ಕನ್ನಡ ವಾರ್ತೆಗಳು

ರಾಯಲ ಸೀಮಾದ ಭರ್ಜರಿ ಭೋಜನ

Pinterest LinkedIn Tumblr

psmec28kritunga4_0

-​ಯೋಗಿತಾ ಬಿ.ಆರ್‌.
‘ಸ್‌ಸ್‌ಸ್‌…ಖಾರಾ ಖಾರಾ’ ಅನ್ನುವಷ್ಟು ಸ್ಪೈಸಿ ಫುಡ್…ಎಷ್ಟು ತಿಂದರೂ ಇನ್ನೂ ತಿನ್ನಬೇಕೆಂಬ ಹಂಬಲ…ಮೆನುವಿನಲ್ಲಿರುವ ಎಲ್ಲಾ ಖಾದ್ಯಗಳ ರುಚಿಯನ್ನಾ­ದರೂ ನೋಡ­­ಬೇಕು ಎನ್ನುವ ಆಸೆ… ಕೃತುಂಗಾ ರೆಸ್ಟೊರೆಂಟ್‌ನಲ್ಲಿ ಇವೆಲ್ಲಾ ಸಾಧ್ಯ.

ನಗರದಲ್ಲಿರುವ ಹಲವಾರು ಆಂಧ್ರ ಶೈಲಿಯ ಹೋಟೆಲ್‌ಗಳ ಸಾಲಿಗೆ ‘ಕೃತುಂಗಾ’ ರೆಸ್ಟೋರೆಂಟ್‌ ಹೊಸದಾಗಿ ಸೇರ್ಪಡೆಯಾಗಿದೆ.

ಆಂಧ್ರಪ್ರದೇಶದಲ್ಲಿ ಕೃಷ್ಣ ಹಾಗೂ ತುಂಗಾ ನದಿಗಳನ್ನು ಜೀವ ನದಿಗಳು ಎಂದು ಪರಿಗಣಿಸಲಾ­ಗು­ತ್ತದೆ. ಈ ಜೀವನದಿಗಳ ಹೆಸರನ್ನೇ ಆಧಾರವಾಗಿರಿಸಿ­ಕೊಂಡು ಈ ಹೋಟೆಲ್‌ಗೆ ಮಾಲೀಕರು ‘ಕೃತುಂಗಾ’ ಎಂದು ಹೆಸರಿಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ಈಗಾಗಲೇ  ಸದ್ದು ಮಾಡಿರುವ  ‘ಕೃತುಂಗಾ’ ರೆಸ್ಟೊರೆಂಟ್್ ಬೆಂಗಳೂರಿನಲ್ಲೂ ಸದ್ದು ಮಾಡಲು ಆರಂಭಿಸಿದೆ. ಕೋರಮಂಗಲ, ಮಾರತ್‌ಹಳ್ಳಿ­ಯಲ್ಲಿ  2014ರ ಜನವರಿಯಲ್ಲಿ ‘ಕೃತುಂಗಾ’ ತನ್ನ ಶಾಖೆ­ಯನ್ನು ಆರಂಭಿಸಿತು. ಇಲ್ಲಿ ಸಿಕ್ಕಿದ ಉತ್ತಮ ಪ್ರತಿಕ್ರಿಯೆ­ಯಿಂದ ಜಯನಗರದಲ್ಲಿ ಮತ್ತೊಂದು ಶಾಖೆಯನ್ನು ಆರು ತಿಂಗಳ ಹಿಂದೆಯಷ್ಟೇ ಆರಂಭಿಸಿದೆ. ಈ ಮೂರೂ ಶಾಖೆಗಳಿಗೆ ದಕ್ಕಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಪ್ರೇರೇಪಿತರಾಗಿ ನಗರದ ಹೆಬ್ಬಾಳ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಕುಂದನಹಳ್ಳಿ ಗೇಟ್‌(ವೈಟ್‌ಫೀಲ್ಡ್‌ ಹೋಗುವ ಮಾರ್ಗ)ನಲ್ಲಿಯೂ ಶಾಖೆಗಳನ್ನು ಆರಂಭಿ­­ಸಲು ಹೊರಟಿದ್ದಾರೆ ಮಾಲೀಕರು.

ಸಸ್ಯಹಾರಿ, ಮಾಂಸಾಹಾರಿ ಎರಡೂ ಬಗೆಯ ಖಾದ್ಯಗಳು ಇಲ್ಲಿ ದೊರೆಯುತ್ತವೆ. ರಾಯಲ ಸೀಮಾದ ‌ಪ್ರಸಿದ್ಧ ಅಡುಗೆಗಳನ್ನು ತಯಾರಿಸಿ ಗ್ರಾಹಕರಿಗೆ ಬಡಿಸುವುದು ಇಲ್ಲಿನ ವಿಶೇಷ.

