ಕನ್ನಡ ವಾರ್ತೆಗಳು

ಮಾಡದ ತಪ್ಪಿಗೆ ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯಕ್ಕೊಳಗಾಗುವ ಮಂಗಳಮುಖಿಯರು

Pinterest LinkedIn Tumblr

bhec14padmini

– ಲಲಿತಾ ಕೆ. ಹೊಸಪ್ಯಾಟಿ
ತಾವು ಮಾಡದ ತಪ್ಪಿಗೆ ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯ, ಅವಮಾನಕ್ಕೆ ಈಡಾಗುತ್ತಾರೆ ಮಂಗಳಮುಖಿಯರು. ಕಾಡಿ–ಬೇಡುವುದನ್ನೇ ಬದುಕಾಗಿಸಿ ಕೊಳ್ಳುವವರದ್ದೇ ಸಿಂಹಪಾಲು. ಆದರೆ ಪದ್ಮಿನಿ ಪ್ರಕಾಶ್‌  ತಮಿಳಿನ ಲೋಟಸ್‌ ಟಿ.ವಿ.ಯಲ್ಲಿ ವಾರ್ತಾ ವಾಚಕಿ. ರಂಗಭೂಮಿ ಕಲಾವಿದೆ ಇಳಕಲ್ಲಿನ ಉಮಾರಾಣಿ, ಜೋಗತಿಯರಿಗೆ ನಾಟಕದ ತಾಲೀಮು ನೀಡಿ ಸಮಾಜದಲ್ಲಿ ಕಲಾವಿದರ ಸ್ಥಾನ ಪಡೆಯುವಂತೆ ಮಾಡಿದ್ದಾರೆ. ಬದಲಾವಣೆ ನಮ್ಮಿಂದಲೇ ಆಗಬೇಕು. ಅವರಿಂದಲ್ಲ…

ಉಮಾರಾಣಿ ಇಳಕಲ್ ಹೆಸರಾಂತ ಹಾಸ್ಯ ನಟಿ. ವೃತ್ತಿರಂಗಭೂಮಿ ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕದ ಪ್ರಮುಖ ನಾಟಕ ಕಂಪೆನಿಗಳಲ್ಲಿ ಹಾಸ್ಯ ನಟಿಯಾಗಿ, ಬಳ್ಳಾರಿ, ಕೊಪ್ಪಳ ಭಾಗದ ಹೈದ್ರಾಬಾದ್‌ ಕರ್ನಾಟಕದ ಜಿಲ್ಲೆಗಳ ಹಳ್ಳಿಗಳ ನಾಟಕಗಳಲ್ಲಿ ಎಲ್ಲ ಬಗೆಯ ಪಾತ್ರಗಳಲ್ಲಿ ಅಭಿನಯಿಸಿ ಪ್ರಖ್ಯಾತರಾಗಿದ್ದಾರೆ. ‘ನಾಟ್ಯರಾಣಿ ಕಲಾಸಂಘ’ ಕಟ್ಟಿಕೊಂಡು ಪುರುಷ ಪಾತ್ರಗಳನ್ನೂ ಮಹಿಳೆಯರಿಂದ ಪ್ರಯೋಗಿಸುತ್ತಾರೆ.  8ನೇ ವಯಸ್ಸಿಗೆ ಬಣ್ಣ ಹಚ್ಚಿದೆ. ಇದುವರೆಗೆ 4500 ನಾಟಕ ಪ್ರದರ್ಶನಗಳಲ್ಲಿ ಆಭಿನಯಿಸಿದ್ದಾರೆ. ಈಚೆಗೆ ಜೋಗತಿಯರಿಗೆ (ಮಂಗಳಮುಖಿ) ನಾಟಕದ ತರಬೇತಿ ನೀಡಿರುವ ಉಮಾರಾಣಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ

