ಪುತ್ತೂರು, ಮಾ.28: ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ ಆರರ ಹರೆಯದ ಬಾಲಕನನ್ನು ಅಪಹರಿಸಿರುವ ಘಟನೆ ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕನ ತಾಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಉಪ್ಪಿನಂಗಡಿ ಕಸ್ಬಾ ವ್ಯಾಪ್ತಿಯ ಕುಕ್ಕುಜೆ ನಿವಾಸಿ, ಅಂದುಕುಂಞಿ ಎನ್ನುವವರ ಪತ್ನಿ ಸಫೀನಾ ಕೆ.(27) ನಿನ್ನೆ ರಾತ್ರಿ 7.30ರ ಸುಮಾರಿಗೆ, ಅರಫಾ ಶಾಲೆಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿಯಾಗಿರುವ ತನ್ನ ಆರರ ಹರೆಯದ ಪುತ್ರ ಮೊಹಮ್ಮದ್ ದಿಲಾವರ್ ಗೆ ಮನೆಯಲ್ಲಿ ಪರೀಕ್ಷೆಗಾಗಿ ಅಭ್ಯಾಸ ಮಾಡಿಸುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿಳಿದ ಮೂವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಮನೆಯೊಳಕ್ಕೆ ನುಗ್ಗಿ ಮಹಮ್ಮದ್ ದಿಲಾವರ್ ನನ್ನು ಎಳೆದುಕೊಳ್ಳಲು ಮುಂದಾದಾಗ ತಾಯಿ ಸಫೀನಾ ತಡೆಯಲು ಮುಂದಾಗಿದ್ದರು. ಅಪರಿಚಿತ ವ್ಯಕ್ತಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ದೂಡಿ ಹಾಕಿ ಮಗುವಿನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಕ್ಕುಜೆಯ ಯೂಸುಫ್ ಅವರ ಪುತ್ರಿ ಸಫೀನಾ ರನ್ನು ಸುಮಾರು ಏಳು ವರ್ಷಗಳ ಹಿಂದೆ ಹಸಂತಡ್ಕ ಸಾರ್ಯ ನಿವಾಸಿ ಮಹಮ್ಮದರ ಪುತ್ರ ಅಂದುಕುಂಞಿಗೆ ಮದುವೆ ಮಾಡಿಕೊಡಲಾಗಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದ ಅಂದು ಕುಂಞಿ ವರ್ಷದ ಹಿಂದೆ ವಾಪಸಾಗಿದ್ದಾಗ ಸಫೀನಾಗೆ ವಿನಾಕಾರಣ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಸಫೀನಾ ಗಂಡನ ಮನೆ ತೊರೆದು ಮಗುವಿನೊಂದಿಗೆ ತವರು ಮನೆಯಲ್ಲಿ ಆಶ್ರಯ ಪಡೆದುಕೊಂಡು ಉಪ್ಪಿನಂಗಡಿಯ ಅರಫಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧ್ಯಾಪಕಿಯಾಗಿ ದುಡಿಯುತ್ತಾ ಮಗನನ್ನು ಸಾಕುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಮಗುವಿನ ಅಪಹರಣ ನಡೆದಿರಬೇಕೆಂದು ಶಂಕಿಸಲಾಗಿದೆ. ದುಷ್ಕರ್ಮಿಗಳ ಹಲ್ಲೆಯಿಂದ ಅಸ್ವಸ್ಥಗೊಂಡಿರುವ ಸಫೀನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.