ಮನೋರಂಜನೆ

ಅರಿವು ‘ಹರಿವು’ಗಳ ಅಗ್ನಿದಿವ್ಯದಲ್ಲಿ…: ರಾಷ್ಟ್ರೀ ಪ್ರಶಸ್ತಿ ಚಿತ್ರದ ಕುರಿತು..

Pinterest LinkedIn Tumblr

crec27HARIVU_0

-ಡಿ.ಎಂ.ಕುರ್ಕೆ ಪ್ರಶಾಂತ
‘ಕನಸು ಗಟ್ಟಿಯಾಗಿದ್ದರೆ ಸಾಧನೆ ಸಾಧ್ಯ. ಕನಸುಗಳು ಗಟ್ಟಿಯಾಗಿದ್ದರೆ ಕಷ್ಟಗಳು ಸಹಜ. ಆದರೂ ಕನಸನ್ನು ದೃಢವಾಗಿ ಬೆನ್ನತ್ತಿ ಹೋದರೆ ಸಾಧನೆ–ಮನ್ನಣೆ ಖಂಡಿತಾ ಸಾಧ್ಯ’. ಹೀಗೆ ತಮ್ಮ ಕನಸಿನ ದಾರಿಯನ್ನು ನೆನಪಿಸಿಕೊಳ್ಳುವಾಗ ಯುವ ನಿರ್ದೇಶಕ ಮಂಸೋರೆ (ಮಂಜುನಾಥ್ ಎಸ್.) ಅವರ ಮಾತುಗಳಲ್ಲಿ ಸಂತಸವೂ ಉದ್ವೇಗವೂ ಇಣುಕುತ್ತದೆ. ದೃಢ ನಿರ್ಧಾರವಿದ್ದರೆ ಅಂದುಕೊಂಡದ್ದನ್ನು ಸಾಧಿಸಬಹುದು ಎನ್ನುವ ಅದಮ್ಯ ವಿಶ್ವಾಸವೂ ಅವರ ಮಾತುಗಳಲ್ಲಿದೆ.

ಮಂಸೋರೆ ನಿರ್ದೇಶನದ ‘ಹರಿವು’ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದೆ. ಈ ಸಿನಿಮಾದ ಹಿನ್ನೆಲೆಯಲ್ಲಿ ಮಂಸೋರೆ ಅವರನ್ನು ಮಾತನಾಡಿಸಿದರೆ, ಅವರ ಬದುಕಿನ ಹರಿವಿನ ದಾರಿಯೊಂದು ತೆರೆದುಕೊಳ್ಳುತ್ತದೆ.

‘ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಎನ್. ವೆಂಕಟಾಪುರ ಗ್ರಾಮದವನು ನಾನು. ಬೆಂಗಳೂರು ಎನ್ನುವುದು ಭಯವನ್ನೂ ಹುಟ್ಟಿಸುತ್ತದೆ ಧೈರ್ಯವನ್ನು ತುಂಬುತ್ತದೆ. ಆದರೆ, ಈ ನಗರ ನನಗೆ ಧೈರ್ಯವನ್ನೇ ಹೆಚ್ಚು ಕೊಟ್ಟಿದ್ದು. ನಾವು ಕಾಣುವ ಕನಸು ಸರಿಯಾದ ದಿಕ್ಕಿನಲ್ಲಿ ಇದ್ದರೇ ದಾರಿಯನ್ನೂ ಅದೇ ತೋರಿಸುತ್ತದೆ’ ಎನ್ನುವುದನ್ನು ‘ಹರಿವು’ ಸಿನಿಮಾ ನನಗೆ ಕಲಿಸಿದೆ ಎಂದು ಮಂಸೋರೆ ಹೇಳುತ್ತಾರೆ.