*ಮಂಗಳಮುಖಿಯರಿಗೆ  ನಾಟಕ ಕಲಿಸುವ ಆಸಕ್ತಿ ಹುಟ್ಟಿದ್ದು ಹೇಗೆ?
ನಾನು ಬಳ್ಳಾರಿ ಭಾಗದಲ್ಲಿ ನಾಟಕಗಳಲ್ಲಿ ಅಭಿನಯಿಸಲು ಹೋದಾಗ ಮರಿಯಮ್ಮನಹಳ್ಳಿಯಲ್ಲಿ ತಂಗುತ್ತಿದ್ದೆ. ಅಲ್ಲಿಯೇ ಸಾಕಷ್ಟು ನಾಟಕ ಪ್ರಯೋಗ ಆಗುತ್ತಿದ್ದವು. ಅಲ್ಲಿ ಕೊಡ ಹೊತ್ತು ಹಾಡಿ, ನರ್ತಿಸುತ್ತಿದ್ದ ಜೋಗತಿಯರನ್ನು ನೋಡಿದೆ. ಅವರು ಎಲ್ಲಮ್ಮನ ಹಾಡು ಹಾಡುತ್ತ ಅಭಿನಯಿಸುತ್ತಿದ್ದರು. ಅವರನ್ನು ನಾಟಕ ಆಡುವಿರೇನೇಂದು ಕೇಳಿದೆ. ಹೇಳಿಕೊಟ್ಟರೆ ಅಭಿನಯಿಸುವುದಾಗಿ ಹೇಳಿದರು. ಅಲ್ಲಿಂದ ಈ ಪಯಣ ಆರಂಭವಾಯಿತು.

*ಅವರೊಂದಿಗೇ ಇರುವುದು ಕಷ್ಟದ ನಿರ್ಧಾರವಾಗಿತ್ತೆ?
ಇಲ್ಲ, ನಾನು ಅವರನ್ನು ಬೇರೆಯೆಂದು ಕಾಣಲಿಲ್ಲ. ಅವರು ನನ್ನ ದೇವರು. ದೇವರಿಗೆ ಮಾಡುವ ಪೂಜೆಯೆಂದು ಭಾವಿಸಿಯೇ ತಾಲೀಮು ಶುರು ಮಾಡಿದೆ. ಅವರೊಳಗೆ ನಾನೂ ಒಬ್ಬಳಾದೆ.  ಅವರ ಮನಸ್ಸನ್ನು ಗೆದ್ದೆ. ಬೇರೆ ಎಂಬ ಭೇದ ದೂರವಾಯಿತು.

*ಈ ತರಬೇತಿಗೆ ಪ್ರೇರಣೆ ಏನು?
ಗ್ರಾಮೀಣ ವೃತ್ತಿ ನಾಟಕಗಳಲ್ಲಿ ಮರಿಯಮ್ಮನ ಹಳ್ಳಿ ಡಾ. ನಾಗರತ್ನಮ್ಮ  ದೊಡ್ಡ ಹೆಸರು. ಅವರು ಮೊದಲೇ ತಮ್ಮ ಮನೆಯಲ್ಲಿಯೇ ಸ್ವಲ್ಪ ಹಾಡು, ಕುಣಿತ, ಸಂಭಾಷಣೆಯನ್ನು ಅವರಿಗೆ ಕಲಿಸಿ ಮುನ್ನುಡಿ ಬರೆದಿದ್ದರು. ಆ ಸ್ಫೂರ್ತಿಯಿಂದ ನಾನು ಮರಿಯಮ್ಮನ ಹಳ್ಳಿಗೆ ಹೋಗಿ ಅವರೆಲ್ಲರ ಮನೆಯಲ್ಲಿಯೇ ಇದ್ದು  ಕಲಿಸಲು ಶುರುಮಾಡಿದೆ. ’ಜೋಗಮ್ಮಗೋಳಿಗೆ  ನಾಟಕ ಕಲಿಸ್ತಾಳಂತ..’ ವ್ಯಂಗವಾಡಿದವರೂ ಇದ್ದರು. ಆದರೆ ಕಲಿಸುವ ಹಟದಿಂದ ಹಿಂದೆ ಸರಿಯಲಿಲ್ಲ. ಅವರೂ ಕಲಿಯಲು ಹಿಂದೆ ಬೀಳಲಿಲ್ಲ. ವೃತ್ತಿ ನಾಟಕದ ಜಂಗಲ್ – ರಸ್ತಾ  ಪರದೆ ಹಾಗೂ ಹವ್ಯಾಸಿ ರಂಗಭೂಮಿಯ ಕಪ್ಪು ಬಿಳಿ ಪರದೆ ಬಳಸಿ ರಂಗ ಸಜ್ಜಿಕೆ ಮಾಡಿದೆವು.
*ಪದ್ಮಿನಿ ‘ಪ್ರಕಾಶ’

