಯದಲ್ಲಿ ಅದರ ಒಂದು ಸಾಲು ಸಾಹಿತ್ಯವನ್ನು ಮ್ಯೂಟ್ ಮಾಡಲಾಗುತ್ತೆ. ಸ್ಪರ್ಧಿಗಳು ಹಾಗೆ ಮ್ಯೂಟ್ ಆಗಿರೋ ಸಾಹಿತ್ಯದ ಸಾಲನ್ನು ಗ್ರಹಿಸಿ ಹಾಡಬೇಕು. ಇದು 2 ಸುತ್ತಿನ ಸ್ಪರ್ಧೆಯಾಗಿದ್ದು ಪ್ರತಿ ಸುತ್ತಿಗೂ ಹತ್ತು ಸಾವಿರ ರೂಪಾಯಿಯ ಬಹುಮಾನವಿರುತ್ತದೆ.

ಕೊನೆಯ ಸುತ್ತಿನ ಹೆಸರು ಹಾಡು ನಿಮ್ಮ ಪಾಡು. ಇದೊಂದು ಆಕರ್ಷಕ ಸುತ್ತಾಗಿದ್ದು. ಇಲ್ಲಿ ಸ್ಪರ್ಧಿಗೆ ಹಾಡನ್ನು ಹಾಡಲು ಕೊಟ್ಟು ಹಾಗೆ ಹಾಡುವಾಗ ಇನ್ನೊಬ್ಬ ವ್ಯಕ್ತಿ ಅವರರು ಹಾಡದಂತೆ ಅಡ್ಡಿಪಡಿಸುತ್ತಾನೆ. ಈ ಅಡಚಣೆಯ ನಡುವೆಯೇ ಸ್ಪರ್ಧಿ ಹಾಡನ್ನು ಹಾಡಬೇಕು. ವಿಶೇಷ ಅಂದರೆ ಈ ಸುತ್ತಿನ ವಿಜೇತರನ್ನು ಆಯ್ಕೆ ಮಾಡುವ ಅವಕಾಶವಿರುವುದು ವೀಕ್ಷಕರಿಗೆ! ಇದು ಕೇವಲ ಒಂದು ಸುತ್ತಿನ ಸ್ಪರ್ಧೆಯಾಗಿದ್ದು ಇಪ್ಪತ್ತೈದು ಸಾವಿರ ರೂ ಬಹುಮಾನದ ಸುತ್ತಾಗಿರುತ್ತದೆ. ನಾಲ್ಕು ಸುತ್ತಿನ ಒಟ್ಟು ಬಹುಮಾನ ಒಂದು ಲಕ್ಷ ರೂಪಾಯಿಯಾಗಿರುತ್ತದೆ.

simplgi_singing_photo_3

ಎಂಜಲ್ ಮಿಡಿಯಾ ವರ್ಕ್ಸ್ ಪ್ರೊಡಕ್ಷನ್ ಸಂಸ್ಥೆ ಸಿಂಪಲ್ಲಾಗೊಂದ್ SINGING ಶೋ ರಿಯಾಲಿಟಿ ಶೋ ವನ್ನು ನಿರ್ಮಾಣ ಮಾಡುತ್ತಿದ್ದು ಏಪ್ರಿಲ್ 4ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10 ಕ್ಕೆ ಈ ಶೋ ಪ್ರಸಾರವಾಗಲಿದೆ. ಈ ಕಾನ್ಸೆಪ್ಟ್ ನಲ್ಲಿರುವ ವಿಶೇಷತೆ ನೋಡುಗರಿಗೆ ಇಷ್ಟವಾಗುತ್ತೆ ಮತ್ತು ವಾಹಿನಿಯ ಯಶಸ್ವಿ ಕಾರ್ಯಕ್ರಮಗಳ ಸಾಲಿಗೆ ಇದೂ ಕೂಡಾ ಸೇರಲಿದೆ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬಿಜಿನಸ್ ಹೆಡ್ ಸಿಜು ಪ್ರಭಾಕರನ್ ಮತ್ತು ಪ್ರೊಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು.

Write A Comment