ಇಂಥ ಮನ್ನಣೆ ಸಿಕ್ಕುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳದ ಮಂಸೋರೆ ಮತ್ತು ಚಿತ್ರತಂಡ ಸಂಭ್ರಮದ ಹೊನಲಿನಲ್ಲಿದೆ. ಜತೆಗೆ ತಮ್ಮ ಚಿತ್ರದಲ್ಲಿ ಅಭಿನಯಿಸಿದ್ದ ‘ಸಂಚಾರಿ’ ವಿಜಯ್‌ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಅವರ ಖುಷಿಯನ್ನು ಇಮ್ಮಡಿಸಿದೆ. ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ ಅವರ ‘ಬಡವರಿಗೆ ಬದುಕು ತುಟ್ಟಿ, ಸಾವು ಇನ್ನೂ ತುಟ್ಟಿ’ ಎನ್ನುವ ಲೇಖನವೇ ಅವರ ಸಿನಿಮಾಕ್ಕೆ ಸ್ಫೂರ್ತಿ. ಸಿದ್ಧಸೂತ್ರಗಳಿಗೆ ಹೊರತಾದ ಇಂಥ ಸಿನಿಮಾಗಳು ಜನರನ್ನು ತಲುಪುವುದು ಕಷ್ಟ. ಈಗ ದೊರೆತಿರುವ ಪ್ರಶಸ್ತಿ ತಮ್ಮ ಚಿತ್ರವನ್ನು ಜನರಿಗೆ ಮುಟ್ಟಿಸಲಿದೆ ಎನ್ನುವ ನಂಬಿಕೆ ಅವರದು.

ಎಡರು ತೊಡರುಗಳ ದಾಟಿ…
‘ಒಂದು ಹಂತದಲ್ಲಿ ಸಿನಿಮಾಕ್ಕೆ ಹಣಕಾಸಿನ ಎದುರಾಯಿತು. ಸಿನಿಮಾವನ್ನು ಇಷ್ಟೆಲ್ಲ ಕಷ್ಟಪಟ್ಟು ಮಾಡಬೇಕೇ ಎಂದೂ ಅನ್ನಿಸಿದ್ದಿದೆ. ಸಿನಿಮಾ ರೂಪುಗೊಂಡು ಸಹೃದಯರನ್ನು ತಲುಪಿದ ಮೇಲೆ ನಮ್ಮ ಸಂಕಟಗಳೆಲ್ಲ ಮಾಯವಾಗುತ್ತವೆ. ಎರಡು ದಶಕಗಳ ಹಿಂದೆ ಇಂಥ ಚಿತ್ರಗಳು ಗೆಲ್ಲುತ್ತಿದ್ದವು. ನಂತರದ ದಿನಗಳಲ್ಲಿ ಪ್ರೇಕ್ಷಕನ ಅಭಿರುಚಿ ಬದಲಾಯಿತು.

ಮನರಂಜನೆಯೇ ಸಿನಿಮಾ ಎನ್ನುವಂತೆ ಇರುವುದರಿಂದ ಗಂಭೀರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ ಚಿತ್ರಗಳನ್ನು ನೋಡುವುದು ಕಷ್ಟ. ನೋಡುವ ಜನರಿದ್ದರೂ ಅವರಿಗೆ ಈ ಸಿನಿಮಾಗಳ ಬಗ್ಗೆ ಗೊತ್ತೇ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಿದರೆ ಉತ್ತಮ.

ಪ್ರಮುಖವಾಗಿ ಈ ರೀತಿ ಚಿತ್ರಗಳಿಗೆ ಎದುರಾಗುವುದು ವಿತರಕರ ಸಮಸ್ಯೆ. ಹಂಚಿಕೆದಾರರು ದುಡ್ಡು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಪ್ರಚಾರಕ್ಕೆ ದುಡ್ಡು ಕೊಡಬೇಕಾದ ಸ್ಥಿತಿ ಇದೆ. ಅದು ನಮ್ಮಂಥ ಸಣ್ಣ ಬಜೆಟ್ ಸಿನಿಮಾದವರಿಗೆ ಕಷ್ಟ. ಹಲವು ಕಷ್ಟಗಳ ನಡುವೆಯೇ ಇಂಥ ಚಿತ್ರಗಳನ್ನು ಸಿದ್ಧಮಾಡಿರುತ್ತೇವೆ. ಪ್ರಶಸ್ತಿಗಳು ದೊರೆಯುವುದರಿಂದ, ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ಸುದ್ದಿಗಳು ಪ್ರಕಟವಾಗುವುದರಿಂದ ವಿತಕರಕರು ಮುಂದೆ ಬಂದು ಸಿನಿಮಾ ತೆರೆ ಕಾಣಿಸುವ ಸಂಭವವೂ ಇರುತ್ತದೆ. ಕೊನೆಯ ಪಕ್ಷ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಾದರೂ ಚಿತ್ರ ಜನರಿಗೆ ತಲುಪಲು ಸಾಧ್ಯವಾಗುತ್ತದೆ’ ಎಂದು ಮಂಸೋರೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.