*ಜೋಗತಿಯರಿಗೆ ತರಬೇತಿ ನೀಡುವುದು ಸಮಸ್ಯೆಯೆನಿಸಿತ್ತೆ?
ಏನೂ ಇಲ್ಲ. ನಮ್ಮಲ್ಲಿ ಹೆಣ್ಣು ಗಂಡು ಭೇದ ಬರಲೇ ಇಲ್ಲ. ಹಾವ ಭಾವ ಹಾಗೂ ನೃತ್ಯಕ್ಕೆ ಹೆಜ್ಜೆ ಹಾಕುವುದನ್ನು ಸಹಜವಾಗಿಯೇ ಕಲಿಸಿದೆ. ಮಂಜಮ್ಮ ಜೋಗತಿ ನೃತ್ಯಕ್ಕೆ ಯಾರೂ ಸರಿಸಾಟಿ ಇಲ್ಲ. ಆಕೆಗೆ ರಾಜ್ಯೊತ್ಸವ ಪ್ರಶಸ್ತಿ ಬಂದಿದೆ. ಇವರೊಂದಿಗೆ ಗೌರಮ್ಮ, ರಾಮಕ್ಕ, ಕವಿತಾ,  ಎಲ್ಲಮ್ಮ ಜೋಗತಿಯರು ಜಾನಪದ ನೃತ್ಯ ಪ್ರದರ್ಶನಗಳನ್ನು ನೀಡಿದ್ದರು.

*ಹೆಚ್ಚು ಓದದಿರುವುದು ತೊಂದರೆ ಆಯಿತೆ?
ಓದಿದವರೂ ಅವರಲ್ಲಿ ಇದ್ದಾರೆ.  ‘ನೋಡೋಣ ನೀ ಹೆಂಗ ಕಲಿಸ್ತಿ, ನಾವು ಹೆಂಗ ಕಲತೀವಿ’ ಅಂತ ವಿಡಿಯೊ ಮಾಡಿಸಿದರು. ಕ್ಯಾಸೆಟ್ ನೋಡಿ ಮಂಜಮ್ಮ ಜೋಗತಿ ಭಾವುಕಳಾಗಿ ಅತ್ತಳು.  ‘ಉಮ್ಮಕ್ಕ ನೀನು ನಮ್ಮೊಳಗೆ ಬೆರೆತು ನಮ್ಮಂಗ ಆಗಿ ಕಲಿಸಲಿಕಿಲ್ಲಂದರ ನಮ್ಮ್ ಹತ್ತಿರ ಆ ಕಲೆ ಬರತಿರಲಿಲ್ಲ’ ಎಂದು ಒಪ್ಪಿಕೊಂಡಳು. ಚೌಡಕಿ ವಾದ್ಯದೊಂದಿಗೆ ರೇಣುಕ ಎಲ್ಲಮ್ಮ ನಾಟಕ ಮಾಡುವ ಸಂಪ್ರದಾಯ ಅವರಲ್ಲಿ ಈಗಾಗಲೇ ಇದೆ. ಆದರೆ ನಾನು ಕಲಿಸಿದ್ದು ಹೊಸ ಅನುಭವ. ವ್ಯತ್ಯಾಸ ಹೇಳಿಕೊಟ್ಟಾಗ ತೊಂದರೆ ಆಗಲಿಲ್ಲ. ಆಸಕ್ತಿಯಿಂದ ಸಂಭಾಷಣೆ ಕೇಳಿಸಿಕೊಂಡರು.. ‘ಹೋ..ಗ! ಹೋಗ್.. ಮಾಮಾ..’  ಅಂತ ಎಳೆದು ಹೇಳುವದನ್ನು ಕ್ರಮೇಣ ಬಿಟ್ಟರು.

