ಕುಂದಾಪುರ: ವಾರಾಹಿ ನೀರಾವರಿ ನಿಗಮವು ಹೊಳೆಶಂಕರನಾರಾಯಣದಲ್ಲಿರುವ ಮುಖ್ಯ ಅಣೆಕಟ್ಟಿಯಿಂದ ಪ್ರಾಯೋಗಿಕ ಪ್ರಯತ್ನವಾಗಿ ಕಾಲುವೆಗೆ ನೀರು ಹರಿಸಿದ್ದು, ಎಪ್ರಿಲ್ ಅಂತ್ಯದೊಳಗಾಗಿ ಕಾಲುವೆಗೆ ನೀರು ಹರಿಸುವ ಕುರಿತು ಈ ಹಿಂದೆ ಸಚಿವತ್ರಯರು ನೀಡಿದ ಭರವಸೆ ಈಡೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ರೈತರಲ್ಲಿ ಆಶಾವಾದ ಮೂಡಿದೆ.
ಭಾನುವಾರ ಹೊಳೆಶಂಕರನಾರಾಯಣ ಮುಖ್ಯ ಅಣೆಕಟ್ಟಿಯಿಂದ ಎಡದಂಡೆಯ 0-36 ಕಿಮೀ ತನಕರು ಬಂದಿದ್ದು, ಈ ಬಗ್ಗೆ ರೈತರು ಫುಲ್ ಕುಶ್ ಆಗಿದ್ದಾರೆ.
ರೈತ ಹೋರಾಟಕ್ಕೆ ಸಿಕ್ಕ ಜಯ: ವಾರಾಹಿ ಯೋಜನೆ ಶೀಘ್ರ ಮುಕ್ತಾಯಗೊಳಿಸಿ ಕಾಲುವೆಗೆ ನೀರು ಹರಿಸಬೇಕೆಂಬ ನಿಟ್ಟಿನಲ್ಲಿ ಕಳೆದ 35 ವರ್ಷಗಳಿಂದ ಅದೇಷ್ಟೋ ಪ್ರತಿಭಟನೆಗಳು ನಡೆದಿದೆ. ಅಂತೆಯೇ ಕಾಲುವೆಗೆ ನೀರು ಹರಿಸಬೇಕೆಂಬ ಆಗ್ರಹದೊಂದಿಗೆ 2015ರ ಜ.1ರಿಂದ ಉಡುಪಿ ಜಿಲ್ಲಾ ರೈತ ಸಂಘ ನಡೆಸಿದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿತ್ತು. ಸತತ 15 ದಿನಗಳ ಕಾಲ ನಡೆದ ಹೋರಾಟದಲ್ಲಿ ವಿವಿಧ ಸಂಘಸಂಸ್ಥೆಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಪಾಲ್ಘೊಂಡು ಹೋರಾಟಕ್ಕೆ ಇನ್ನಷ್ಟು ಬಲ ನೀಡೀದ್ರು.
ಬಳಿಕ ರಾಜ್ಯ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಅರಣ್ಯ ಸಚಿವ ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಏಪ್ರಿಲ್ ಅಂತ್ಯದೊಳಗೆ ವಾರಾಹಿ ಕಾಲುವೆ ಯಲ್ಲಿ ನೀರು ಹರಿಸುವ ಭರವಸೆ ನೀಡಿದ ಮೇರೆಗೆ ರೈತರು ಹೋರಾಟ ಹಿಂಪಡೆದುಕೊಂಡಿದ್ದರು.
ವಾರಾಹಿ ಯೋಜನೆ: ಉಡುಪಿ ತಾಲೂಕು ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಅದರೊಂದಿಗೆ ಈ ಭಾಗದ ಕಬ್ಬು ಬೆಳೆಗಾರರ ಕೃಷಿ ಜಮೀನಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಜನ್ಮ ತಳೆದ ವಾರಾಹಿ ನೀರಾವರಿ ಯೋಜನೆ 1979ರಲ್ಲಿ ಆರಂಭಗೊಂಡಿತ್ತು. ಆರಂಭಿಕ 9 ಕೋಟಿ ರೂ. ವೆಚ್ಚದ ಈ ಯೋಜನೆಗೆ ಈಗ 589 ಕೋಟಿ ರೂ. ವ್ಯಯವಾಗಿದೆ
ರೈತರ ಹೋರಾಟಕ್ಕೆ ಮನ್ನಣೆ ಸಿಕ್ಕಿದೆ. ರೈತರಿಗೆ ನೀಡಿರುವ ಭರವಸೆಯಂತೆ ಏಪ್ರಿಲ್ ಅಂತ್ಯದೊಳಗೆ ಅಧಿಕೃತವಾಗಿ ಕಾಲುವೆಗೆ ನೀರು ಹರಿಸಬೇಕು. ಸರಕಾರ ಸ್ಪಂದಿಸುವ ಎಲ್ಲಾ ಲಕ್ಷಣವಿದೆ.
-ಕೆ. ಪ್ರತಾಪಚಂದ್ರ ಶೆಟ್ಟಿ, ಅಧ್ಯಕ್ಷರು ಉಡುಪಿ ಜಿಲ್ಲಾ ರೈತ ಸಂಘ.
ಯೋಜನೆಯ ಮೊದಲನೇ ಹಂತದ ಕಾಲುವೆ ನಿರ್ಮಾಣದ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಪ್ರಾಯೋಗಿಕ ನೆಲೆಯಲ್ಲಿ ಕಾಲುವೆಯಲ್ಲಿ ನೀರು ಹರಿಯುವ ಮೂಲಕ ನಮ್ಮ ಪ್ರಯತ್ನಕ್ಕೆ ಫಲ ದೊರಕಿದೆ. ಕಾಲುವೆಗಳಿಗೆ ನೀರು ಹರಿಸುವ ಅಧೀಕ್ರತ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯುತ್ತದೆ.
– ನಟರಾಜ್ ವಾರಾಹಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್