ಮಂಗಳೂರು: 2014ರ ಮೇ 22ರಂದು ಹಾಡಹಗಲೇ ಬರ್ಬರವಾಗಿ ಕೊಲೆಯಾದ ಕುಖ್ಯಾತ ರೌಡಿ ಜಗದೀಶ್ ಅಲಿಯಾಸ್ ತಲವಾರು ಜಗ್ಗನ ಏಕಮಾತ್ರ ಪುತ್ರ ವರುಣ್ ಯಾನೇ ಸಂಜಯ್ ಹತ್ಯೆ ಪ್ರತೀಕಾರವಾಗಿ ಮತ್ತೆ ಕೊಲೆ ಆರೋಪಿಯೋರ್ವನ ಮನೆ ಮೇಲೆ ದಾಳಿಯಾಗಿದೆ. ಘಟನೆ ಉರ್ವ ಠಾಣಾ ವ್ಯಾಪ್ತಿಯಲ್ಲಿ ಸಂಭವಿ ಸಿದ್ದು ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾತ್ರಿ ಸುಮಾರು 11 ಗಂಟೆಗೆ ತಲವಾರು, ಕಬ್ಬಿಣ ರಾಡ್ ಹಾಗೂ ಮರದ ದೊಣ್ಣೆಯೊಂದಿಗೆ ವಿದ್ಯಾ ಎಂಬವರ ಮನೆಗೆ ನುಗ್ಗಿದ ಜಗ್ಗ ಯಾನೆ ತಲವಾರು ಜಗ್ಗ, ಮಹೇಶ, ಕೀರ್ತನ್, ದೀಕ್ಷಿತ್, ರಾಜೇಶ್ ಹಾಗೂ ಮೋಹಿತ್‍ರವರು ಮನೆ ಮುಂದೆ ಇದ್ದ ಬಕೆಟ್‍ಗಳನ್ನು ಹುಡಿ ಮಾಡಿದ್ದರು. ಬಳಿಕ ಮನೆಯೊಳಗೆ ನುಗ್ಗಿ ಅವರಲ್ಲಿ ಅಭಿ ಎಲ್ಲಿ , ಆತನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿದರು. ಬಳಿಕ ಜಗ್ಗ ಹಾಗೂ ಇತರರು ಕೈಯಲ್ಲಿದ್ದ ತಲವಾರು, ರಾಡ್‍ಗಳಿಂದ ಮನೆಯ ಕಿಟಕಿಗಳ ಗ್ಲಾಸಿಗೆ ಹೊಡೆದು ಹಾನಿ ಮಾಡಿದರು. ಪಕ್ಕದ ಮನೆಯಲ್ಲಿ ರುವ ವಿದ್ಯಾ ಅವರ ಸಹೋದರ, ರಿಕ್ಷಾ ಚಾಲಕ ಅರುಣ್ ಅವರು ಬೊಬ್ಬೆ ಕೇಳಿ ಆಗಮಿಸಿದ್ದು ದಾಂಧಲೆ ನಡೆಸುತ್ತಿರುವುದನ್ನು ಆಕ್ಷೇಪಿಸಿದರು. ಆಗ ಅವರ ಮೇಲೂ ಜಗ್ಗ ತಲವಾರಿ ನಿಂದ ಕಡಿಯಲು ಮುಂದಾದಾಗ ತಪ್ಪಿಸಿಕೊಂಡಿದ್ದು ಬಲಗೈ ಅಂಗೈಗೆ ಗಾಯವಾಗಿದೆ. ಘಟನೆಯಲ್ಲಿ ಕಿಟಕಿಯ ಗಾಜುಗಳು ಹುಡಿಯಾಗಿದ್ದು ಸುಮಾರು 15,000 ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಗೆ ಪ್ರತೀಕಾರ: ಕೆಲವು ಸಮಯದ ಹಿಂದೆ ಜಗ್ಗನ ಪುತ್ರ ವರುಣನ ಕೊಲೆಯಾಗಿದ್ದು, ಅಭಿ ಯಾನೆ ಅಭಿಲಾಷ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಇದೇ ದ್ವೇಷವನ್ನು ಇಟ್ಟುಕೊಂಡು ಜಗ್ಗ ಹಾಗೂ ಇತರ ಸಹಚರರು ಅಭಿಯನ್ನು ಕೊಲ್ಲಲು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರುಣ್ ಅವರು ನೀಡಿರುವ ದೂರಿನನ್ವಯ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ರೌಡಿಸಂ ಜಗತ್ತಿನ ದೈತ್ಯ ತಲವಾರು ಜಗ್ಗನ ಏಕಮಾತ್ರ ಪುತ್ರ 20ರ ಹರೆಯದ ವರುಣ್ ಯಾನೆ ಸಂಜಯ್‍ನನ್ನು ಹುಟ್ಟುಹಬ್ಬದ ಸಡಗರದಲ್ಲಿದ್ದ ಮೇ 22ರಂದು ಹಾಡಹಗಲೇ ಉರ್ವ ಠಾಣಾ ವ್ಯಾಪ್ತಿಯ ಉರ್ವ ಕುದುರು ಕಲ್ಲುರ್ಟಿ ದೈವಸ್ಥಾನದ ಬಳಿ ಆತನ ಆಪ್ತಮಿತ್ರರೇ ಸೇರಿ ಚೂರಿಯಿಂದ ಇರಿದು ಕೊಂದಿದ್ದರು. ಹತ್ಯೆಗೆ ಸಂಬಂಧಪಟ್ಟ ಐವರು ನ್ಯಾಯಾಲಯಕ್ಕೆ ಶರಣಾಗಿದ್ದರು. ಅದರಂತೆ ಆರೋಪಿಗಳಾದ ಆಶ್ರಿತ್, ವಿಕ್ಕಿ, ಕಾರ್ತಿಕ್, ಅಭಿಲಾಷ್ ಮತ್ತು ಪುನೀತ್ ಎಂಬವರ ಬಂಧನವಾಗಿತ್ತು. ಈ ಪೈಕಿ ವರುಣ್ ಕೊಲೆ ಆರೋಪಿ ಅಭಿಲಾಷ್ ಮನೆ ಮೇಲೆ ಇದೇ 30ರ ತಡರಾತ್ರಿ 11.45ರ ಸುಮಾರಿಗೆ ದಾಳಿ ಯಾಗಿದೆ. ಬಂಧಿತರ ಪೈಕಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಪುನೀತ್ ಎಂಬಾತನ ಮೇಲೆ 2014ರ ಆಗಸ್ಟ್ ನಲ್ಲಿ ತಲವಾರು ಜಗ್ಗ, ಸುಲ್ತಾನ್ ಬತ್ತೇರಿ ರಾಜೇಶ್, ಬೋಳೂರು ಮೋಕ್ಷಿತ್ ಎಂಬವರ ಜೊತೆ ಸೇರಿ ಹ್ಯೊಗೆಬೈಲಿನಲ್ಲಿದ್ದ ಪುನೀತ್ ಮನೆ ಮೇಲೆ ದಾಳಿ ಮಾಡಿದ್ದರು. ಅಲ್ಲದೆ ಜಾಮೀನಿನ ಮೇಲೆ ಹೊರಬಂದ ಎರಡು ದಿನದಲ್ಲೇ ಗುಂಪೊಂದು ಪುನೀತ್ ಮೇಲೆ ತಲವಾರಿ ನಿಂದ ಹಲ್ಲೆಗೆತ್ನಿಸಿ ವಿಫಲವಾಗಿತ್ತು.
ಈಗ ಅದೇ ಜಗ್ಗನ ಗ್ಯಾಂಗ್ ಅಭಿಲಾಷ್ ಮನೆ ಮೇಲೆ ದಾಳಿ ಮಾಡಿದೆ. ರಾತ್ರೋರಾತ್ರಿ ಅಕ್ರಮವಾಗಿ ಅಭಿಲಾಷ್ ಮನೆ ಪ್ರವೇಶಿಸಿದ ಜಗ್ಗನ ಗ್ಯಾಂಗ್ ಅಭಿ ಎಲ್ಲಿದ್ದಾನೆ ಎಂದು ಪ್ರಶ್ನಿಸುತ್ತಲೇ ಮನೆ ದ್ವಂಸ ಕಾರ್ಯದಲ್ಲಿ ತೊಡಗಿತ್ತು. ವಿಚಾರಿಸಲು ಹೋದ ಅಭಿ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ ತಂಡ, ನಿನ್ನ ಮಗ ಎಲ್ಲಿ? ಅವನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಆವಾಝ್ ಹಾಕಿತ್ತು. ಅಲ್ಲದೆ ಅಭಿ ತಾಯಿಯನ್ನೇ ತಲವಾರಿನಿಂದ ಕಡಿಯಲು ತಂಡ ಯತ್ನಿಸಿದಾಗ ಅಭಿ ತಾಯಿಯ ಸಹೋದರ ಅರುಣ್ ತಡೆದಿದ್ದು, ಗ್ಯಾಂಗ್ ಅಟ್ಯಾಕ್‍ನಿಂದ ಅರುಣ್ ಅಂಗೈ ರಕ್ತಮಯವಾಗಿದೆ.
ಹಿಂದೆ ಪುನೀತ್ ಮೇಲಿನ ದಾಳಿ ಸಂದರ್ಭದಲ್ಲೇ, ಪೊಲೀಸರು ಆರೋಪಿಗಳ ಬೆನ್ನಹಿಂದೆ ಬಿದ್ದಾಗ ಸಿಕ್ಕಿಬಿದ್ದ ಜಗ್ಗ, ರಾಜೇಶ್, ಮೋಕ್ಷಿತ್, ಸುಲ್ತಾನ್ ಬತ್ತೇರಿ ರಾಜೇಶ್‍ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ, ವರುಣ್ ತಂದೆ ಜಗ್ಗ ರಿವೇಂಜ್‍ಗಾಗಿ ದಾಳಿ ಸಂಘಟಿಸುತ್ತಿದ್ದಾನೆ ಎಂಬ ಸತ್ಯ ಬೆಳಕಿಗೆ ಬಂದಿತ್ತು. ಅಲ್ಲದೆ ವರುಣ್ ಕೊಲೆಗೆ ಪ್ರತೀಕಾರ ತೀರಿಸುವುದಾಗಿ ಜಗ್ಗ ಪ್ರತಿಜ್ಞೆಗೈದಿದ್ದ. ಹತ್ಯೆಗೆ ಪ್ರತೀಕಾರವಾಗಿ ಕೊಲೆಗೆ ಕಾರಣರಾದ ಐವರನ್ನೂ ಕೊಲ್ಲಲು ಈ ಹಿಂದೆಯೇ ಜಗ್ಗನ ಗ್ಯಾಂಗ್ ಸಂಚೊಂದನ್ನು ರೂಪಿಸಿತ್ತು. ಇದೀಗ ಮತ್ತೆ ಪ್ರತೀಕಾರದ ದಾಳಿ ಮುಂದುವರೆದಿದೆ.