ಈಗಿನ ಅಕ್ಕಿಗೂ ಮೊದಲು ನಮ್ಮ ಪೂರ್ವಜರು ತಿನ್ನುತ್ತಿದ್ದ ‘ಕೊರ್ರ ಅನ್ನಮ್‌’ (ನವಣೆ) ಈ ರೆಸ್ಟೋರೆಂಟ್‌ನ ಪ್ರಮುಖ ಆಕರ್ಷಣೆ. ತಮಗೆ ಬೇಕಾದ ಗ್ರೇವಿಯೊಂದಿಗೆ ಸಸ್ಯಹಾರಿ, ಮಾಂಸಹಾರಿಗಳಿಬ್ಬರೂ ಕೊರ್ರ ಅನ್ನಮ್‌ ಅನ್ನು ಸವಿಯಬಹುದು. ಆರೋಗ್ಯಕ್ಕೂ ಇದು ಒಳ್ಳೆಯದು. ಇದರ ಜತೆ ನೀಡುವ ಮೆಣಸಿನಕಾಯಿ  ಚಟ್ನಿಯಂತೂ ನಾಲಗೆಯ ರಸಗ್ರಂಥಿಗಳನ್ನು ಚುರುಕಾಗಿಸುತ್ತದೆ.

ರೆಸ್ಟೊರೆಂಟ್‌ನ ಮತ್ತೊಂದು ಆಕರ್ಷಣೆ ‘ಬ್ಯಾಂಬೂ ಚಿಕನ್‌’. ಹೆಚ್ಚೇನೂ ಮಸಾಲೆ ಹಾಕದೆ ಮೆಣಸಿನಪುಡಿ ಹಾಕಿ ಮೊದಲೇ ಅರ್ಧ ಬೇಯಿಸಿ, ಅದನ್ನು ಬಿದಿರಿನ ಕೊಳವೆಯಲ್ಲಿ ತುಂಬಿ ಮತ್ತೆ ಇಪ್ಪತ್ತು ನಿಮಿಷಗಳ ಕಾಲ ಬೇಯಿಸಲಾಗುತ್ತದೆ. ಆಗ ಬಿದಿರಿನ ಸಾರ ಚಿಕನ್ ಜತೆ ಬೆರೆತು ಬೇರೆಯೇ ಆದ ಸ್ವಾದ ಸಿಗುತ್ತದೆ. ಬ್ಯಾಂಬೂ ಚಿಕನ್‌ ಸವಿಯುವಾಗ ಬಿದಿರಿನ ಪರಿಮಳ ಎಂಥದೆನ್ನುವುದು ನಮಗೆ ತಿಳಿಯುತ್ತದೆ.

ಅನ್ನ ಹಾಗೂ ತುಪ್ಪವನ್ನು ಹಾಕಿ ತಯಾರಿಸಿದ ರಾಗಿಮುದ್ದೆಯನ್ನು ನಾಟಿ ಕೋಳಿ ಸಾರು, ಮಾಂಸದ  ಸಾರು ಅಥವಾ ಮೀನಿನ ಸಾರಿನೊಂದಿಗೆ ಇಲ್ಲಿಗೆ ಬರುವ ಗ್ರಾಹಕರು ಸವಿಯಬಹುದು.
ಪಾಟ್‌ ಬಿರಿಯಾನಿ (ಮಡಿಕೆಯಲ್ಲೇ ತಯಾರಿಸಲಾಗುವ ಬಿರಿಯಾನಿ), ರಾಯಲ ಸೀಮಾ ವಿಶೇಷ ಬಿರಿಯಾನಿ, ನಾಟಿಕೋಳಿ ಬಿರಿಯಾನಿ, ಮಟನ್‌ ಕೀಮಾ ಬಿರಿಯಾನಿ, ಚೆನ್ನೂರು ಮಟನ್‌ ಪುಲಾವ್‌, ಫಿಶ್‌ ಬಿರಿಯಾನಿ, ನಿಜಾಮ್‌ ಚಿಕನ್‌ ಬಿರಿಯಾನಿ, ಗ್ರೀನ್‌ ಚಿಲ್ಲಿ ಚಿಕನ್‌ ಬಿರಿಯಾನಿ ಹೀಗೆ ತರಹೇವಾರಿ ಬಿರಿಯಾನಿಗಳು ಗ್ರಾಹಕರನ್ನು ಆಕರ್ಷಿಸುವಂತಿವೆ.

ಖಡಕ್‌ ಜೋಳದ ರೊಟ್ಟಿ, ಸಜ್ಜಾ ರೊಟ್ಟಿಗಳಿಗೆ ಗುಟ್ಟಿ ವಂಕಾಯ (ಬದನೆಕಾಯಿ ಗೊಜ್ಜು) ಕಾಂಬಿನೇಷನ್‌ ರುಚಿಗಾರರ ಹಿಡಿದಿಡಬಲ್ಲವು.

ಕಡಿಮೆ ಎಣ್ಣೆ ಬಳಸುವುದಾಗಿ ಹೇಳುವ ಇಲ್ಲಿನ ಬಾಣಸಿಗರು ರಾಯಲ ಸೀಮಾದ ಭರ್ಜರಿ ಊಟ  ಬಯಸುವ ಗ್ರಾಹಕರ ರುಚಿ, ಅಭಿರುಚಿಯನ್ನು ಮನದಲ್ಲಿ ಇಟ್ಟುಕೊಂಡೇ ಖಾದ್ಯಗಳನ್ನು ತಯಾರಿಸುತ್ತಾರೆ.

ರೆಸ್ಟೊರೆಂಟ್‌ : ಕೃತುಂಗಾ, ಸಮಯ: ಮಧ್ಯಾಹ್ನ 12ರಿಂದ 4 ಹಾಗೂ ರಾತ್ರಿ 7ರಿಂದ 11.
ಸ್ಥಳ: ಸಂಚಾರ ಪೊಲೀಸ್‌ ಠಾಣೆಯ ಮುಂಭಾಗ, ಜಯನಗರ.

Write A Comment