ಮಂಗಳೂರು: ಜೆಟ್‌ಏರ್‌ವೇಸ್ ವತಿಯಿಂದ ಮಂಗಳೂರು-ಅಬುದಾಬಿ ನಡುವೆ ವಿಮಾನ ಭಾನುವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಯಾನ ಆರಂಭಿಸಿತು.ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಯು. ಟಿ. ಖಾದರ್, ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ. ಆರ್. ಲೋಬೋ, ಮೊಯ್ದೀನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಜೆಟ್‌ಏರ್‌ವೇಸ್ ಚೀಫ್ ಕಮರ್ಷಿಯಲ್ ಆಫೀಸರ್ ರಾಜ್ ಶಿವಕುಮಾರ್, ಜನರಲ್ ಮ್ಯಾನೇಜರ್ ಹರೀಶ್ ಶೆಣೈ ಉಪಸ್ಥಿತರಿದ್ದರು.
ಜೆಟ್ ಏರ್‌ವೇಸ್ ಸಂಸ್ಥೆಯ ಚೀಫ್ ಕಮರ್ಷಿಯಲ್ ಆಫೀಸರ್ ರಾಜ್ ಕುಮಾರ್ ಮಾತನಾಡಿ, ಜೆಟ್ ಏರ್‌ವೇಸ್ ಎರಡನೇ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿನಿಂದ ಆರಂಭಿಸಲಾಗಿದೆ. ಈಗಾಗಲೇ ದುಬೈಗೆ ಯಾನ ನಡೆಸಲಾಗುತ್ತಿದೆ. ದೇಶೀಯ ವಿಮಾನ ಯಾನ ಸೇರಿದಂತೆ ಒಟ್ಟು 10ವಿಮಾನಗಳನ್ನು ಮಂಗಳೂರಿನಿಂದ ಆಪರೇಟ್ ಮಾಡುತ್ತಿದೆ ಎಂದರು.
ಜೆಟ್ ಏರ್‌ವೇಸ್ ಸಂಸ್ಥೆಯು ಏತಿಹ್ಯಾಡ್ ಏರ್‌ವೇಸ್ ಸಂಸ್ಥೆಯ ಪಾಲುದಾರಿಕೆಯೊಂದಿಗೆ ವಾರದಲ್ಲಿ 350ಯಾನಗಳನ್ನು ಭಾರತದ 10ನಗರಗಳಿಂದ ನಡೆಸುತ್ತಿದೆ. ಜೆಟ್ ದೇಶ-ವಿದೇಶಗಳಲ್ಲಿ ಒಟ್ಟು 73 ಪ್ರದೇಶಗಳಿಗೆ ತಮ್ಮ ಸೇವೆಯನ್ನು ನೀಡುತ್ತಿದೆ. ಅಬುದುಬಾಯಿ, ಬೆಹರಿನ್, ಬ್ಯಾಂಕಾಕ್, ಕೊಲಂಬೊ, ದಮಾಮ್, ದೋಹಾ, ದುಬೈ, ಹಾಂಗ್‌ಕಾಂಗ್, ಜಿದ್ದಾ, ಕುವೈಟ್, ಲಂಡನ್, ಮಸ್ಕತ್, ನ್ಯೂಯಾರ್ಕ್, ಪ್ಯಾರಿಸ್, ಸಿಂಗಾಪುರ ಮುಂತಾದ ದೇಶಗಳ ನಡುವೆ ಯಾನ ನಡೆಸುತ್ತಿದೆ. ಗಲ್ಫ್ ರಾಷ್ಟ್ರಕ್ಕೆ 50 ವಿಮಾನಗಳ ಯಾನ ನಡೆಸುತ್ತಿದೆ ಎಂದರು.
ಮಂಗಳೂರಿನಿಂದ ಮುಂಬೈ, ಬೆಂಗಳೂರಿಗೆ ಈಗಾಗಲೇ ಯಾನ ನಡೆಸುತ್ತಿದ್ದು, ಚೆನ್ನೈ, ಹೈದರಾಬಾದ್‌ಗೆ ಹೊಸ ಯಾನ ಆರಂಭಿಸುವ ಕುರಿತು ಚಿಂತನೆ ಇದೆ. ಹಾಗೆಯೇ ದಮಾಮ್‌ಗೆ ನೇರ ವಿಮಾನ ಆರಂಭಿಸುವ ಉದ್ದೇಶವಿದ್ದು, ಈ ಬಗ್ಗೆ ಮಾರುಕಟ್ಟೆ ಅಧ್ಯಯನ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಹರೀಶ್ ಶೆಣೈ ಉಪಸ್ಥಿತರಿದ್ದರು.