ಕನ್ನಡ ವಾರ್ತೆಗಳು

ಕಲ್ಲು ಎತ್ತಿಹಾಕಿ ಕೊಲೆ ಯತ್ನ : ಗಂಭೀರ ಗಾಯಗೊಂಡಿದ್ದ ನಾಗರಾಜ್ ಪ್ರಭು ಸಾವು : ಆರೋಪಿ ಸೆರೆ

Pinterest LinkedIn Tumblr

Nagaraj_Prabhu_Deid

ಮಂಗಳೂರು: ಮಣ್ಣಗುಡ್ಡೆಯಲ್ಲಿ ಬುಧವಾರ ಮುಂಜಾನೆ ವರದಿಯಾದ ಕೊಲೆಯತ್ನ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸುರತ್ಕಲ್ ಕೃಷ್ಣಾಪುರದ ನಿವಾಸಿ ನಾಗರಾಜ್ ಪ್ರಭು (35) ಚಿಕಿತ್ಸೆ ಫಲಕಾರಿಯಾಗದೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಬರ್ಕೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಅರಸಿಕೆರೆ ನಿವಾಸಿ ಗಂಗಾಧರ (45) ಎಂಬಾತನನ್ನು ಬರ್ಕೆ ಎಸ್‌ಐ ಎಸ್.ಎಸ್.ಮೇಟಿ ನೇತೃತ್ವದ ಪೊಲೀಸರ ತಂಡ ಗುರುವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅತ್ಯಂತ ಚಾಣಾಕ್ಷ್ಯದಿಂದ ಬಂಧಿಸಿದ್ದಾರೆ. ಆರೋಪಿ ಬಸ್ ಮೂಲಕ ಪರಾರಿಯಾಗುವ ಯತ್ನ ನಡೆಸಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಮಲಗುವ ಜಾಗಕ್ಕಾಗಿ…

ಬಂಧಿತ ಆರೋಪಿ ಗಂಗಾಧರ ಯಾವತ್ತೂ ಮಣ್ಣಗುಡ್ಡದ ಸಾಯಿನಿಕೇತನ್ ಸಮುಚ್ಚಯದ ನೆಲ ಅಂತಸ್ತಿನ ಜಗುಲಿಯಲ್ಲಿ ಮಲಗುತ್ತಿದ್ದ. ಬುಧವಾರ ರಾತ್ರಿ ಕೊಲೆಯಾದ ನಾಗರಾಜ್ ಪ್ರಭು ಅದೇ ಜಾಗದಲ್ಲಿ ಗಂಗಾಧರ ಬರುವುದಕ್ಕಿಂತ ಮೊದಲೇ ಬಂದು ಮಲಗಿದ್ದ. ಇದನ್ನು ಗಂಗಾಧರ ಆಕ್ಷೇಪಿಸಿದ್ದು, ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರೂ ಕುಡಿದಿದ್ದ ಕಾರಣ ಗಲಾಟೆ ವಿಕೋಪಕ್ಕೆ ತಿರುಗಿದೆ.

ಆ ಬಳಿಕ ಆರೋಪಿ ಗಂಗಾಧರ ಅಲ್ಲೇ ಪಕ್ಕದಲ್ಲಿ ಮಲಗಿದ್ದ. ತಡರಾತ್ರಿ ನಾಗರಾಜ ಪ್ರಭು ನಿದ್ದೆಗೆ ಜಾರಿದ ಬಳಿಕ ಮೆಲ್ಲನೆ ಎದ್ದ ಗಂಗಾಧರ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ನಾಗರಾಜ ಪ್ರಭುವಿನ ತಲೆ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದಾನೆ. ಈ ಪ್ರಕರಣ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಬೆಳಕಿಗೆ ಬಂದಿದ್ದು, ಅಲ್ಲಿ ವರೆಗೂ ನಾಗರಾಜ ಪ್ರಭು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ. ಬೆಳಗ್ಗೆ ಮಾಹಿತಿ ಬಂದ ಬಳಿಕ ಪೊಲೀಸರು ಆಗಮಿಸಿ ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ ಪ್ರಭು ಬುಧವಾರ ತಡರಾತ್ರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ನಾಗರಾಜ ಪ್ರಭು ಪಾಲಿಟೆಕ್ನಿಕ್ ಶಿಕ್ಷಣ ಪಡೆದಿದ್ದು, ಎಲ್ಲೂ ಕೆಲಸ ಮಾಡದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ. ವಿಪರೀತ ಕುಡಿತದ ಚಟ ಹೊಂದಿದ್ದ ಈತ ಕುಡಿತಕ್ಕಾಗಿ ಪಿಕ್‌ಪಾಕೆಟ್ ಕೃತ್ಯ ನಡೆಸುತ್ತಿದ್ದ. ಈ ಸಂದರ್ಭ ಕೆಲವು ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಇತ್ತೀಚೆಗಷ್ಟೇ 23 ದಿನಗಳ ಕಾಲ ಜೈಲಿನಲ್ಲಿದ್ದು, ಬಿಡುಗಡೆಗೊಂಡಿದ್ದ. ವೆನ್‌ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುರುವಾರ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಗಿದೆ.

Write A Comment