ಮಂಗಳೂರು, ಮಾ. 24: ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದಿಂದ ಉಂಟಾಗುತ್ತಿರುವ ತೀವ್ರ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಜೋಕಟ್ಟೆ ನಾಗರಿಕರು ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹೋರಾಟದ ಮುಂದುವರಿದ ಭಾಗವಾಗಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಇಂದು ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎದುರು ಭಿತ್ತಿಪತ್ರ ಚಳವಳಿಗೆ ಚಾಲನೆ ನೀಡಲಾಯಿತು.
ಮಂಡಳಿಯ ಆವರಣಗೋಡೆ, ಲಾರಿಗಳಿಗೆ ‘ಎಂಆರ್‌ಪಿಎಲ್ ಮಾಲಿನ್ಯ ಮುಚ್ಚಿ ಹಾಕುತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿಗೆ ಧಿಕ್ಕಾರ’, ‘ಮಾಲಿನ್ಯದ ಬಹಗ್ಗೆ ಕುರುಡಾಗಿರುವ ನಿಯಂತ್ರಣ ಮಂಡಳಿಗೆ ಧಿಕ್ಕಾರ’, ‘ಮಾಲಿನ್ಯ ನಿಯಂತ್ರಣ ಮಂಡಳಿ ಅಂದರೆ.. ಕೈಗಾರಿಕಾ ಮಾಲಿನ್ಯವನ್ನು ಮುಚ್ಚಿಹಾಕುವುದೇ?’, ‘ಪರಿಸರ ವಿರೋಧಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಜೋಕಟ್ಟೆ ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರಿಯಲಿದೆ…
ಎಂಆರ್‌ಪಿಎಲ್‌ನ ಕೋಕ್ ಮತ್ತು ಸಲ್ಫರ್ ಘಟಕದಿಂದಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಜಲಮಾಲಿನ್ಯದ ಹಲವಾರು ರೀತಿಯ ತೊಂದರೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜೋಕಟ್ಟೆ ನಾಗರಿಕರು ಕಳೆದ ಹಲವಾರು ಸಮಯದಿಂದ ನಡೆಸುತ್ತಿರುವ ಹೋರಾಟ ಮುಂದುವರಿಯಲಿದೆ. ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ನಡೆಯಲಿದೆ. ಹೋರಾಟದ ಮುಂದುವರಿದ ಭಾಗ ವಾಗಿ ಇದೀಗ ಭಿತ್ತಿಪತ್ರ ಚಳವಳಿಯನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಶವಯಾತ್ರೆಯೂ ನಡೆಯಲಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.