*ನಿಮಗೆ ಪ್ರೇರಣೆ ಯಾರು? ಕಲಿಸಿದ ನಾಟಕ ಯಾವವು..?
ಮರಿಯಮ್ಮನಹಳ್ಳಿ ರಂಗಸಿರಿಯಾದ ನಾಗರತ್ನಮ್ಮನವರೇ ಕಾರಣ. ಸಂಘ ಸಂಸ್ಥೆಗಳಿಗೆ ಜೋಗತಿಯರು ನಾಟಕ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಟಕ ಅಕಾಡೆಮಿ ಅವರ ರಂಗಕಲೆ  ಪ್ರೋತ್ಸಾಹಿಸಬೇಕು ಎಂಬ ಉದ್ದೇಶವೂ ಇತ್ತು. ಮೋಹಿನಿ ಭಸ್ಮಾಸುರ 3 ಪ್ರಯೋಗ ಕಂಡಿದೆ. ಈಗ ಪಿ ಬಿ ಧುತ್ತರಗಿಯವರ ‘ಸಿಂಧೂರ ಲಕ್ಷ್ಮಣ’, ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ‘ಪ್ರಚಂಡ ರಾವಣ’ ತಯಾರಿ ನಡೆದಿದೆ.

*ಅವರು ಎದುರಿಗೆ ಬಂದರೆ ಅಪಶಕುನ.. ಎಂಬ ನಂಬಿಕೆ ಇದೆಯಲ್ಲಾ…?
ಅವರ ಹೆಸರೇ ಮಂಗಳಮುಖಿ. ಎಲ್ಲಾ ಶುಭಶಕುನವೇ.

*ಇದರಿಂದ ನಿಮ್ಮ ಕುಟುಂಬದ ಮೇಲೆ ಆದ ಪರಿಣಾಮ?
ನನಗೆ ಮೂರು ಜನ ಮಕ್ಕಳು. ಜೋಗತಿಯವರಲ್ಲಿ ಈ ನನ್ನ ಮಕ್ಕಳು ದೊಡ್ಡಮ್ಮ ಚಿಕ್ಕಮ್ಮನವರನ್ನು ಕಂಡಿದ್ದಾರೆ. ಮಗನಿಗೆ ರಾಖಿ ಕಟ್ಟಿ ವಾತ್ಸಲ್ಯ ತೋರಿದ್ದಾರೆ. ಇದರಿಂದ  ಆತ್ಮತೃಪ್ತಿ ಸಿಕ್ಕಿದೆ. ಅವರು ಹದಿನೈದು ಜನ ಮರಿಯಮ್ಮನಹಳ್ಳಿಯ ಒಂದೇ ಸೂರಿನಡಿ ಬದುಕು ಕಟ್ಟಿಕೊಂಡಿದ್ದಾರೆ. ಮೂಲ ಸೌಕರ್ಯ ಇಲ್ಲ. ನಾಟಕ ಅವರ ಹೊಟ್ಟೆ ತುಂಬಿಸುವುದಾದರೆ ಸಾರ್ಥಕ. ಅವರಿಗಾಗಿ ಯೋಜನೆಗಳಿವೆ ಎಂಬ ಅರಿವನ್ನು ಮೂಡಿಸಬೇಕು.  ಕಲೆಗೆ ಲಿಂಗ ಭೇದವಿಲ್ಲ ಎಂಬ ಸತ್ಯ ತಿಳಿದಿದ್ದೇನೆ. ನಾನು ಅವರೊಂದಿಗೆ ಒಡನಾಡಿರುವೆ. ಒಳಗಿರುವ ಆತ್ಮ ಗಂಡೂ ಅಲ್ಲ… ಹೆಣ್ಣೂ ಅಲ್ಲ…

ದೃಷ್ಟಿ ಬದಲಾಗಿದ್ದು
ಲೋಟಸ್‌ ಟಿ.ವಿ.ಯ ಕಾರ್ಯಕ್ರಮ ನಿರ್ವಾಹಕರಾದ ಸಂಗೀತ್‌ ಕುಮಾರ್‌ ಮತ್ತು ಸರವಣ್‌ ರಾಮ್‌ಕುಮಾರ್‌ ಒಮ್ಮೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿರುವಾಗ ತೃತೀಯ ಲಿಂಗಿಯೊಬ್ಬರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿಂತೆ. ಸಮಾಜ ತೃತೀಯ ಲಿಂಗಿಯನ್ನು ನಡೆಸಿಕೊಳ್ಳುತ್ತಿರುವ ಪರಿಗೆ ಬೇಸರಗೊಂಡ ಅವರು ಈ ವಿಷಯವನ್ನು ಸಂಸ್ಥೆಯ ಮುಖ್ಯಸ್ಥ ಜಿ.ಕೆ. ವಾಸನ್‌ ಅವರೊಂದಿಗೆ ಚರ್ಚಿಸಿ, ತೃತೀಯ ಲಿಂಗಿಯೊಬ್ಬರಿಗೆ ವಾರ್ತಾ ವಾಚನ ಅವಕಾಶ ಕಲ್ಪಿಸುವ ಸಲಹೆ ನೀಡಿದ್ದಾರೆ. ವಾಸನ್‌ ಅವರು ಒಪ್ಪಿಗೆ ಸೂಚಿಸಿದ ಮೇಲೆ ರೋಸ್‌ ವೆಂಕಟೇಶನ್‌ (ಸಾಫ್ಟ್‌ವೇರ್‌ ಎಂಜಿನಿಯರ್‌ ಮತ್ತು ಭಾರತದ ಮೊಟ್ಟ ಮೊದಲ ಟಿ.ವಿ. ಟಾಕ್‌ ಶೋನ ನಿರೂಪಕಿ) ಅವರ ಸಲಹೆ ಮೇರೆಗೆ ಪದ್ಮಿನಿ ಅವರನ್ನು ವಾರ್ತಾ ವಾಚಕಿಯಾಗಿ ನೇಮಿಸಿಕೊಳ್ಳಲಾಗಿದೆ. ಸುದ್ದಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಪದ್ಮಿನಿಗೆ ಎರಡು ತಿಂಗಳ ಧ್ವನಿ ಏರಿಳಿತ ಮತ್ತು ಭಾಷೆಯ ಬಗ್ಗೆ ತರಬೇತಿ ನೀಡಲಾಗಿದೆ. ‘ಸಾಕಷ್ಟು ಮಂದಿ ಚಾನೆಲ್‌ನ ಟಿಆರ್‌ಪಿ ಹೆಚ್ಚಿಸಲು ತೃತೀಯ ಲಿಂಗಿಯನ್ನು ವಾರ್ತಾ ವಾಚಕಿಯಾಗಿ ನೇಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ತೃತೀಯ ಲಿಂಗದ ಜನರಿಗೆ ಗೌರವಯುತವಾಗಿ ಬದುಕಲು ಅವಕಾಶ ನೀಡಲಾಗಿದೆಯಷ್ಟೆ’ ಎನ್ನುತ್ತಾರೆ ರಾಮ್‌ಕುಮಾರ್‌.

ಸುದ್ದಿ ನೀಡುವುದು ಗಂಡು ಅಥವಾ ಹೆಣ್ಣು ಎನ್ನುವುದಕ್ಕಿಂತ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುತ್ತೇವೆ ಎಂಬುದಷ್ಟೆ ಮುಖ್ಯ ಎನ್ನುವುದು ಪದ್ಮಿನಿ ನಂಬಿಕೆ. ಕೌಶಲವೂ ಹೌದು.

1 Comment

  1. ಈ ಮಂಗಳಮುಖಿಯರು ಬೇಡಿ ಜೀವಿಸಿದರೆ ತಪ್ಪಿಲ್ಲ.
    ಆದರೆ ಸಾಮಾನ್ಯ ಜನರನ್ನು ಕಾಡುವದು – ಪೀಡಿಸುವದನ್ನು ಅತೀಶಯವಾಗಿ ಮಾಡುತ್ತಾರೆ.
    ರೈಲಿನಲ್ಲಿ ಪ್ರಯಾಣ ಮಾಡುವಾಗ,ಇದು ಅನೇಕ ಸಲ ಆದ ನನ್ನ ಸ್ವಂತ ಅನುಭವ .
    ಇದರಿಂದಾಗಿ ಜನರು ಇವರ ಬಗ್ಗೆ ಸಹಾನುಭೂತಿ ಉಳಿಸಿಕೊಳ್ಳುವಾದಾದರೂ ಹೇಗೆ?
    ಅವರ ಕಷ್ಟಗಳೇನೇ ಇರಲಿ-ಬಿಡಲಿ, ಆದರೆ ಅಮಾಯಕ ಜನರಿಗೆ ವಿನಾಕಾರಣ ಕಷ್ಟ ಕೊಡೋದು ಸರಿಯೆ?

Write A Comment