ಬಂಟ್ವಾಳ, ಮಾ.27: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಾಪಸಾಗುತ್ತಿದ್ದ ತುಂಬೆ ಕಾಲೇಜು ವಿದ್ಯಾರ್ಥಿಗಳ ಮೇಲೆ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ತಂಡವೊಂದು ಹಲ್ಲೆ ನಡೆಸಿದ ಘಟನೆ ಉಸ್ತುವಾರಿ ಸಚಿವರ ಕ್ಷೇತ್ರವಾದ ಬಂಟ್ವಾಳದ ಎಸ್‌ವಿಎಸ್ ಕಾಲೇಜು ಸಮೀಪ ಗುರುವಾರ ನಡೆದಿದ್ದು, ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ತುಂಬೆ ಮೊಹಿಯುದ್ದೀನ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಮುಬೀನ್, ಸದಕತ್ ಹಾಗೂ ಅಕ್ಬರ್ ಸಿದ್ದೀಕ್ ತಂಡದಿಂದ ಹಲ್ಲೆಗೊಳಗಾದವರಾಗಿದ್ದು, ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸುಫೈದ್, ನವಾಫ್, ಮುನಾಝ್, ನಿಶಾಫ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಬಂಟ್ವಾಳದ ಎಸ್‌ವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಿದ್ದು, ತುಂಬೆ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಬಸ್‌ನಿಲ್ದಾಣದ ಬಳಿ ಈ ಮೂರು ಮಂದಿ ವಿದ್ಯಾರ್ಥಿಗಳು ನಿಂತಿದ್ದಾಗ ಅಲ್ಲಿಗೆ ಬಂದ ಎಸ್‌ವಿಎಸ್ ಕಾಲೇಜಿನ ವಿದ್ಯಾರ್ಥಿಗಳಾದ ತಾರಾನಾಥ, ದೀಪಕ್, ಚೇತನ್, ಅಶ್ವಥ್, ಅಭಿಲಾಷ್, ಆಕಾಶ್, ಪ್ರಮೋದ್ ಮತ್ತಿತರರಿದ್ದ ತಂಡ ಕಲ್ಲು, ದೊಣ್ಣೆ ಹಾಗೂ ಕೈಯಿಂದ ಹಲ್ಲೆ ನಡೆಸಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪೂರ್ವ ದ್ವೇಷದ ಹಿನ್ನ್ನೆಲೆ:
ಕೆಲ ದಿನಗಳ ಹಿಂದೆ ಪರೀಕ್ಷೆ ಮುಗಿಸಿ ಬಸ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ಈಗ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಹಲ್ಲೆಗೀಡಾದ ವಿದ್ಯಾರ್ಥಿಗಳ ಪೈಕಿ ಓರ್ವನಲ್ಲಿ ಬ್ಯಾಗ್ ಹಿಡಿದುಕೊಳ್ಳುವಂತೆ ತಿಳಿಸಿ ತಮ್ಮ ಬ್ಯಾಗ್‌ಗಳನ್ನು ನೀಡಿದ್ದರು ಎನ್ನಲಾಗಿದೆ. ಈ ಸಂದಭರ್ ಬ್ಯಾಗ್ ಕೆಳಗೆ ಬಿದ್ದಿದ್ದು, ಉದ್ದೇಶಪೂರ್ವಕವಾಗಿಯೇ ಬ್ಯಾಗನ್ನು ಕೆಳಗೆ ಹಾಕಿದ್ದಾರೆ ಎಂದು ಆರೋಪಿಸಿದ ಕಾರಣ ಈ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವಿವಾದ ಎರಡು ಕಾಲೇಜುಗಳ ಪ್ರಾಂಶುಪಾಲರ ಬಳಿ ಹೋಗಿದ್ದು, ಪ್ರಾಂಶುಪಾಲರ ಸಮ್ಮುಖದಲ್ಲೇ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿ ಕಳುಹಿಸಲಾಗಿತ್ತು. ಇದೀಗ ಮತ್ತೆ ಅದೇ ಪೂರ್ವದ್ವೇಷದ ಹಿನ್ನ್ನೆಲೆಯಲ್ಲಿ ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಸಿಎಫ್‌ಐ ಕಾರ್ಯಕರ್ತರು ಬಂಟ್ವಾಳ ನಗರ ಠಾಣಾ ಎಸ್ಸೈಗೆ ಗುರುವಾರ ಸಂಜೆ ಮನವಿ ಸಲ್ಲಿಸಿದ್ದು, ತಪ್ಪಿದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಎಸ್.ವಿ.ಎಸ್.ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾಗಿದ್ದರೂ, ಪೊಲೀಸ್ ಇಲಾಖೆ ಅಲ್ಲಿಗೆ ಸೂಕ್ತ ಭದ್ರತೆ ಒದಗಿಸದಿರುವುದೇ ಈ ಅಹಿತಕರ ಘಟನೆಗೆ ಕಾರಣವಾಗಿದೆ ಎಂದು ತುಂಬೆ ಕಾಲೇಜು ಮುಖ್ಯಸ್ಥರು ಆರೋಪಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ನಿಯಮದಲ್ಲಿದ್ದರೂ, ಪರಿಸರದಲ್ಲಿ ಪೊಲೀಸರು ಇರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಠಾಣಾಧಿಕಾರಿ ನಂದಕುಮಾರ್, ಕಾಲೇಜು ವಿದ್ಯಾರ್ಥಿಗಳ ನಡುವೆ ಈ ಹಿಂದೆ ನಡೆದ ಘರ್ಷಣೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಪರೀಕ್ಷಾ ಕೇಂದ್ರಕ್ಕೆ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಭದ್ರತೆ ಒದಗಿಸಲಾಗಿದೆ. ಇಂದು ನಡೆದ ಹಲ್ಲೆ ಘಟನೆ ಕಾಲೇಜು ಆವರಣದ ಹೊರಗೆ ನಡೆದಿದೆ. ದೂರು ಸ್ವೀಕರಿಸಿದ್ದೇವೆ, ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಕೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಮೀಸಲು ಪಡೆಯನ್ನು ಕಾಲೇಜು ಆವರಣದಲ್ಲಿ ನಿಯೋಜಿಸಲಾಗುವುದು ಎಂದವರು ತಿಳಿಸಿದ್ದಾರೆ.
