ಉಪ್ಪಳ,ಮಾರ್ಚ್.26: ಗಲ್ಫ್‌ನಿಂದ ಆಗಮಿಸಿ ರೈಲುಗಾಡಿಯಲ್ಲಿ ಪತಿ ಮನೆಗೆ ತೆರಳುತ್ತಿದ್ದ ಯುವತಿ ಹಾಗೂ ಆಕೆಯ 8ರ ಹರೆಯದ ಪುತ್ರಿ ನಿಗೂಢ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಯುವತಿಯ ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹೊಸದುರ್ಗ ಶ್ರೀಲಕ್ಷ್ಮಿ ವೆಂಕಟರಮಣ ದೇವಾಸ್ಥನ ಬಳಿ ನಿವಾಸಿ ಕೆ. ಕೃಷ್ಣನ್ ಅವರ ಪುತ್ರಿ ರಿಸ್ಸಾ(34) ಹಾಗೂ ಈಕೆಯ ಪುತ್ರಿ ಆರ್ಯ(8) ಎಂಬವರು ನಿಗೂಢ ರೀತಿಯಲ್ಲಿ ನಾಪತ್ತೆಯಾದವರು. ರಿಸ್ಸಾರ ಪತಿ ತಲಶ್ಯೆರಿ ನಿವಾಸಿಯಾಗಿದ್ದು, ಪತಿ ಸಣ್ಣಿ ಎಂಬ ವರ ಜೊತೆ ಕಳೆದ ಹಲವು ವರ್ಷ ಗಳಿಂದ ಗಲ್ಫ್‌ನಲ್ಲಿ ವಾಸಿಸುತ್ತಿದ್ದರು. ಈ ತಿಂಗಳ 13ರಂದು ಸಣ್ಣಿ ಹಾಗೂ ಕುಟುಂಬ ಊರಿಗೆ ಆಗಮಿಸಿತ್ತು.
ಈ ಮೂವರು ರಿಸ್ಸಾ ಅವರ ಹೊಸದುರ್ಗದ ಮನೆಯಲ್ಲಿದ್ದರು. ಎರಡು ದಿನಗಳ ಹಿಂದೆ ಸಣ್ಣಿ ತಲಶ್ಯೆರಿಯ ಸ್ವಂತ ಮನೆಗೆ ತೆರಳಿದ್ದರು. ಇತ್ತೀಚೆಗೆ ರಿಸ್ಸಾ ತನ್ನ ಪುತ್ರಿಯೊಂದಿಗೆ ತಲಶ್ಯೆರಿಯ ಪತಿ ಮನೆಗೆ ಹೊರಟಿ ದ್ದರು. ರಿಸ್ಸ ಮತ್ತು ಪುತ್ರಿಯನ್ನು ರಿಸ್ಸಾರ ತಂದೆ ಕೃಷ್ಣನ್ ಕಾಂಞಂಗಾಡ್ ರ್ಯೆಲು ನಿಲ್ದಾಣದಿಂದ ರೈಲು ಹತ್ತಿಸಿದ್ದರು. ರೈಲುಗಾಡಿ ತಲಶ್ಯೆರಿ ನಿಲ್ದಾಣಕ್ಕೆ ತಲುಪುವಾಗ ಪತಿ ಸಣ್ಣಿ ಅಲ್ಲಿರುವುದಾಗಿ ತಿಳಿಸಿದ್ದರು. ಆದರೆ ರ್ಯೆಲುಗಾಡಿ ತಲಶ್ಯೆರಿ ನಿಲ್ದಾಣಕ್ಕೆ ತಲುಪಿದಾಗ ಇವರಿಬ್ಬರು ರೈಲುಗಾಡಿಯಿಂದ ಇಳಿದಿರಲಿಲ್ಲ.
ರಿಸ್ಸಾರ ಫೋನ್‍ಗೆ ಕರೆ ನೀಡಿದಾಗ ವ್ಯಾಪ್ತಿಯಿಂದ ಹೊರಗಿದ್ದಾರೆಂದೂ ಮಾಹಿತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ಹುಡುಕಾಡಿದರೂ ಯುವತಿ ಹಾಗೂ ಪುತ್ರಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.