ಕನ್ನಡ ವಾರ್ತೆಗಳು

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬೆಲ್ಕಿರಿ ವಿಶೇಷಾಂಕ ಬಿಡುಗಡೆ

Pinterest LinkedIn Tumblr

beary_news_photo_1

ಮಂಗಳೂರು,ಮಾರ್ಚ್.26 : ಬರೆವಣಿಗೆ ಭಾಷೆಗೆ ಅನನ್ಯತೆ ನೀಡುತ್ತದೆ. ಸ್ವೀಕರಣ ಎನ್ನುವುದು ಭಾಷೆ ಬೆಳವಣಿಗೆ ಲಕ್ಷಣ. ಇತರ ಭಾಷೆಗಳಿಂದ ಸ್ವೀಕಾರ ಮಾಡುವ ಮುಕ್ತ ಮನೋಭಾವ ಹೊಂದಿದರೆ ಯಾವುದೇ ಭಾಷೆ ಬೆಳೆಯಲು ಸಾಧ್ಯ ಎಂದು ಸಾಹಿತಿ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ್‌ ರೈ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಅತ್ತಾವರದ ಕಚೇರಿಯಲ್ಲಿ ಜರಗಿದ ಬೆಲ್ಕಿರಿ ವಿಶೇಷಾಂಕ ಬಿಡುಗಡೆ ಮತ್ತು ಬ್ಯಾರಿ-ಕನ್ನಡ-ಇಂಗ್ಲಿಷ್‌ ನಿಘಂಟು ರಚನೆ ಪ್ರಗತಿ ಪರಿಶೀಲನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಂಗ್ಲಿಷ್‌ ಭಾಷೆ ತಡವಾಗಿ ಗುರುತಿಸಲ್ಪಟ್ಟರೂ ಬರೆವಣಿಗೆ ಮೂಲಕ ಶೀಘ್ರವಾಗಿ ಪ್ರಪಂಚದಾದ್ಯಂತ ಬೆಳೆಯಿತು. ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿದಂತೆ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ತಯಾರಿಸುತ್ತಿರುವ ಬ್ಯಾರಿ-ಕನ್ನಡ-ಇಂಗ್ಲಿಷ್‌ ನಿಘಂಟು ಇತರರಲ್ಲೂ ಭಾಷೆ ಜ್ಞಾನ ಬೆಳೆಸಿ ಕೋಮು ಸೌಹಾರ್ದತೆಗೆ ಕಾರಣವಾಗುತ್ತದೆ ಎಂದರು.

beary_news_photo_2 beary_news_photo_3 beary_news_photo_4 beary_news_photo_5

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್‌ ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಜನರ ನಡುವೆ ಕೋಮು ಸೌಹಾರ್ದ ಮೂಡದೆ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ. ಈ ಸಮಸ್ಯೆಯಿಂದ ಹಲವು ಸಂಪನ್ಮೂಲ ವ್ಯಕ್ತಿಗಳು ಹೂಡಿಕೆ ಮಾಡಲೂ ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಧರ್ಮೀಯರು ಶಾಂತಿ ಸೌಹಾರ್ದಕ್ಕೆ ಒತ್ತು ನೀಡಬೇಕಾದ ಅವಶ್ಯಕತೆ ಇದೆ. ಸರಕಾರ ಅಕಾಡೆಮಿಗಳಿಗೆ ಸಹಾಯ ಮಾಡುತ್ತಿದ್ದು, ಅಕಾಡೆಮಿಗಳು ಕೂಡ ಎಲ್ಲರನ್ನು ಒಟ್ಟುಗೂಡಿಸುತ್ತಾ ಸಾಹಿತ್ಯ ಬೆಳೆಸುವ ಕಾರ್ಯ ಮಾಡಬೇಕು ಎಂದು ಮುಡಾ ಅಧ್ಯಕ್ಷರು ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್‌ ಹನೀಫ್‌, ಸರಕಾರಿ ಕಟ್ಟಡದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಗೆ ಸ್ಥಳ, ಬ್ಯಾರಿ ಭವನ ಸ್ಥಾಪಿಸಲು ನೀಡಿದ ಅರ್ಜಿ ಮಂಜೂರಾತಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಸಾಹಿತ್ಯ ಅಧ್ಯಯನ ಕೇಂದ್ರ ಮುಂತಾದ ಬೇಡಿಕೆಯನ್ನು ಇಬ್ರಾಹಿಂ ಕೋಡಿಜಾಲ್‌ ಅವರ ಮುಂದಿಟ್ಟರು. ಬ್ಯಾರಿ-ಕನ್ನಡ-ಇಂಗ್ಲಿಷ್‌ ನಿಘಂಟು ರಚನೆಯಲ್ಲಿ ಸ್ವರಾಕ್ಷರಗಳು ಮುಗಿದು, ವ್ಯಂಜನಾಕ್ಷರಗಳ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಶಬ್ದಗಳು ಮೌಲ್ಯಯುತವಾಗಿರುವುದರಿಂದ ನೂತನ ಶಬ್ದಗಳನ್ನೂ ಸೇರಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ನಿಘಂಟು ಹೊರತರಲು ಪ್ರಯತ್ನಿಸಲಾಗುವುದು ಎಂದರು.

beary_news_photo_6 beary_news_photo_7 beary_news_photo_8 beary_news_photo_9

ಬಳಿಕ ಅಕಾಡೆಮಿ ವತಿಯಿಂದ ಹೊರತರಲಾದ ಬೆಲ್ಕಿರಿ ವಿಶೇಷಾಂಕವನ್ನು ಹಾಜಿ ಇಬ್ರಾಹಿಂ ಕೋಡಿಜಾಲ್‌ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪತ್ರಕರ್ತ ಬಿ.ಎಂ. ಹನೀಫ್‌, ಅಖೀಲ ಭಾರತ ಬ್ಯಾರಿ ಪರಿಷತ್‌ನ ಗೌರವಾಧ್ಯಕ್ಷ ಅಬ್ದುಲ್‌ ಮಜೀದ್‌ ಸೂರಲ್ಪಾಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಯೂಸುಫ್‌ ವಕ್ತಾರ್‌ ಮೊದಲಾದವರು ಉಪಸ್ಥಿತರಿದ್ದರು.

ಅಕಾಡೆಮಿಯ ರಿಜಿಸ್ಟ್ರಾರ್‌ ಉಮರಬ್ಬ ಸ್ವಾಗತಿಸಿದರು. ಸದಸ್ಯ ಅಬ್ದುಲ್‌ ಹಮೀದ್‌ ಗೋಳ್ತಮಜಲು ನಿರೂಪಿಸಿ, ವಂದಿಸಿದರು.

Write A Comment