‘ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ವಿಜಯ್ ‘ಹರಿವು’ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದ್ಭುತ ಪ್ರತಿಭೆಗೆ ಸಲ್ಲಬೇಕಾದ ಗೌರವ ಅವರಿಗೆ ಸಂದಿದೆ’ ಎಂದು ವಿಜಯ್ ಅವರನ್ನು ಮಂಸೋರೆ ಮೆಚ್ಚಿಕೊಳ್ಳುತ್ತಾರೆ.

ಹೊಸ ಪ್ರಯತ್ನಗಳಿಗೆ ಮನ್ನಣೆ
‘ಸಂಚಾರಿ’ ವಿಜಯ್, ‘ಹರಿವು’ ಹೀಗೆ ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆ. ಈ ಪುರಸ್ಕಾರ – ಮನ್ನಣೆಗಳಿಂದ ಹೊಸ ಪ್ರಯತ್ನಗಳನ್ನು ಉತ್ತೇಜಿಸಿದಂತಾಗುತ್ತದೆ. ಸಿದ್ಧಮಾದರಿ ಮೀರಿದ ಪ್ರಯೋಗಾತ್ಮಕ ಚಿತ್ರಗಳಿಗೆ ದೊರೆಯುವ ಬೆಂಬಲ ಖುಷಿ ಕೊಡುತ್ತದೆ. ಹೊಸಬರನ್ನು ಗುರ್ತಿಸಿ ಮನ್ನಣೆ ನೀಡಿರುವುದು ಮತ್ತಷ್ಟು ಹೊಸ ಪ್ರಯೋಗಗಳಿಗೆ ಮೈಲಿಗಲ್ಲಾಗಲಿದೆ’  ಎಂದು ಮಂಸೋರೆ ಹೇಳುತ್ತಾರೆ.

ಅಂದಹಾಗೆ, ‘ಹರಿವು’ ಕಥೆಯನ್ನು ಮಂಸೋರೆ ಆಯ್ಕೆ ಮಾಡಿಕೊಳ್ಳಲು ಒಂದು ಹಿನ್ನೆಲೆ ಇದೆ. ‘ಈ ಕಥೆ ಆಯ್ಕೆ ಮಾಡಿಕೊಳ್ಳುವ ಸ್ವಲ್ಪ ದಿನ ಮುಂಚೆ ನಮ್ಮ ತಂದೆ ತೀರಿಕೊಂಡಿದ್ದರು. ಅಪ್ಪನಿಗೆ ಸಿನಿಮಾ ಮಾಡುವ ಕನಸಿನ ಬಗ್ಗೆ ಹೇಳಿದ್ದೆ. ಈ ಕಥೆಯನ್ನು ಸಿನಿಮಾ ಮಾಡಿ ಅವರಿಗೆ ಅರ್ಪಿಸಬೇಕು ಎನಿಸಿತು. ಅಪ್ಪನಿಗೆ ಮಗನ ಮೇಲೆ ಎಷ್ಟು ಪ್ರೀತಿ ಇರುತ್ತದೆ ಎನ್ನುವುದು ಈ ಚಿತ್ರದ ಮೂಲಕ ತೋರಿಸಲು ಸಾಧ್ಯವಾಗುತ್ತದೆ ಎನ್ನುವ ಕಾರಣವೂ ಇದೆ’ ಎಂದು ಅವರ ತಮ್ಮ ಸಿನಿಮಾ ಕಥನದ ಹಿನ್ನೆಲೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

Write A Comment