ಮಂಗಳೂರು, ಮಾ. 23 : ಮಂಗಳೂರು ವಿಮಾನ ನಿಲ್ದಾಣದಲ್ಲಿ ರದ್ದಾಗಿದ್ದ ರಾತ್ರಿ ವಿಮಾನ ನಿರ್ವಹಣೆ ಮೇ 1 ರಿಂದ ಪುನಃ ಆರಂಭವಾಗಲಿದೆ. ಆದ್ದರಿಂದ ಇನ್ನು ಮುಂದೆ ನಿಲ್ದಾಣ 24*7 ಕಾರ್ಯಾಚರಣೆ ನಡೆಸಲಿದೆ. ವಿಮಾನಗಳು ಲ್ಯಾಂಡಿಂಗ್ ಆದ ಬಳಿಕ ರನ್‌ವೇಯಿಂದ ಟರ್ಮಿನಲ್ ಕಟ್ಟಡದತ್ತ ಸಂಚರಿಸುವ ದ್ವಿತೀಯ ಸಮಾನಾಂತರ ಟ್ಯಾಕ್ಸಿವೇ ನಿರ್ಮಾಣ ಕಾಮಗಾರಿಗಾಗಿ ರಾತ್ರಿ ವಿಮಾನಗಳನ್ನು ನ.1ರಿಂದ ರದ್ದುಗೊಳಿಸಲಾಗಿತ್ತು.
ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ದ್ವಿತೀಯ ಸಮಾನಾಂತರ ಟ್ಯಾಕ್ಸಿವೇಯ ಒಳಭಾಗದ ಕಾಮಗಾರಿ ಏಪ್ರಿಲ್ 30ರೊಳಗೆ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಮುಗಿದ ಬಳಿಕ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 40 ವಿಮಾನಗಳ ನಿರ್ವಹಣೆ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸದ್ಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರತಿ ದಿನ 40ವಿಮಾನಗಳು ಹಾರಾಟ ನಡೆಸುತ್ತಿವೆ. ಶಾರ್ಜಾ, ದೋಹಾ, ಬೆಹರಿನ್, ಮಸ್ಕತ್, ಅಬುದಾಬಿ, ದಮಾಮ್ ಮುಂತಾದ ಸ್ಥಳಗಳಿಗೆ ವಿಮಾನ ಸೌಲಭ್ಯಗಳಿವೆ.
ಬಜಪೆ ಹಳೆ ವಿಮಾನ ನಿಲ್ದಾಣದಿಂದ ಕೆಂಜಾರಿನ ಹೊಸ ನಿಲ್ದಾಣದ ನಡುವೆ ಈಗಾಗಲೇ ಸುಮಾರು 250ಮೀ. ಉದ್ದದ ಒಂದು ಟ್ಯಾಕ್ಸಿ ವೇ ಇದೆ. ವಿಮಾನ ಲ್ಯಾಂಡಿಂಗ್ ಆದ ಬಳಿಕ ಟ್ಯಾಕ್ಸಿವೇ ಮೂಲಕ ಟರ್ಮಿನಲ್ ಕಟ್ಟಡದತ್ತ ವಿಮಾನ ಸಾಗುತ್ತದೆ. ವಿಮಾನ ನಿರ್ಗಮಿಸಲು ಕೂಡ ಅದೇ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ. ಒಂದೇ ಟ್ಯಾಕ್ಸಿವೇ ಇರುವುದರಿಂದ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಸುಮಾರು 15 ನಿಮಿಷ ಕಾಯಬೇಕಾಗುತ್ತದೆ. ಹೊಸ ಟ್ಯಾಕ್ಸಿವೇ ನಿರ್ಮಾಣ ಪೂರ್ಣಗೊಂಡರೆ ಪ್ರತಿ ಎರಡು ನಿಮಿಷಕ್ಕೊಂದು ವಿಮಾನ ಆಗಮನ-ನಿರ್ಗಮನ ಸಂಚಾರ ಸಾಧ್ಯವಾಗುತ್ತದೆ ಎಂದು ವಿಮಾನದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಹೇಳಿದ್ದಾರೆ
